
ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆ (ಡಿಸೆಂಬರ್ 27) ಮಲೇಷ್ಯಾನಲ್ಲಿ ಬಲು ಅದ್ಧೂರಿಯಾಗಿ ನಡೆದಿದೆ. ರಾಜಕೀಯ ಪಕ್ಷ ಸ್ಥಾಪಿಸಿರುವ ವಿಜಯ್ ಅವರು, ‘ಜನ ನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮವೂ ಸಹ ಒಂದು ರೀತಿ ವಿಜಯ್ ಅವರಿಗೆ ಚಿತ್ರರಂಗದಿಂದ ವಿದಾಯ ಕೊಡುವಂತೆಯೇ ಇತ್ತು. ತಮಿಳಿನ ಖ್ಯಾತ ಯುವ ನಿರ್ದೇಶಕರುಗಳಾದ ಅಟ್ಲಿ, ಲೋಕೇಶ್ ಕನಗರಾಜ್ ಇನ್ನೂ ಕೆಲವರು ಕಾರ್ಯಕ್ರಮದಲ್ಲಿ ಹಾಜರಿದ್ದು, ವಿಜಯ್ ಅವರನ್ನು ಕೊಂಡಾಡಿದರು. ಕೊನೆಯಲ್ಲಿ ವಿಜಯ್ ಸಹ ತುಸು ಭಾವುಕವಾಗಿಯೇ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.
‘ಜನ ನಾಯಗನ್ ನನ್ನ ಕೊನೆಯ ಸಿನಿಮಾ, ಇದನ್ನು ಹೇಳುವುದೇ ನನಗೆ ಸ್ವಲ್ಪ ಕಷ್ಟವಾಗುತ್ತಿದೆ. ಆದರೆ ಬೇರೆ ಆಯ್ಕೆ ಇಲ್ಲ’ ಎಂದಿದ್ದಾರೆ ವಿಜಯ್. ‘ಅಭಿಮಾನಿಗಳು ಕೇಳುತ್ತಿದ್ದಾರೆ, ನೀವೇಕೆ ಸಿನಿಮಾ ಬಿಟ್ಟು ಹೋಗುತ್ತಿದ್ದೀರಿ ಎಂದು, ನಾನು ಬೀಚ್ ಬದಿ ಸಣ್ಣ ಮನೆ ಕಟ್ಟಿಕೊಳ್ಳೋಣ ಎಂದುಕೊಂಡೆ, ಆದರೆ ಅಭಿಮಾನಿಗಳು ದೊಡ್ಡ ಕೋಟೆಯನ್ನೇ ಕಟ್ಟಿಕೊಟ್ಟಿದ್ದೀರಿ. ನಾನು ನಟನೆಗೆ ಬಂದಾಗಿನಿಂದ ಈಗಿನ ವರೆಗೂ ಅಭಿಮಾನಿಗಳು ನನ್ನ ಜೊತೆಗೆ ಇದ್ದೀರಿ, ನನಗೆ ಬೆಂಬಲಿಸಿದ್ದೀರಿ, ನನಗೆ ಬೇಕಾದ ಎಲ್ಲವನ್ನೂ ನೀಡಿದ್ದೀರಿ, ಆದರೆ ಮುಂದಿನ ನನ್ನ ಜೀವನದ 30 ವರ್ಷಗಳನ್ನು ನಾನು ಅಭಿಮಾನಿಗಳಿಗಾಗಿ ಕಳೆಯಬೇಕು ಎಂದುಕೊಂಡಿದ್ದೀನಿ’ ಎಂದರು ವಿಜಯ್.
‘ನನಗಾಗಿ ತಮ್ಮ ಎಲ್ಲವನ್ನೂ ಕೊಟ್ಟಿರುವ ಅಭಿಮಾನಿಗಳಿಗಾಗಿ ನಾನು ನನ್ನ ಪ್ರೀತಿಯ ಸಿನಿಮಾವನ್ನು ಬಿಟ್ಟುಕೊಡುತ್ತಿದ್ದೀನಿ. ಈ ವಿಜಯ್ ಕೇವಲ ಒಳ್ಳೆಯದು ಹೇಳಲು ಬಂದವನಲ್ಲ. ಒಳ್ಳೆಯತನವನ್ನು ಸ್ಥಾಪಿಸಲು ಬಂದವ. ಇದು ನನ್ನ ಕೊನೆಯ ಸಿನಿಮಾ ಆಗಿರಬಹುದು, ಆದರೆ ಇದರ ಅಂತ್ಯದ ಬಳಿಕ ಹೊಸ ಅಧ್ಯಾಯವೇ ಆರಂಭ ಆಗಲಿದೆ’ ಎಂದಿದ್ದಾರೆ ದಳಪತಿ ವಿಜಯ್.
ಇದನ್ನೂ ಓದಿ:‘ಜನ ನಾಯಗನ್ ಬಳಿಕ ಸಿನಿಮಾ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್
‘ಜನ ನಾಯಗನ್’ ಸಿನಿಮಾ ತಂಡದ ಬಗ್ಗೆ ಮಾತನಾಡಿರುವ ವಿಜಯ್, ‘ಅನಿರುದ್ಧ್ ರವಿಚಂದ್ರನ್ ‘ಮ್ಯೂಸಿಕ್ ಡಿಪಾರ್ಟ್ಮೆಂಟ್ ಸ್ಟೋರ್’ ಅವರು ಎಂದಿಗೂ ನಿರಾಶೆ ಮಾಡಿದ್ದೇ ಇಲ್ಲ. ಇನ್ನು ನಿರ್ದೇಶಕ ಎಚ್ ವಿನೋದ್, ಕಮರ್ಶಿಯಲ್ ಸಿನಿಮಾನಲ್ಲಿಯೂ ಸಂದೇಶ ನೀಡುತ್ತಾರೆ’ ಎಂದಿದ್ದಾರೆ. ಸಿನಿಮಾದ ನಾಯಕಿ ಪೂಜಾ ಬಗ್ಗೆ ಮಾತನಾಡಿ, ‘ಪೂಜಾ ತಮಿಳು ಚಿತ್ರರಂಗದ ಮೋನಿಕಾ ಬೆಳ್ಳುಚಿ, ಅವರ ನಟನೆ, ಡ್ಯಾನ್ಸು, ಅಂದಕ್ಕೆ ಸರಿಸಾಟಿ ಇಲ್ಲ’ ಎಂದಿದ್ದಾರೆ. ಇನ್ನೊಬ್ಬ ನಟಿ ಮಮಿತಾ ಬಗ್ಗೆ ಮಾತನಾಡಿ, ‘ಮಮಿತಾ ಡ್ಯೂಡ್ ಮೂಲಕ ಯುವಕರನ್ನು ಚಿತ್ರಮಂದಿರಕ್ಕೆ ಸೆಳೆದಿದ್ದರು, ಈಗ ಈ ಸಿನಿಮಾ ಮೂಲಕ ಕುಟುಂಬವನ್ನು ಸೆಳೆಯಲಿದ್ದಾರೆ. ಇನ್ನು ಪ್ರಕಾಶ್ ರೈ ಹಾಗೂ ನನ್ನ ಕಾಂಬಿನೇಷನ್ ದಶಕಗಳಿಂದಲೂ ಚೆನ್ನಾಗಿದೆ. ಒಳ್ಳೆಯ ಗೆಳೆಯರಿಗಿಂತಲೂ ಒಳ್ಳೆಯ ಎದುರಾಳಿಗಳು ಬಹಳ ಮುಖ್ಯ’ ಎಂದಿದ್ದಾರೆ.
ಮಲೇಷ್ಯಾ ಬಗ್ಗೆಯೂ ಮಾತನಾಡಿದ ವಿಜಯ್, ‘ಮಲೇಷ್ಯಾ, ತಮಿಳು ಚಿತ್ರರಂಗದ ಪಾಲಿಗೆ ಬಹಳ ಮುಖ್ಯವಾದ ಮಾರುಕಟ್ಟೆ ಆಗಿದೆ. ಮಲೇಷ್ಯಾ ಎಂದೊಡನೆ, ನನ್ನ ಗೆಳೆಯ ಅಜಿತ್ ನಟಿಸಿರುವ ‘ಬಿಲ್ಲಾ’, ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ನೆನಪಾಗುತ್ತವೆ. ನನ್ನ ಕೊನೆಯ ಸಿನಿಮಾದ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ನನ್ನ ಪಾಲಿಗೆ ವಿಶೇಷವಾದುದು’ ಎಂದಿದ್ದಾರೆ.
‘ಶೀಘ್ರವೇ ಅಭಿಮಾನಿಗಳ ಮುಂದೆ ಸಿನಿಮಾ ಬರಲಿದೆ. ಈ ಬಾರಿ ಒಂಟಿಯಾಗಿ ಬರಲಿದ್ದೇವಾ? ಜಂಟಿಯಾಗಿ ಬರಲಿದ್ದೇವ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆ ಕುತೂಹಲ ಹಾಗೆಯೇ ಇರಲಿ ಎಂದಿರುವ ವಿಜಯ್, ಇಷ್ಟು ವರ್ಷ ಒಂಟಿಯಾಗಿಯೇ ಹೋರಾಡಿದ್ದೇವೆ’ ಎಂದೂ ಸಹ ಹೇಳಿದ್ದಾರೆ. ‘ಜನ ನಾಯಗನ್’ ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ