
ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗಿ ವಾರವಾಗಿದ್ದು, ಶೋ ಎರಡನೇ ವಾರಕ್ಕೆ ಕಾಲಿರಿಸಿದೆ. ಕಳೆದ ಭಾನುವಾರದ ಎಪಿಸೋಡ್ನಲ್ಲಿ ಪ್ರಥಮಾ ಪ್ರಸಾದ್ ಮೊದಲ ಸ್ಪರ್ಧಿಯಾಗಿ ಎವಿಕ್ಟ್ ಆಗಿದ್ದಾರೆ. ಆದರೆ ಅಚಾನಕ್ಕಾಗಿ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಮನೆಯಿಂದ ಹೊರ ಬಂದಿದ್ದಾರೆ. ಓಂ ಪ್ರಕಾಶ್ ಅವರು ಇದ್ದ ಅಲ್ಪ ಸಮಯದಲ್ಲಿಯೇ ಒಳ್ಳೆ ಮನರಂಜನೆ ಕೊಟ್ಟಿದ್ದರು. ಪ್ರೇಕ್ಷಕರಿಗೆ ಅವರ ಮೇಲೆ ನಿರೀಕ್ಷೆ ಇತ್ತು. ಆದರೆ ಅವರು ಅನಾರೋಗ್ಯದ ಕಾರಣ ನೀಡಿ ಶೋನಿಂದ ಹೊರಗೆ ಬಂದಿದ್ದಾರೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಓಂ ಪ್ರಕಾಶ್ ರಾವ್ ಮತ್ತೆ ಶೋಗೆ ಹೋಗುವ ಉದ್ದೇಶದ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಅನಾರೋಗ್ಯದ ಬಗ್ಗೆ ಪೂರ್ಣ ವಿವಿರ ನೀಡಿರುವ ಓಂ ಪ್ರಕಾಶ್ ರಾವ್, ‘ನನಗೆ ಮೊದಲಿನಿಂದಲೂ ಶುಗರ್ ಮತ್ತು ಬಿಪಿ ಇತ್ತು. ನನ್ನ ವೈದ್ಯಕೀಯ ವರದಿಗಳನ್ನು ಶೋನವರಿಗೆ ನೀಡಿದ್ದೆ. ಮನೆಗೆ ಹೋದಾಗ ಏನೂ ಸಮಸ್ಯೆ ಇರಲಿಲ್ಲ ಆದರೆ ಬರ ಬರುತ್ತಾ ಕಾಲು ನೋವು ಶುರುವಾಯ್ತು. ಕಾಲು ನೋವಿನ ಸಮಸ್ಯೆಯೂ ಸಹ ನನಗೆ ಮೊದಲಿನಿಂದಲೂ ಇರುವಂಥಹದ್ದೇ. ಆದರೆ ಶುಕ್ರವಾರದ ವೇಳೆಗೆ ಅದು ಹೆಚ್ಚಾಯ್ತು’ ಎಂದಿದ್ದಾರೆ ಓಂ ಪ್ರಕಾಶ್ ರಾವ್.
‘ಆದರೆ ಶನಿವಾರ ಸುದೀಪ್ ಅವರು ಬರುತ್ತಾರೆ, ಅವರ ಶೋ ನಾನು ಮಿಸ್ ಮಾಡಿಕೊಳ್ಳಬಾರದು ಎಂಬ ಏಕೈಕ ಕಾರಣಕ್ಕೆ ನಾನು ಶೋನಲ್ಲಿ ಉಳಿದುಕೊಂಡೆ. ಶನಿವಾರದ ವೇಳೆ ನನಗೆ ಕಾಲು ನೋವು ಮತ್ತು ಊತ ಎರಡೂ ಹೆಚ್ಚಾಗಿತ್ತು. ಬಹಳ ತಡೆದುಕೊಂಡಿದ್ದೆ. ಆದರೆ ಆ ಬಳಿಕ ನನ್ನಿಂದ ಇರಲು ಆಗಲಿಲ್ಲ. ನಾನು ಬಿಗ್ಬಾಸ್ ನವರಿಗೆ ಹೇಳಿದೆ. ಅವರೂ ಬಂದು ಪರೀಕ್ಷಿಸಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಮೊದಲಿಗೆ ಅಲ್ಲೇ ಒಂದು ದಿನ ಚಿಕಿತ್ಸೆ ನೀಡಿದರು. ಚೆನ್ನಾಗಿಯೇ ಆರೈಕೆ ಮಾಡಿದರು. ಆದರೆ ನಾವು ನಮ್ಮ ಕುಟುಂಬ ವೈದ್ಯರ ಸಲಹೆ ಪಡೆದು ನಮ್ಮ ಅನುಕೂಲದ ಆಸ್ಪತ್ರೆಗೆ ದಾಖಲಾದೆವು’ ಎಂದಿದ್ದಾರೆ.
ಇದನ್ನೂ ಓದಿ:ಬಡ ಕುಟುಂಬಗಳಿಗೆ ದಿನಸಿ ದಾನ ಮಾಡಿದ ಬಿಗ್ಬಾಸ್ ಜಾನ್ಹವಿ: ವಿಡಿಯೋ
ಬಿಗ್ಬಾಸ್ ಶೋಗೆ ಮತ್ತೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಓಂ ಪ್ರಕಾಶ್ ರಾವ್, ‘ನಾನು ಗೆಲ್ಲಬೇಕೆಂದು ಶೋಗೆ ಹೋಗಿರಲಿಲ್ಲ. ಒಪ್ಪಂದದ ಪ್ರಕಾರ ವಾರದ ಸಂಭಾವನೆ ಕೊಟ್ಟರೆ ಸಾಕಿತ್ತು. ಗೆಲುವಿಗಾಗಿ ಕಿತ್ತಾಡುವ ವ್ಯಕ್ತಿಯೂ ನಾನಲ್ಲ. ಆದರೆ ಅನಾರೋಗ್ಯದಿಂದ ಈಗ ಹೊರಗೆ ಬಂದಿದ್ದೇನೆ. ಮತ್ತೆ ಒಳಗೆ ಹೋಗುವ ಬಗ್ಗೆ ಇನ್ನೂ ಯೋಚಿಸಿಲ್ಲ. ವೈದ್ಯರು 15 ದಿನಗಳ ಕಡ್ಡಾಯ ವಿಶ್ರಾಂತಿ ಸೂಚಿಸಿದ್ದಾರೆ. 15 ದಿನಗಳ ಬಳಿಕ ನಾನು ಹೇಗೆ ಗುಣ ಹೊಂದಿದ್ದೀನಿ ಎಂದು ನೋಡಿಕೊಂಡು ನಿರ್ಧಾರ ಮಾಡುತ್ತೇನೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 pm, Tue, 15 September 26