ತುಕಾಲಿ ಸಂತೋಷ್ (Tukali Santhosh) ಬಿಗ್ಬಾಸ್ ಮನೆಯ ವಿದೂಷಕನಾಗಿ ಇಲ್ಲಿಯವರೆಗೆ ಕಾಣಿಸಿಕೊಂಡಿದ್ದಾರೆ. ನಗುತ್ತಾ, ನಗಿಸುತ್ತಾ, ಮನೆಯ ಇತರೆ ಸದಸ್ಯರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವರ್ತೂರು ಸಂತು ಬಳಿ ಹಂಚಿಕೊಳ್ಳುತ್ತಾ ಬೀನ್ ಬ್ಯಾಗ್ ಮೇಲೆ ಕೂತು ಕಮೆಂಟ್ ಮಾಡುತ್ತಾ ಫಿನಾಲೆ ವರೆಗೆ ಬಂದಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ತುಕಾಲಿ ಸಂತು ಭಾವುಕರಾಗಿದ್ದು ಕಡಿಮೆ. ಆದರೆ ಬುಧವಾರದ ಎಪಿಸೋಡ್ನಲ್ಲಿ ತಮ್ಮೊಟ್ಟಿಗೆ ತಾವೇ ಮಾತನಾಡುತ್ತಾ,ಜೀವನದ ಕಹಿ ಸತ್ಯವೊಂದನ್ನು ಒಪ್ಪಿಕೊಂಡು ಭಾವುಕರಾದರು.
ಕನ್ನಡಿಯ ಮುಂದೆ ಕೂತು, ತಮ್ಮೊಂದಿಗೆ ತಾವೇ ಮಾತನಾಡುವ ಚಟುವಟಿಕೆಯನ್ನು ಬಿಗ್ಬಾಸ್ ಕೊಟ್ಟಿದ್ದರು. ‘ನನ್ನಂಥಹಾ ಮಗ ನನ್ನ ತಾಯಿಗೆ ಹುಟ್ಟುಬಾರದಿತ್ತು. ನನ್ನ ತಾಯಿಯನ್ನು ನಾನು ಸರಿಯಾಗಿ ನೋಡಿಕೊಳ್ಳಲಿಲ್ಲ. ಚಿನ್ನದ ಬಳೆ ಕೊಡಿಸುತ್ತೀನಿ ಎಂದಿದ್ದೆ ಆದರೆ ಕೊಡಿಸಲಾಗಲಿಲ್ಲ. ತನ್ನ ಕೊನೆಯ ದಿನಗಳ ವರೆಗೆ ನನ್ನ ತಾಯಿ ಕೂಲಿ ಮಾಡುತ್ತಿದ್ದರು. ನಾನು ಊರು ಬಿಟ್ಟು ಬಂದ ಮೇಲೆ ಮೂರು ವರ್ಷ ಊರಿಗೆ ಹೋಗಿರಲಿಲ್ಲ. ವಾಪಸ್ ಹೋಗಿದ್ದು, ಅಮ್ಮನಿಗೆ ಆರೋಗ್ಯ ತೀರ ಗಂಭೀರವಾಗಿದ್ದಾಗಲೇ. ಆಗ ಏನೇನೋ ಪ್ರಯತ್ನ ಮಾಡಿದರೂ ಅಮ್ಮನನ್ನು ಉಳಿಸಿಕೊಳ್ಳಲಾಗಲಿಲ್ಲ.ನನ್ನ ಬಳಿ ಇದ್ದ ದುಡ್ಡಿನಲ್ಲಿ ಮೊದಲೇ ಅಮ್ಮನಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಿದ್ದರೆ ಉಳಿಸಿಕೊಳ್ಳಬಹುದಿತ್ತೇನೋ, ಅಮ್ಮನನ್ನು ಒಂದು ವಾರದ ಮಟ್ಟಿಗಾದರು ನನ್ನ ಬಳಿ ಇಟ್ಟುಕೊಂಡು ಸುಖವಾಗಿ ನೋಡಿಕೊಳ್ಳಬಹುದಿತ್ತು ನಾನು ಅದನ್ನೂ ಸಹ ಮಾಡಲಿಲ್ಲ’ ಎಂದು ಭಾವುಕರಾದರು ಸಂತು.
ಇದನ್ನೂ ಓದಿ:ತುಕಾಲಿ ಸಂತು ಮೇಲೆ ಪ್ರೀತಿ ಶುರುವಾಗಿರುವುದು ಯಾರಿಗೆ?
‘ನಾನು ಮಹಾನ್ ಜಿಪುಣ, ಎಂಥಹಾ ಜಿಪುಣ ಎಂದರೆ ನನ್ನ ಜಿಪುಣ ಬುದ್ಧಿಯ ಬಗ್ಗೆ ನನಗೇ ಒಮ್ಮೊಮ್ಮೆ ಬೇಸರವಾಗುತ್ತದೆ. ನನ್ನನ್ನು ನಾನೇ ಬೈದುಕೊಳ್ಳುತ್ತೇನೆ. ಅಯ್ಯೋ ಇಂದು ಹಣ ಖರ್ಚಾದರೆ ನಾಳೆಗೆ ಏನು ಮಾಡುವುದು? ನಾಳೆ ಜೀವನ ಹೇಗೆ ಎಂಬ ಭಯದಲ್ಲೇ ಬದುಕುತ್ತಾ ಬಂದಿದ್ದೇನೆ. ಸೊಸೈಟಿ ಅಕ್ಕಿ ಸಾಲ ಪಡೆದು ಜೀವನ ನಡೆಸಿದ್ದೇವೆ, ಬಡತನವನ್ನೇ ಹೆಚ್ಚು ನೋಡಿದ್ದೇನೆ. ಹಾಗಾಗಿ ನಾಳೆಯ ಭಯ ನನ್ನ ಮನದಲ್ಲಿ ಕೂತುಬಿಟ್ಟಿದೆ. ನಾಳೆಯ ಭಯದಿಂದಾಗಿ ಇಂದುಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಸಂತು.
ಪತ್ನಿಯನ್ನು ನೆನಪಿಸಿಕೊಂಡ ಸಂತು, ‘ಚಿನ್ನಿ ನಿನ್ನಂಥಹಾ ಪತ್ನಿ ಪಡೆಯಲು ನಾನು ಪುಣ್ಯ ಮಾಡಿದ್ದೆ. ನಿನ್ನ ಎಲ್ಲ ಆಸೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ. ಮುಂದುವರೆದು, ‘ಆರಂಭದಲ್ಲಿ ನನ್ನ ಮಾತುಗಳು ಮನೆಯ ಕೆಲವರಿಗೆ ಬೇಸರ ತರಿಸಿದೆ. ಒಂದು ಜೋಕ್ ಕೆಲವರ ಮನಸ್ಸಿಗೆ ಎಷ್ಟು ನೋವು ತರಿಸಬಹುದು ಎಂದು ಸುದೀಪ್ ಅವರು ಹೇಳಿದಾಗ ನನಗೆ ಮನದಟ್ಟಾಯ್ತು. ಅಂದು ನಾನು ಕುಸಿದು ಹೋಗಿದ್ದೆ. ಆ ನಂತರ ನಾನು ಮನೆಯವರ ಬಗ್ಗೆ ಮಾತನಾಡಲು ಆರಂಭಿಸಿದೆ. ಆಗ ನನ್ನನ್ನು ಫೇಕ್ ಎಂದು ಕರೆದರು. ಆದರೆ ನಾನು ಇಲ್ಲಿಯವರೆಗೆ ಬಂದಿದ್ದೇನೆ. ನಾನು ಫೇಕ್ ಅಲ್ಲ ರಿಯಲ್ ಎಂಬುದನ್ನು ಸಾಬೀತು ಮಾಡಿದ್ದೀನಿ’ ಎಂದರು ಸಂತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:16 am, Thu, 25 January 24