
ಭಾರತದ ಚಿತ್ರಮಂದಿರಗಳಲ್ಲಿ ‘ದಿ ಒಡಿಸ್ಸಿ’ ಸಿನಿಮಾ ಭಾರಿ ಸದ್ದು ಮಾಡಿತ್ತು. ಐಮ್ಯಾಕ್ಸ್ ಪರದೆಗಳಲ್ಲಿ ಈ ಸಿನಿಮಾ ದಾಖಲೆಯ ಗಳಿಕೆ ಕಂಡಿತ್ತು. ಬರೋಬ್ಬರಿ 40 ದಿನಗಳ ಕಾಲ ಬಾಕ್ಸ್ ಆಫೀಸ್ ಆಳಿದ ಈ ಚಿತ್ರಕ್ಕೆ ಈಗ ದೊಡ್ಡ ಹಿನ್ನಡೆಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ (Toxic Movie) ಆಗಸ್ಟ್ 26 ರಂದು ಬಿಡುಗಡೆಯಾಗಿದೆ. ಹೀಗಾಗಿ ಐಮ್ಯಾಕ್ಸ್ ಚಿತ್ರಮಂದಿರಗಳಿಂದ ‘ದಿ ಒಡಿಸ್ಸಿ’ ಸಿನಿಮಾವನ್ನು ತೆಗೆದುಹಾಕಲಾಗಿದೆ.
‘ಟಾಕ್ಸಿಕ್’ ಚಿತ್ರಕ್ಕೆ ದೇಶಾದ್ಯಂತ ಭಾರಿ ಬೇಡಿಕೆ ಇದೆ. ಈ ಚಿತ್ರದ ವಿತರಕರು ಎಲ್ಲಾ ಐಮ್ಯಾಕ್ಸ್ ಶೋಗಳನ್ನು ಪಡೆದುಕೊಂಡಿದ್ದಾರೆ. ವಾರ್ನರ್ ಬ್ರದರ್ಸ್ ಸಂಸ್ಥೆಯು ದಿನಕ್ಕೆ ಕನಿಷ್ಠ ಒಂದು ಶೋ ನೀಡುವಂತೆ ಮನವಿ ಮಾಡಿತ್ತು. ಆದರೆ ಆ ಮನವಿಯನ್ನು ತಿರಸ್ಕರಿಸಲಾಗಿದೆ. ತಮಿಳುನಾಡಿನ ಕೊಯಮತ್ತೂರಿನ ಬ್ರಾಡ್‌ವೇ ಸಿನೆಮಾಸ್ ಮಾತ್ರ ವಿನಾಯಿತಿ ನೀಡಿದೆ. ಅಲ್ಲಿ ‘ದಿ ಒಡಿಸ್ಸಿ’ ಚಿತ್ರದ ಎರಡು ಶೋಗಳು ಮುಂದುವರಿಯಲಿವೆ.
‘ದಿ ಒಡಿಸ್ಸಿ’ ಭಾರತದಲ್ಲಿ ಇದುವರೆಗೆ ಒಟ್ಟು 184.23 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ಐಮ್ಯಾಕ್ಸ್ ಒಂದರಿಂದಲೇ 90 ಕೋಟಿ ರೂಪಾಯಿ ಹರಿದು ಬಂದಿದೆ. ಅಂದರೆ ಒಟ್ಟು ಗಳಿಕೆಯಲ್ಲಿ ಶೇಕಡಾ 50 ಭಾಗ ಐಮ್ಯಾಕ್ಸ್‌ನಿಂದ ಬಂದಿದೆ. 40 ದಿನ ಪೂರೈಸಿದರೂ ಕೊನೆಯ ದಿನ ಶೇಕಡಾ 43 ರಷ್ಟು ಆಕ್ಯುಪೆನ್ಸಿ ಇತ್ತು. ದಿನಕ್ಕೆ ಒಂದು ಶೋ ಸಿಕ್ಕಿದ್ದರೂ ಐಮ್ಯಾಕ್ಸ್ ಗಳಿಕೆ 100 ಕೋಟಿ ರೂಪಾಯಿ ದಾಟುತ್ತಿತ್ತು.
ಇದನ್ನೂ ಓದಿ: Toxic Movie Review: ಆರಂಭದಿಂದ ಅಂತ್ಯದ ತನಕ ಆ್ಯಕ್ಷನ್ ಅಬ್ಬರದ ‘ಟಾಕ್ಸಿಕ್’
ಮುಂದಿನ ದಿನಗಳಲ್ಲಿ ಈ ಚಿತ್ರ ಮತ್ತೆ ಐಮ್ಯಾಕ್ಸ್ ಪರದೆಗೆ ಮರಳುವ ಸಾಧ್ಯತೆ ಇದೆ. ಆದರೆ ಒಮ್ಮೆ ಶೋ ನಿಂತರೆ ಆ ವೇಗ ಕಡಿಮೆಯಾಗುವ ಭೀತಿ ಇದೆ. ಒಟ್ಟಿನಲ್ಲಿ ಯಶ್ ಅವರ ‘ಟಾಕ್ಸಿಕ್’ ಸಿನಿಮಾದ ಅಲೆಯು ‘ದಿ ಒಡಿಸ್ಸಿ’ ಚಿತ್ರದ ಹಿಸ್ಟಾರಿಕ್ ಓಟಕ್ಕೆ ಬ್ರೇಕ್ ಹಾಕಿದೆ.
‘ಟಾಕ್ಸಿಕ್’ ಸಿನಿಮಾಗೆ ಮಲಯಾಳಂನ ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದಾರೆ. ಹಲವು ಸ್ಟಾರ್ ನಟಿಯರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.