ಡಿಕೆ ಶಿವಕುಮಾರ್ ಅತಿಯಾಗಿ ನಂಬುವ ದ್ವಾರಕಾನಾಥ್ ಯಾರು? ಅವರ ಹಿನ್ನೆಲೆ ಏನು?
DK Shivakumar Astrologer: ಜ್ಯೋತಿಷ್ಯವನ್ನು ಡಿಕೆ ಶಿವಕುಮಾರ್ ಅತಿಯಾಗಿ ನಂಬುತ್ತಾರೆ. ಅದರಲ್ಲಿಯೂ ಜ್ಯೋತಿಷಿ ದ್ವಾರಕಾನಾಥ್ರ ಮಾತೆಂದರೆ ವೇದವಾಕ್ಯ. ಅಂದಹಾಗೆ ಯಾರು ಈ ಜ್ಯೋತಿಷಿ ದ್ವಾರಕಾನಾಥ್? ಇವರ ಹಿನ್ನೆಲೆ ಏನು? ಇಲ್ಲಿದೆ ಪೂರ್ಣ ಮಾಹಿತಿ.
ವೀಕೆಂಡ್ ವಿತ್ ರಮೇಶ್ಗೆ (Weekend With Ramesh) ಅತಿಥಿಯಾಗಿ ಆಗಮಿಸಿದ್ದ ಡಿಕೆ ಶಿವಕುಮಾರ್ (DK Shivakumar) ಬಗ್ಗೆ ಅವರ ಆಪ್ತರು, ಕುಟುಂಬ ಸದಸ್ಯರೆಲ್ಲರೂ ಡಿಕೆಶಿ ಒಬ್ಬ ಶ್ರಮಜೀವಿ, ಹಠವಾದಿ, ಕನಸು ಕಂಡು ಅದನ್ನು ಸಾಧಿಸಲು ಪ್ರಯತ್ನ ಪಟ್ಟವರು ಎಂದರು. ಆದರೆ ಅವರ ಸಹೋದರಿ ಮಾತ್ರ ಡಿಕೆಶಿ ಬಗ್ಗೆ ಅಪರೂಪದ ಸಂಗತಿಯೊಂದನ್ನು ಹೇಳಿದರು. ಅದುವೇ ಡಿಕೆಶಿಗೆ ಜ್ಯೋತಿಷ್ಯದ ಮೇಲಿರುವ ಅಪಾರ ನಂಬಿಕೆ. ಎಪಿಸೋಡ್ ಮುಂದುವರೆದಂತೆ ಡಿಕೆಶಿ ಸಹ ತಾವು ಜ್ಯೋತಿಷ್ಯವನ್ನು ನಂಬುವುದಾಗಿಯೂ, ಜ್ಯೋತಿಷಿಗಳು ಹೇಳಿರುವುದು ತಮ್ಮ ಜೀವನದಲ್ಲಿ ಸಾಕಷ್ಟು ನಡೆದಿದೆ ಎಂದು ಸಹ ಹೇಳಿದರು. ಕೆಲವು ಘಟನೆಗಳ ಉಲ್ಲೇಖ ಸಹ ಮಾಡಿದರು.
ಡಿ.ಕೆ.ಶಿವಕುಮಾರ್ ಸಹೋದರಿ ಹೇಳಿದಂತೆ, ಸಣ್ಣ ವಯಸ್ಸಿನಿಂದಲೂ ಡಿ.ಕೆ.ಶಿವಕುಮಾರ್ಗೆ ಭವಿಷ್ಯ ಕೇಳುವ ಅಭ್ಯಾಸ ಇತ್ತಂತೆ. ಯಾರೇ ಜ್ಯೋತಿಷಿಗಳು ಕಂಡರು ಭವಿಷ್ಯ ಕೇಳುತ್ತಿದ್ದರಂತೆ. ತಾವು ದೊಡ್ಡವ್ಯಕ್ತಿ ಆಗಬೇಕೆಂಬ ಹಂಬಲಿಂದಲೇ ಅವರು ಹೀಗೆ ಮಾಡುತ್ತಿದ್ದರಂತೆ. ಆ ನಂತರ ಡಿಕೆ ಶಿವಕುಮಾರ್ ತಮ್ಮ ಗುರುಗಳಾದ ದ್ವಾರಕನಾಥ್ ಅವರ ಬಗ್ಗೆ ಮಾತನಾಡಿ, ನಾನು ಇಂಥಹದೇ ವಯಸ್ಸಿನಲ್ಲಿ ಶಾಸಕನಾಗುತ್ತೀನಿ, ಮಂತ್ರಿ ಆಗುತ್ತೀನಿ, ಆ ನಂತರ ನನಗೆ ಟಿಕೆಟ್ ಸಿಗುವುದಿಲ್ಲ ಹೀಗೆ ಹಲವು ವಿಷಯಗಳನ್ನು ದ್ವಾರಕಾನಾಥ್ ಅವರು ಹೇಳಿದ್ದರು ಎಂದರು. ದ್ವಾರಕಾನಾಥ್ ಡಿಕೆಶಿ ಬಹುವಾಗಿ ನಂಬುವ ಜ್ಯೋತಿಷಿ. ಗುಂಡೂರಾಯರಿಗೆ ಸಹ ದ್ವಾರಕಾನಾಥ್ ಅವರೇ ಜ್ಯೋತಿಷಿ ಆಗಿದ್ದರಂತೆ.
ದ್ವಾರಕಾನಾಥ್ ಅವರು ಕರ್ನಾಟಕದ ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ಪ್ರಭಾವಿ ಜ್ಯೋತಿಷಿ. ರಾಜ್ಯ ಹಾಗೂ ರಾಷ್ಟ್ರದ ಹಲವು ಪ್ರಭಾವಿ ರಾಜಕಾರಣಿಗಳು, ಸಿಎಂ, ಪಿಎಂ ಅವರುಗಳು ದ್ವಾರಕಾನಾಥ್ ಅವರನ್ನು ಭೇಟಿಯಾಗಿ ಭವಿಷ್ಯ ಕೇಳಿದ್ದಾರೆ. ಅದರಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ದೇವೇಗೌಡ, ದೇವರಾಜ್ ಅರಸು, ಗುಂಡೂರಾವ್, ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್, ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್, ಮಹಾರಾಷ್ಟ್ರ ಮಾಜಿ ಸಿಎಂ ವಿಲಾಸ್ ರಾವ್ ದೇಶ್‍ಮುಖ್, ಎಸ್‍ಬಿ ಚವ್ಹಾಣ್, ಆಂಧ್ರ ಮಾಜಿ ಮುಖ್ಯಮಂತ್ರಿ, ದಿವಂಗತ ವೈಎಸ್ ರಾಜಶೇಖರ ರೆಡ್ಡಿ, ವಿಜಯ ಭಾಸ್ಕರ್ ರೆಡ್ಡಿ, ಮಾಜಿ ಸಿಎಂ ಧರಂ ಸಿಂಗ್, ಮಾಜಿ ಸಿಎಂ ಎಸ್‍ಎಂ ಕೃಷ್ಣ, ನಫೀಜ್ ಪಾಜಲ್, ಪ್ರೊ. ಬಿಕೆ ಚಂದ್ರಶೇಖರ್, ಉದ್ಯಮಿ ಅನಿಲ್ ಅಂಬಾನಿ, ಬಾಲಿವುಡ್ ನಟ-ನಟಿಯರು ದ್ವಾರಕನಾಥ್ ಬಳಿ ಜ್ಯೋತಿಷ್ಯ ಕೇಳಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಗೆದ್ದಾಗ ಇಡೀ ಮೆಜೆಸ್ಟಿಕ್ ಬಂದ್, ರೂಂಗೆ ಬರುತ್ತಿದ್ದು ಬಕೆಟ್ಗಟ್ಟಲೆ ಆಹಾರ
ದ್ವಾರಕಾನಾಥ್ ತಂದೆ ಹೆಸರಾಂತ ಜ್ಯೋತಿಷಿ ಬೆಳ್ಳೂರು ಶಂಕರನಾರಾಯಣ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ತಂದೆ ವಾಸವಿದ್ದ ಮನೆಯ ರಸ್ತೆಗೆ ಬಿ.ಎಸ್.ಶಂಕರನಾರಾಯಣ ರಸ್ತೆ ಅಂತ ನಾಮಕರಣ ಸಹ ಮಾಡಿಸಿದ್ದಾರೆ. ಈ ನಾಮಕರಣ ಕಾರ್ಯಕ್ರಮಕ್ಕೆ ಧರಂ ಸಿಂಗ್, ವಿಲಾಸ್‍ರಾವ್ ದೇಶ್‍ಮುಖ್, ಸುಶೀಲ್‍ಕುಮಾರ್ ಶಿಂಧೆ, ನಟವರ್ ಸಿಂಗ್ ಭಾಗವಹಿಸಿದ್ದರು. ಇಬ್ಬರು ಮಕ್ಕಳಿದ್ದು ಇಬ್ಬರೂ ಸಹ ವೈದ್ಯರೇ ಆಗಿದ್ದಾರೆ.
ಜ್ಯೋತಿಷಿ ಆಗುವ ಮುನ್ನ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಕ್ಲರ್ಕ್ ಆಗಿ ದ್ವಾರಕಾನಾಥ್ ಕೆಲಸ ಮಾಡುತ್ತಿದ್ದರು. ಅವ್ಯವಹಾರ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಆದರೆ ಕೋರ್ಟ್ ನಲ್ಲಿ ಸರ್ಕಾರದ ವಿರುದ್ಧ ಹೋರಾಡಿ ದೋಷಮುಕ್ತರಾದ ಬಳಿಕ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಜ್ಯೋತಿಷ್ಯ ವೃತ್ತಿಗಿಳಿದರು.
ಡಿಕೆ ಶಿವಕುಮಾರ್, ವಿದ್ಯಾರ್ಥಿಯಾಗಿದ್ದಾಗಿನಿಂದಲೂ ದ್ವಾರಕಾನಾಥ್ಗೆ ಆಪ್ತರು. ಆಗಲೇ ಅವರ ಸೋಲು-ಗೆಲುವು, ಮಂತ್ರಿಗಿರಿ ಎಲ್ಲವನ್ನೂ ನಿಖರವಾಗಿ ದ್ವಾರಕಾನಾಥ್ ಹೇಳಿಬಿಟ್ಟಿದ್ದರಂತೆ. ಅವರು ಹೇಳಿದಂತೆಯೇ ಡಿ.ಕೆ.ಶಿವಕುಮಾರ್ ಜೀವನದಲ್ಲಿ ನಡೆದಿದೆಯಂತೆ. ಹೀಗೆಂದು ಸ್ವತಃ ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ಗೆ ಟಿಕೆಟ್ ಸಿಗಲು, ಮಂತ್ರಿಗಿರಿ ಸಿಗಲು ದ್ವಾರಕಾನಾಥ್ ಸಹಾಯ ಮಾಡಿದ್ದಾರೆ ಎಂಬ ಮಾತುಗಳು ಸಹ ಇವೆ.
ದ್ವಾರಕಾನಾಥ್ ಕೆಲವು ವಿವಾದಗಳಲ್ಲಿಯೂ ಸಿಲುಕಿಕೊಂಡಿದ್ದಾರೆ. ದ್ವಾರಕಾನಾಥ್ ಮನೆಯಲ್ಲಿಯೇ ಮಾಜಿ ಸಿಎಂ ದೇವರಾಜ್ ಅರಸು ನಿಧನರಾಗಿದ್ದರು. ಆಗ ಅರಸು ಕುಟುಂಬಸ್ಥರು ದ್ವಾರಕಾನಾಥ್ ವಿರುದ್ಧ ಆರೋಪ ಮಾಡಿ ತನಿಖೆಗೆ ಆಗ್ರಹಿಸಿದ್ದರು. ಆದರೆ ಆಗಲೇ ಪ್ರಭಾವಿ ಜ್ಯೋತಿಷಿ ಆಗಿದ್ದ ದ್ವಾರಕಾನಾಥ್ ಅವರು ಹೇಗೋ ಪ್ರಕರಣದಿಂದ ಹೊರಬಂದರು. ಅದಾದ ಬಳಿಕ ರಾಜೀವ್ ಗಾಂಧಿ ಆರೋಗ್ಯ ವಿವಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇವರು ಸಿಬಿಐ ತನಿಖೆ ಎದುರಿಸಿದರು. ತಮ್ಮ ಮಗಳಿಗಾಗಿ ತಮ್ಮ ಆಪ್ತರನ್ನೇ ವಿವಿಯ ಉಪಕುಲಪತಿ ಮಾಡಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಹೋದರನಿಗೆ ಪ್ರಭಾವಿ ಹುದ್ದೆ ಕೊಡಿಸಲು ಲಾಭಿ ಮಾಡಿದ ಆರೋಪವೂ ಇವರ ಮೇಲೆ ಬಂದಿತ್ತು. ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ ನಡೆದಾಗ ದ್ವಾರಕಾನಾಥ್ ಅವರ ಮನೆಯ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಣ, ಆಸ್ತಿ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ಆದರೆ, ದ್ವಾರಕಾನಾಥ್ ಅವರು ತಮ್ಮ ನಿಖರ ಭವಿಷ್ಯದಿಂದಾಗಿ ರಾಜಕೀಯದಲ್ಲಿ ಭಾರಿ ದೊಡ್ಡ ಹೆಸರು ಮಾಡಿದ್ದಾರೆ. ದೇವರಾಜ್ ಅರಸು ಅವರಿಗೆ ಆಪ್ತರಾಗಿದ್ದ ದ್ವಾರಕಾನಾಥ್ ಆ ಬಳಿಕ ಇಂದಿರಾ ಗಾಂಧಿ ಅವರಿಗೆ ಭವಿಷ್ಯ ನುಡಿದು ಹಲವು ಕಾಂಗ್ರೆಸ್ಸಿಗರಿಗೆ ಆಪ್ತರಾದರು. ದೆಹಲಿ ವರೆಗೆ ತಮ್ಮ ಸಂಪರ್ಕ ವಿಸ್ತರಿಸಿಕೊಂಡರು. 2014ಕ್ಕೆ ಮುನ್ನ ವಿದೇಶಿ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಬಿಜೆಪಿ ಭಾರಿ ಬಹುಮತದಿಂದ ಗೆದ್ದು ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆಂದು, ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತದೆಂದು ಭವಿಷ್ಯ ನುಡಿದಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿಯೇ ತೀರುತ್ತಾರೆ ಎಂಬ ಭವಿಷ್ಯ ನುಡಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ