ಗಿಲ್ಲಿಗೆ ಉಘೇ ಎಂದ ರಾಜಕೀಯ ನಾಯಕರು; ಒಬ್ಬರಾದ ಬಳಿಕ ಒಬ್ಬರ ಭೇಟಿ
ಕಿರುತೆರೆ ಕಲಾವಿದ ಗಿಲ್ಲಿಗೆ ರಾಜ್ಯದ ಪ್ರಮುಖ ರಾಜಕೀಯ ನಾಯಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಚ್‌ಡಿ ಕುಮಾರಸ್ವಾಮಿ, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಹಲವರು ಗಿಲ್ಲಿಯನ್ನು ಭೇಟಿ ಮಾಡಿ ಅಥವಾ ಕರೆ ಮಾಡಿ ಅಭಿನಂದಿಸಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳಿಗೆ ಸಿಗುವ ಈ ರೀತಿಯ ರಾಜಕೀಯ ಪ್ರೋತ್ಸಾಹ, ಕಿರುತೆರೆ ಕಲಾವಿದರಾದ ಗಿಲ್ಲಿಗೆ ಸಿಕ್ಕಿರುವುದು ವಿಶೇಷ.

ಸಿನಿಮಾ ರಂಗಕ್ಕೂ ರಾಜಕೀಯ ನಾಯಕರಿಗೂ ಒಂದು ನಂಟು ಇರುತ್ತದೆ. ಚುನಾವಣೆ ವೇಳೆ ಸಿನಿಮಾ ಸೆಲೆಬ್ರಿಟಿಗಳನ್ನು ಕರೆಸಿ ಪ್ರಚಾರ ಮಾಡಲಾಗುತ್ತದೆ. ಈ ಕಾರಣದಿಂದಲೇ ರಾಜಕೀಯ ನಾಯಕರು ಕಲಾವಿದರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರುತ್ತಾರೆ. ಆದರೆ, ಕಿರುತೆರೆ ಕಲಾವಿದರು ಹಾಗೂ ರಿಯಾಲಿಟಿ ಶೋ ಸ್ಪರ್ಧಿಗಳಿಗೆ ರಾಜಕೀಯ ನಾಯಕರ ಬೆಂಬಲ ಸಿಗೋದು ಕಡಿಮೆ. ಆದರೆ, ಗಿಲ್ಲಿ ನಟ (Gilli Nata) ಈ ವಿಷಯದಲ್ಲಿ ಭಿನ್ನ. ಅವರನ್ನು ವಿವಿಧ ಪಕ್ಷದ ನಾಯಕರು ಭೇಟಿ ಮಾಡಿದ್ದಾರೆ, ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.
ಗಿಲ್ಲಿ ನಟ ಅವರು ಗೆಲ್ಲಬೇಕು ಎಂದು ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಆಶಿಸಿದ್ದರು. ಗಿಲ್ಲಿಗೆ ಮತ ಹಾಕುವಂತೆ ಕೋರಿದ್ದರು. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಗಿಲ್ಲಿಗೆ ಅವರು ಕರೆ ಮಾಡಿ ಶುಭ ಕೋರಿದ್ದಾರೆ. ಇದು ಗಿಲ್ಲಿ ಖುಷಿಗೆ ಕಾರಣ ಆಗಿದೆ. ರಾಜಕೀಯ ನಾಯಕರು ಚುನಾವಣೆ ಬಂದಾಗ ಮತ ಹಾಕುವ ಬೇಡಿಕೆ ಇಡೋದು ಸಾಮಾನ್ಯ. ಆದರೆ, ಬಿಗ್ ಬಾಸ್ ಸ್ಪರ್ಧೆಗೆ ಅವರು ಮತ ಹಾಕುವಂತೆ ಕೇಳಿದ್ದು ವಿಶೇಷ.
ಸಿಎಂ ಸಿದ್ದರಾಮಯ್ಯ ಅವರನ್ನು ಗಿಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಗಿಲ್ಲಿ ಆಟವನ್ನು ಅವರು ಹೊಗಳಿದ್ದಾರೆ. ಸಿದ್ದರಾಮಯ್ಯ ಕುಟುಂಬದವರಿಗೆ ಗಿಲ್ಲಿ ಫೇವರಿಟ್ ಅಂತೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಗಿಲ್ಲಿಗೆ ವಿಶ್ ಮಾಡಿದ್ದಾರೆ. ‘ಚೆನ್ನಾಗಿ ಆಡಿದ್ದೀಯಾ,ಒಳ್ಳೆಯದಾಗಲಿ’ ಎಂದು ಕರೆ ಮಾಡಿ ಹಾರೈಸಿದರಂತೆ.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಗಿಲ್ಲಿಗೆ ಕರೆ ಮಾಡಿದ್ದಾರೆ. ‘ಹಳ್ಳಿ ಸೊಗಡಿನ ಹುಡುಗರು ಬೆಳೆಯುತ್ತಿರೋದು ಖುಷಿ ತಂದಿದೆ’ ಎಂದಿದ್ದಾರೆ. ಗಿಲ್ಲಿ ಗೆದ್ದಾಗ ಅವರು ಟ್ವೀಟ್ ಕೂಡ ಮಾಡಿದ್ದರು. ಸಿಪಿ ಯೋಗೇಶ್ವರ್, ರೇಣುಕಾಚಾರ್ಯ ಕೂಡ ಗಿಲ್ಲಿಗೆ ವಿಶ್ ಮಾಡಿದ್ದಾರೆ.
ಇದನ್ನೂ ಓದಿ: ಮೊದಲೇ ಗೆಲುವಿನ ಸೂಚನೆ ಕೊಟ್ಟಿದ್ದ ಸುದೀಪ್; ಗಿಲ್ಲಿ ಹೇಳಿದ್ದಿಷ್ಟು
ಈಗ ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರನ್ನು ಗಿಲ್ಲಿ ಭೇಟಿ ಮಾಡಿದ್ದಾರೆ. ಅವರು ಕೂಡ ಗಿಲ್ಲಿ ಗೆಲುವಿಗೆ ಶುಭ ಹಾರೈಸಿದ್ದಾರೆ. ಈ ಎಲ್ಲಾ ಕಾರಣಕ್ಕೆ ಗಿಲ್ಲಿಯ ಗೆಲುವಿನ ಖುಷಿ ದುಪ್ಪಟ್ಟಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




