ಸಮಂತಾ ಅವರು ಅಕ್ಕಿನೇನಿ ಕುಟುಂಬದಿಂದ ಹೊರ ಬಂದ ನಂತರದಲ್ಲಿ ಅವರ ಬಗ್ಗೆ ಹರಿದಾಡಿದ ಸುದ್ದಿ ಒಂದೆರಡಲ್ಲ. ಆದರೆ, ಕೆಲವರು ತೀರಾ ಕೆಳಮಟ್ಟಕ್ಕೆ ಇಳಿದು ಸಮಂತಾ ಹೆಸರು ಕೆಡಿಸುವ ಪ್ರಯತ್ನ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಸಮಂತಾ ಕಳಕಳಿಯ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಈ ಕಾರಣಕ್ಕೆ ಅವರು ಕಾನೂನಾತ್ಮಕವಾಗಿ ಹೋರಾಟ ನಡೆಸಿದ್ದಾರೆ. ತಮ್ಮ ಮಾನಹಾನಿ ಮಾಡಿದವರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಈ ಪ್ರಕರಣದ ತೀರ್ಪು ಇಂದು (ಅಕ್ಟೋಬರ್ 22) ಹೊರ ಬೀಳಲಿದೆ.
ಸಮಂತಾ ವಿಚ್ಛೇದನ ಪಡೆದುಕೊಂಡ ನಂತರದಲ್ಲಿ ಅನೇಕರು ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದರು. ಅವರಿಗೆ ಅಬಾರ್ಷನ್ ಆಗಿತ್ತು, ಸಮಂತಾಗೆ ಬೇರೆಯವರ ಜತೆ ಸಂಬಂಧ ಇತ್ತು ಎಂಬಿತ್ಯಾದಿ ಸುದ್ದಿಗಳನ್ನು ಹಬ್ಬಿಸುವ ಕುತಂತ್ರ ನಡೆದಿತ್ತು. ಆದರೆ, ಸಮಂತಾ ಈ ವಿಚಾರದಲ್ಲಿ ಸುಮ್ಮನೆ ಕೂತಿಲ್ಲ. ಅವರ ಕಡೆಯಿಂದ ಖಡಕ್ ಆಗಿಯೇ ಇದಕ್ಕೆಲ್ಲ ಉತ್ತರ ಬಂದಿತ್ತು. ಆದರೂ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ನಡೆದೇ ಇತ್ತು. ಇದು ಸಮಂತಾ ಅಸಮಾಧಾನಕ್ಕೆ ಕಾರಣವಾಗಿತ್ತು.
ಸಮಂತಾ ಪರ ವಕೀಲರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಮಂತಾ ಬಗ್ಗೆ ಅತೀ ಕೆಟ್ಟದಾಗಿ ಸುದ್ದಿ ಮಾಡಿದ ಮೂರು ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಇದರ ತೀರ್ಪು ಇಂದು ಹೊರಬೀಳಲಿದೆ. ಒಂದೊಮ್ಮೆ ತಪ್ಪು ಸಾಬೀತಾದರೆ, ಈ ಯೂಟ್ಯೂಬ್ ಚಾನೆಲ್ಗಳು ಸಮಂತಾಗೆ ದೊಡ್ಡ ಮೊತ್ತದ ಹಣ ಪಾವತಿ ಮಾಡಬೇಕಿದೆ.
ಸಮಂತಾ ಸದ್ಯ ರಿಷಿಕೇಶ ಪ್ರವಾಸದಲ್ಲಿದ್ದಾರೆ. ರಿಷಿಕೇಶದಲ್ಲಿರುವ ಶ್ರೀ ಸ್ವಾಮಿ ಪುರುಷೋತ್ತಮಾನಂದ ಜೀ ಮಹರಾಜ್ ವಸಿಷ್ಠ್ ಆಶ್ರಮದ ದ್ವಾರದ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಜೊತೆಗೆ ‘ಸಂತಸ ಬೇರೆಲ್ಲೂ ಇಲ್ಲ, ನಮ್ಮೊಳಗಿದೆ’ ಎಂದು ಬರೆದುಕೊಂಡಿರುವ ಫಲಕದ ಚಿತ್ರವನ್ನೂ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ಪೋಸ್ಟ್ ಹಾಕಿದ್ದ ಸಮಂತಾ, ‘ನನ್ನ ವೈಯಕ್ತಿಕ ವಿಚಾರಕ್ಕೆ ನೀವು ಸ್ಪಂದಿಸಿರುವುದು ಖುಷಿ ನೀಡಿದೆ. ವದಂತಿಗಳ ವಿಚಾರದಲ್ಲಿ ನೀವು ನನ್ನ ಪರವಾಗಿ ನಿಂತಿರುವುದಕ್ಕೆ ಧನ್ಯವಾದಗಳು. ನನಗೆ ಬೇರೆ ಸಂಬಂಧವಿದೆ, ನಾನು ಮಕ್ಕಳನ್ನು ಪಡೆಯಲು ಬಯಸಲಿಲ್ಲ, ನಾನು ಅವಕಾಶವಾದಿ ಮತ್ತು ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಿಚ್ಛೇದನ ಎನ್ನುವುದು ನೋವಿನ ಪ್ರಕ್ರಿಯೆ. ಇದು ಗುಣವಾಗಲು ಸಮಯ ನೀಡಿ. ಆದರೆ ನಾನು ಒಂದು ಪ್ರಾಮಿಸ್ ಮಾಡುತ್ತೇನೆ. ಈ ರೀತಿಯ ದಾಳಿಯಿಂಧ ನನ್ನನ್ನು ಮುರಿಯಲು ಸಾಧ್ಯವಿಲ್ಲ’ ಎಂದು ಸಮಂತಾ ಬರೆದುಕೊಂಡಿದ್ದರು.
ಇದನ್ನೂ ಓದಿ: ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಡುಕ ಹುಟ್ಟಿಸಿದ ಸಮಂತಾ; ಯಾರಿಗೆಲ್ಲಾ ತೊಂದರೆ?
Samantha: ಡಿವೋರ್ಸ್ ಬೆನ್ನಲ್ಲೇ ಆಶ್ರಮಕ್ಕೆ ತೆರಳಿದ್ದಾರಾ ಸಮಂತಾ?; ಉತ್ತರ ನೀಡುತ್ತಿವೆ ಈ ಚಿತ್ರಗಳು