
ಎಲ್ಲಾ ವಾಹಿನಿಗಳೂ ವೀಕ್ಷಕರನ್ನು ಸೆಳೆದುಕೊಳ್ಳಲು ಹೊಸ ಹೊಸ ಕಾರ್ಯಕ್ರಮ ಮಾಡೋದು ಗೊತ್ತೇ ಇದೆ. ಈಗ ಉದಯ ವಾಹಿನಿಯಲ್ಲಿ (Udaya TV) ಇದೇ ಶನಿವಾರ ಮತ್ತು ಭಾನುವಾರ ಸಂಜೆ 6ಕ್ಕೆ ʼಉದಯ ಕನ್ನಡಿಗ-2025ʼ ಪುರಸ್ಕಾರ ಪ್ರಸಾರ ಕಾಣಲಿದೆ. ಝಗಮಗಿಸುವ ವೇದಿಕೆ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ ಎಂಬುದು ವಿಶೇಷ.
ವರ್ಣರಂಜಿತ ಡ್ಯಾನ್ಸ್ ಕಾರ್ಯಕ್ರಮಗಳ ಜೊತೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಡಾಲಿ ಧನಂಜಯ್, ಪ್ರಕಾಶ್ ರಾಜ್, ಹಿರಿಯ ನಟ ಶ್ರೀನಾಥ್, ಉಮಾಶ್ರೀ, ಸಾಧುಕೋಕಿಲ, ಸಾಹಿತಿ ಜೋಗಿ, ಕವಿ ಬಿ.ಆರ್.ಲಕ್ಷ್ಮಣರಾವ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವ ಕೆಲಸ ಇದರಲ್ಲಿ ಆಗಲಿದೆ.
ಗಾಯಕ ಸಂಜಿತ್ ಹೆಗ್ಡೆ, ಕಬ್ಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ, ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ, ಉದ್ಯಮಿ ಕಿಶೋರ್ ಕುಮಾರ್ ರೈ, ಪರಿಸರವಾದಿ ಶಿವಾನಂದ ಕಳವೆ, ಸುರಂಗ ಕೊರೆದು ನೀರು ಉಕ್ಕಿಸಿದ ಕೃಷಿಕ ಅಮೈ ಮಹಾಲಿಂಗ ನಾಯ್ಕ, ಐದು ರೂ.ವೈದ್ಯ ಎಂದೇ ಖ್ಯಾತರಾದ ಡಾ. ಶಂಕರೇ ಗೌಡ, ಪತ್ರಕರ್ತೆ ಶೋಭಾ ಮಳವಳ್ಳಿ, ಜಾನಪದ ಗಾಯಕ ಪದ್ಮಶ್ರೀ ವೆಂಕಟಪ್ಪ ಸುಗತೇಕರ್ ʻಉದಯ ಕನ್ನಡಿಗ – 2025ʼ ಪುರಸ್ಕಾರ ಸ್ವೀಕರಿಸಿದ ಸಾಧಕರ ಪಟ್ಟಿಯಲ್ಲಿ ಇದ್ದಾರೆ.
ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಕಲಾವಿದರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಬರಗೂರು ರಾಮಚಂದ್ರಪ್ಪ, ನಿರ್ಮಾಪಕ ಚಿನ್ನೇಗೌಡ, ಸಾ.ರಾ.ಗೋವಿಂದು, ನಟ ಶಶಿಕುಮಾರ್, ಓಂ ಸಾಯಿಪ್ರಕಾಶ್, ಕೆ. ಎಮ್. ಚೈತನ್ಯ, ಸಿಂಪಲ್ ಸುನಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಗಿರಿಜಾ ಲೋಕೇಶ್, ರಮೇಶ್ ಭಟ್, ಮಂಡ್ಯ ರಮೇಶ್, ರಾಗು ನಿಡುವಾಳ್, ಅರುಣ್ ಸಾಗರ್ ಅತಿಥಿಗಳಾಗಿ ಆಗಮಿಸಿದ್ದಾರೆ. ಇವರು ಸಾಧಕರಿಗೆ ʻಉದಯ ಕನ್ನಡಿಗʼ ಟ್ರೋಫಿ ನೀಡಿ ಗೌರವಿಸಲಿದ್ದಾರೆ.
ಇದನ್ನೂ ಓದಿ: ಧಮ್ಕಿಗಳಿಗೆ ಬಗ್ಗದೇ ‘ಸೂರ್ಯವಂಶ’ ಧಾರಾವಾಹಿ ಶುರು ಮಾಡಿದ ಅನಿರುದ್ಧ್; ಉದಯ ಟಿವಿಯಲ್ಲಿ ಪ್ರಸಾರ
ಶಿವರಾಜ್‌ಕುಮಾರ್ ಅವರು ಈ ಅವಾರ್ಡ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ಕನ್ನಡ ಚಿತ್ರೋದ್ಯಮಕ್ಕೆ ದಶಕಗಳಿಂದ ಬೆಂಬಲವಾಗಿರುವ ಉದಯ ಟಿವಿ ನೀಡಿದ ಈ ಪುರಸ್ಕಾರ ಅತ್ಯಂತ ಮಹತ್ವದ್ದು’ ಎದರು. ಶಿವಾನಂದ ಕಳವೆ ರಾಕಿಂಗ್ ಸ್ಟಾರ್ ಯಶ್ ಅವರ ʻಯಶೋಮಾರ್ಗʼದ ವಿವರ ನೀಡಿದರು. ವೇದಿಕೆ ಮೇಲೆ ರಚನಾ ಇಂದರ್, ನಿಧಿ ಸುಬ್ಬಯ್ಯ, ಮೋಕ್ಷಾ ಕುಶಾಲ್, ಅನುಷಾ ರೈ, ಅಂಕಿತಾ ಅಮರ್, ಪೃಥ್ವಿ ಅಂಬರ್ ಡ್ಯಾನ್ಸ್ ಮಾಡಿ ವೀಕ್ಷಕರನ್ನು ರಂಜಿಸಿದ್ದಾರೆ. ವಾಸುಕಿ ವೈಭವ್, ಅಲೋಕ್ ಬಾಬು ಕಂಠಸಿರಿ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:49 am, Fri, 23 January 26