ಹಳ್ಳಿಕಾರ್ ತಳಿ ಸಂರಕ್ಷಕನಾಗಿ ಗುರುತಿಸಿಕೊಂಡಿದ್ದ ವರ್ತೂರು ಸಂತೋಷ್ (Varthur Santhosh) ಬಿಗ್ಬಾಸ್ 10 ರ (Bigg Boss) ಸ್ಪರ್ಧಿಯಾಗಿ ಗಮನ ಸೆಳೆಯುತ್ತಿದ್ದಾರೆ. ಬಿಗ್ಬಾಸ್ ಮನೆ ಸೇರಿದ ಕೆಲವೇ ದಿನಗಳಲ್ಲಿ ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ಕೆಲ ದಿನ ಜೈಲು ವಾಸ ಅನುಭವಿಸಿದ ವರ್ತೂರು ಸಂತೋಷ್ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಮತ್ತೆ ಬಿಗ್ಬಾಸ್ ಮನೆ ಪ್ರವೇಶಿಸಿದ್ದರು. ಈಗ ಮತ್ತೊಮ್ಮೆ ಜೈಲು ಸೇರಿದ್ದಾರೆ. ಮಾತ್ರವಲ್ಲ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ ಸಹ.
ಬಿಗ್ಬಾಸ್ ಮನೆಯಲ್ಲಿಯೂ ಒಂದು ಜೈಲಿರುವ ಸಂಗತಿ ಗೊತ್ತಿರುವುದೇ. ಪ್ರತಿ ವಾರ ಒಬ್ಬ ಸ್ಪರ್ಧಿಯನ್ನು ಜೈಲಿಗೆ ಹಾಕಲಾಗುತ್ತದೆ. ಆ ವಾರ ಯಾವ ಸ್ಪರ್ಧಿ ಕಳಪೆ ಪ್ರದರ್ಶನ ನೀಡಿರುತ್ತಾನೆಯೋ ಅಂಥಹವನ್ನು ಮನೆಯ ಸ್ಪರ್ಧಿಗಳು ಒಮ್ಮತದಿಂದ ಕಳಪೆ ಎಂದು ಹೆಸರಿಸಿ ಮನೆಯ ಒಳಗೆ ಇರುವ ಜೈಲಿನಲ್ಲಿ ಇರಿಸಲಾಗುತ್ತದೆ. ಹಾಗೆಯೇ ಈ ವಾರ ಮನೆಯ ಸದಸ್ಯರು ಹಲವರು ವರ್ತೂರು ಸಂತೋಷ್ ಅನ್ನು ಕಳಪೆ ಎಂದು ನಿರ್ಧರಿಸಿ ಅವರನ್ನು ಕ್ಯಾಪ್ಟನ್ ಕಾರ್ತಿಕ್ ಜೈಲಿಗೆ ಹಾಕಿದ್ದಾರೆ.
ಬಿಗ್ಬಾಸ್ನ ಇತರೆ ಸ್ಪರ್ಧಿಗಳು ವರ್ತೂರು ಸಂತೋಷ್ ಅವರನ್ನು ಕಳಪೆ ಎಂದು ತೀರ್ಮಾನಿಸಿ, ಅವರಿಗೆ ಜೈಲು ಉಡುಗೆ ನೀಡಿದ್ದಾರೆ. ಈ ಸಮಯದಲ್ಲಿ ಮಾತನಾಡಿರುವ ವರ್ತೂರು ಸಂತೋಷ್, ಕಳಪೆ ಮಾತ್ರವಲ್ಲ, ವಿಷಕಾರಿ ಎಂದು ಬೇಕಾದರೂ ನನ್ನನ್ನು ಕರೆಯಿರಿ ನನ್ನ ವ್ಯಕ್ತಿತ್ವ ಎಂಥಹದ್ದು ಎಂಬುದು ನನಗೆ ಗೊತ್ತು ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಮುಂದುವರೆದು ಇಲ್ಲೆಲ್ಲ ನಡೆಯುವುದು ನರಿ ಸಂಚು ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಸಹ.
ಇದನ್ನೂ ಓದಿ:ಕಾಗೆ-ಕೋಗಿಲೆ ಕಥೆ ಹೇಳಿದ ವರ್ತೂರು ಸಂತೋಷ್; ಇಲ್ಲಿ ಕಾಗೆ ಯಾರು, ಕೋಗಿಲೆ ಯಾರು?
ಇದೆಲ್ಲ ಆಗಿ ವರ್ತೂರು ಸಂತೋಷ್ ಅವರನ್ನು ಜೈಲಿಗೆ ಹಾಕಲಾಗಿದೆ. ಜೈಲಿನ ಹೊರಗೆ ಕುಳಿತಿದ್ದ ತುಕಾಲಿ ಸಂತು ಬಳಿ ಮಾತನಾಡುತ್ತಾ, ಈ ವರೆಗೆ ಯಾರೂ ಜೈಲಿನಿಂದ ಹೊರಗೆ ಬಂದಿಲ್ಲ ಅಲ್ಲವಾ? ಎಂದು ವರ್ತೂರು ಪ್ರಶ್ನೆ ಮಾಡಿದ್ದಾರೆ. ಆಗ ತುಕಾಲಿ, ಈವರೆಗೆ ಯಾರೂ ಬಂದಿಲ್ಲ, ಬಂದು ಬಿಡಣ್ಣ ನೋಡೋಣ ಎಂದು ತುಕಾಲಿ, ವರ್ತೂರು ಸಂತುಗೆ ಗುರಿದುಂಬಿಸಿದ್ದಾರೆ. ಕೂಡಲೇ ವರ್ತೂರು ಸಂತೋಷ್, ಜೈಲಿನ ಸರಳುಗಳ ಮಧ್ಯದಿಂದ ತೂರಿಕೊಂಡು ಹೊರಗೆ ಬಂದಿದ್ದಾರೆ.
ಸದ್ಯಕ್ಕೆ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ವರ್ತೂರು ಸಂತೋಷ್ ಜೈಲಿನಿಂದ ತಪ್ಪಿಸಿಕೊಂಡಿರುವುದನ್ನು ಮಾತ್ರವೇ ತೋರಿಸಲಾಗಿದೆ. ಜೈಲಿನಿಂದ ತಪ್ಪಿಸಿಕೊಂಡಿರುವ ವರ್ತೂರು ಮುಂದೇನು ಮಾಡಿದರು. ವರ್ತೂರು ಅವರ ಈ ಕೃತ್ಯಕ್ಕೆ ಮನೆಯ ಸ್ಪರ್ಧಿಗಳು ಹೇಗೆ ಸ್ಪಂದಿಸಿದರು ಇತ್ಯಾದಿಗಳು ಇಂದು (ಶುಕ್ರವಾರ) ರಾತ್ರಿ ಎಪಿಸೋಡ್ನಲ್ಲಿ ಗೊತ್ತಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ