ಜೀ ಕನ್ನಡ (Zee Kannada) ವಾಹಿನಿಯಲ್ಲಿ ಹಲವು ಸೀರಿಯಲ್ಗಳು ಫೇಮಸ್ ಆಗಿವೆ. ಆ ಪೈಕಿ ‘ಪಾರು’ ಸೀರಿಯಲ್ (, Paaru Kannada Serial) ಕೂಡ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತ ಮುನ್ನುಗ್ಗುತ್ತಿದೆ. ಕಥೆಯಲ್ಲಿ ಹೊಸ ಹೊಸ ಟ್ವಿಸ್ಟ್ಗಳನ್ನು ನೀಡುತ್ತ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಟಿಆರ್ಪಿ ರೇಸ್ನಲ್ಲಿ ಪ್ರತಿವಾರ ‘ಪಾರು’ ಸಖತ್ ಪೈಪೋಟಿ ನೀಡುತ್ತದೆ. ಮೋಕ್ಷಿತಾ ಪೈ (Mokshita Pai), ವಿನಯಾ ಪ್ರಸಾದ್, ಎಸ್. ನಾರಾಯಣ್ ಮುಂತಾದ ಕಲಾವಿದರು ಉತ್ತಮ ಅಭಿನಯದಿಂದ ಜನರ ಮನ ಗೆದ್ದಿದ್ದಾರೆ. ಜೀ ಕನ್ನಡ ವಾಹಿನಿಯನ್ನು ನಂ.1 ಪಟ್ಟಕ್ಕೆ ಏರಿಸುವಲ್ಲಿ ಈ ಸೀರಿಯಲ್ ಕೊಡುಗೆ ಕೂಡ ಇದೆ. ಇಷ್ಟೆಲ್ಲ ಪ್ರಾಮುಖ್ಯತೆ ಇರುವ ‘ಪಾರು’ ಧಾರಾವಾಹಿಯಲ್ಲಿ ಈಗೊಂದು ಚಿಕ್ಕ ಬದಲಾವಣೆ ಆಗುತ್ತಿದೆ. ಪ್ರಸಾರದ ಸಮಯದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಇಷ್ಟು ದಿನ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಬಿತ್ತರ ಆಗುತ್ತಿದ್ದ ಈ ಧಾರಾವಾಹಿ ಇನ್ಮುಂದೆ ಒಂದು ಗಂಟೆ ಮೊದಲೇ ವೀಕ್ಷಕರಿಗೆ ಲಭ್ಯವಾಗಲಿದೆ. ಅಂದರೆ, ಸಂಜೆ 6.30ಕ್ಕೆ ‘ಪಾರು’ ಪ್ರಸಾರ ಆಗಲಿದೆ.
ಕಿರುತೆರೆ ಕಾರ್ಯಕ್ರಮಗಳ ಪ್ರಸಾರದ ಸಮಯ ಬದಲಾದಾಗ ವೀಕ್ಷಕರ ಸಂಖ್ಯೆಯಲ್ಲೂ ಏರುಪೇರು ಆಗುವ ಸಾಧ್ಯತೆ ಇರುತ್ತದೆ. ಆ ಸವಾಲನ್ನು ಸ್ವೀಕರಿಸಲು ‘ಪಾರು’ ಸಜ್ಜಾಗಿದೆ. ಬದಲಾದ ಸಮಯದಲ್ಲಿ ಪ್ರಸಾರವಾಗುವುದರಿಂದ ಟಿಆರ್ಪಿ ರೇಸ್ನಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ. ಈ ಧಾರಾವಾಹಿ ಅತ್ಯುತ್ತಮ ತಾರಾಗಣ, ರೋಚಕ ತಿರುವುಗಳಿಂದ ವೀಕ್ಷಕರನ್ನು ನಿರಂತರವಾಗಿ ರಂಜಿಸುತ್ತಿದೆ.
ಹಿರಿಯ ನಟಿ ವಿನಯಾ ಪ್ರಸಾದ್ ಅವರು ಅಖಿಲಾಂಡೇಶ್ವರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತ ಜನಮನ ಗೆದ್ದಿದ್ದಾರೆ. ಎಸ್. ನಾರಾಯಣ್ ಅವರು ವೀರಯ್ಯದೇವ ಎಂಬ ಗತ್ತಿನ ಪಾತ್ರದ ಮೂಲಕ ಛಾಪು ಮೂಡಿಸಿದ್ದಾರೆ. ಇದೀಗ ಇವರಿಬ್ಬರೂ ಮುಖಾಮುಖಿಯಾಗುವ ಸನ್ನಿವೇಶಗಳು, ಇಬ್ಬರೂ ಅವರವರ ಪಾತ್ರಗಳನ್ನು ನಿರ್ವಹಿಸುತ್ತಿರುವ ರೀತಿಗೆ ನೋಡುಗರಿಂದ ಚಪ್ಪಾಳೆ ಸಿಗುತ್ತಿದೆ. ಇಂಥ ಅನುಭವಿ ಕಲಾವಿದರಿಂದಾಗಿ ‘ಪಾರು’ ಧಾರಾವಾಹಿಯ ಘನತೆ ಹೆಚ್ಚಿದೆ.
ಅರಸನಕೋಟೆಯನ್ನು ಆಳುವ ಅರಸಿಯಷ್ಟೇ ಅಲ್ಲದೆ ಪ್ರೀತಿ ತುಂಬಿದ ಅಮ್ಮನಾಗಿ ಅಖಿಲಾಂಡೇಶ್ವರಿ, ತಾಯಿ ಪ್ರೀತಿಯನ್ನೇ ಕಾಣದ ಮಕ್ಕಳಿಗೆ ತಾನೇ ಎಲ್ಲವೂ ಆಗಿರುವ ಹನುಮಂತು, ಸದಾ ಬಡವರ ನೋವು ನಲಿವುಗಳಿಗೆ ಸ್ಪಂದಿಸುತ್ತ ನೊಂದವರ ಪಾಲಿನ ಭರವಸೆಯಾಗಿರುವ ವೀರಯ್ಯದೇವ, ಒಳ್ಳೆಯ ಗುಣಗಳೊಂದಿಗೆ ಸದಾ ಎಲ್ಲರಿಗೂ ಒಳಿತನ್ನೇ ಬಯಸುವ ಆದಿ ಮತ್ತು ಪಾರು ಇವರೆಲ್ಲರೂ ಮೆಚ್ಚುವ ಪ್ರೀತು, ಜನನಿ ಹೀಗೆ ವಿಭಿನ್ನ ಬಗೆಯ ಎಲ್ಲಾ ಪಾತ್ರಗಳೂ ಇಲ್ಲಿ ಮಹತ್ವ ಪಡೆದುಕೊಂಡಿವೆ.
ವಿನೂತನ ನಿರೂಪಣೆಯ ಶೈಲಿ ಮೂಲಕ ಈಗಾಗಲೇ ಸೂಪರ್ ಹಿಟ್ ಆಗಿರುವ ‘ಪಾರು’ ಧಾರಾವಾಹಿ ತನ್ನ ಅದ್ದೂರಿತನವನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಮೊದಲ ಸಂಚಿಕೆಯಿಂದ ಈಗಿನವರೆಗೂ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ಅದ್ದೂರಿ ಮೇಕಿಂಗ್ನಿಂದಾಗಿ ವೀಕ್ಷಕರಿಗೆ ಸಿನಿಮಾದ ಅನುಭವ ನೀಡಬೇಕು ಎನ್ನುವ ತಂಡದ ಪ್ರಯತ್ನಕ್ಕೆ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿದೆ ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ.
800 ಸಂಚಿಕೆಗಳ ಸನಿಹದಲ್ಲಿರುವ ಈ ಧಾರಾವಾಹಿಯ ಕಥೆ ಈಗ ಅರಸನಕೋಟೆಯ ಹಿರಿ ಮಗ ಆದಿ ನಿಶ್ಚಿತಾರ್ಥದ ಹಂತದಲ್ಲಿದೆ. ಅಖಿಲಾಂಡೇಶ್ವರಿಯ ಪ್ರತಿಷ್ಠೆ ಮತ್ತು ಬಡವರ ಧ್ವನಿಯಾಗಿರುವ ವೀರಯ್ಯದೇವನ ಹಠದಲ್ಲಿ ಗೆಲುವು ಯಾರಿಗೆ ಎನ್ನುವುದು ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಆದಿ-ಪಾರು ಪ್ರೀತಿಗೆ ವಿರೋಧ ವ್ಯಕಪಡಿಸುತ್ತಿರುವ ಅರಸನಕೋಟೆ ಅಖಿಲಾಂಡೇಶ್ವರಿ ಮತ್ತು ಪರವಾಗಿ ನಿಂತಿರುವ ವೀರಯ್ಯದೇವ ಇವರಿಬ್ಬರ ಪ್ರತಿನಡೆಯು ಬಹಳ ರೋಚಕವಾಗಿದೆ.
ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಗೆ ನಟ, ನಿರ್ಮಾಪಕ ದಿಲೀಪ್ ರಾಜ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಶ್ರೀವಿದ್ಯಾ ರಾಜ್ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಗುರುಪ್ರಸಾದ್ ಮೂಡೇನಹಳ್ಳಿ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ:
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಗ್ಗೆ ಉಮಾಶ್ರೀ ಹೇಳಿದ್ದೇನು? ಹಿರಿಯ ನಟಿಯ ಕಿರುತೆರೆ ಕಮ್ಬ್ಯಾಕ್
‘ಉದಯ’ ಟಿವಿಯಲ್ಲಿ ಹೊಸ ಸೀರಿಯಲ್ ‘ಅಣ್ಣ-ತಂಗಿ’; ಯಾವಾಗಿನಿಂದ ಪ್ರಸಾರ? ಏನಿದರ ಕಥೆ?