ಅಲ್ಲು ಅರ್ಜುನ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್​ ಸೀಕ್ರೆಟ್​ ಇಲ್ಲಿದೆ..

| Updated By: ಮದನ್​ ಕುಮಾರ್​

Updated on: Jan 26, 2022 | 2:12 PM

‘ಪುಷ್ಪ’ ಸಿನಿಮಾದ ಗೆಲುವಿನಿಂದಾಗಿ ಅಲ್ಲು ಅರ್ಜುನ್​ ಅವರಿಗೆ ಉತ್ತರ ಭಾರತದಲ್ಲಿ ಅಭಿಮಾನಿ ಬಳಗ ಹೆಚ್ಚಿದೆ. ಅವರಿಗೆ ಈ ಪರಿ ಗೆಲುವು ಸಿಗಲು ಅನೇಕ ಅಂಶಗಳು ಕಾರಣ ಆಗಿವೆ.

ಅಲ್ಲು ಅರ್ಜುನ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್​ ಸೀಕ್ರೆಟ್​ ಇಲ್ಲಿದೆ..
ಅಲ್ಲು ಅರ್ಜುನ್
Follow us on

ಕಳೆದ ವರ್ಷ ಡಿ.17ರಂದು ತೆರೆಕಂಡ ‘ಪುಷ್ಪ’ ಸಿನಿಮಾ (Pushpa Movie) ಗೆದ್ದು ಬೀಗಿದೆ. ಆಂಧ್ರ, ತೆಲಂಗಾಣ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ಕೂಡ ಈ ಚಿತ್ರ ಧೂಳೆಬ್ಬಿಸಿದೆ. ಅಲ್ಲು ಅರ್ಜುನ್​ (Allu Arjun) ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಭರ್ಜರಿ ಮೈಲೇಜ್​​ ಸಿಕ್ಕಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಚಾರ್ಮ್​ ಕೂಡ ಹೆಚ್ಚಿದೆ. ವಿಶ್ವಾದ್ಯಂತ ಈ ಸಿನಿಮಾ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಹಿಂದಿ, ಕನ್ನಡ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್​ ಆಗಿ ತೆರೆ ಕಂಡಿದ್ದು ಈ ಸಿನಿಮಾಗೆ ಪ್ಲಸ್​ ಪಾಯಿಂಟ್​ ಆಯಿತು. ಹಿಂದಿ ಅವತರಣಿಕೆಯಲ್ಲಿ ‘ಪುಷ್ಪ’ (Pushpa Movie Box Office Collection) ಗಳಿಸಿರುವುದು ಬರೋಬ್ಬರಿ 91 ಕೋಟಿ ರೂಪಾಯಿ! ಬಾಲಿವುಡ್​ನ ಅನೇಕ ಸ್ಟಾರ್ ನಟರ ಸಿನಿಮಾಗಳೇ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಇಷ್ಟು ಹಣ ಗಳಿಸಲು ಸಾಧ್ಯವಾಗದೇ ಸೋಲು ಅನುಭವಿಸಿದ ಉದಾಹರಣೆ ಸಾಕಷ್ಟಿದೆ. ಹೀಗಿರುವಾಗ ಅಲ್ಲು ಅರ್ಜುನ್​ ಅವರ ಚಿತ್ರ 91 ಕೋಟಿ ರೂಪಾಯಿ ಗಳಿಸಲು ಹೇಗೆ ಸಾಧ್ಯವಾಯ್ತು? ಅದರ ಹಿಂದೆ ಒಂದು ಟ್ರೇಡ್​ ಸೀಕ್ರೆಟ್​ ಇದೆ. ಆ ಕುರಿತು ‘ನ್ಯೂಸ್​9’ ಲೇಖನ ಪ್ರಕಟಿಸಿದೆ.

‘ಪುಷ್ಪ’ ಸಿನಿಮಾದಿಂದಲೇ ಅಲ್ಲು ಅರ್ಜುನ್​ ಅವರಿಗೆ ಹಿಂದಿಯಲ್ಲಿ ಮಾರುಕಟ್ಟೆ ಹೆಚ್ಚಿತಾ? ಹಾಗೇನೂ ಇಲ್ಲ. ‘ಪುಷ್ಪ’ ರಿಲೀಸ್​ ಆಗೋದಕ್ಕಿಂತ ಮುನ್ನವೇ ಅವರು ಹಿಂದಿ ಸಿನಿಪ್ರಿಯರಿಗೆ ಪರಿಚಿತಗೊಂಡಿದ್ದರು. ಅವರ ಈ ಹಿಂದಿನ ಅನೇಕ ಸಿನಿಮಾಗಳನ್ನು ಹಿಂದಿಗೆ ಡಬ್​ ಮಾಡಿ, ಟಿವಿ ಮತ್ತು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿತ್ತು. ಅದರ ಹಿಂದಿರುವುದು ‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಸಂಸ್ಥೆ. ‘ಪುಷ್ಪ’ ಚಿತ್ರದ ಹಿಂದಿ ವರ್ಷನ್​ ಅನ್ನು ಥಿಯೇಟರ್​ನಲ್ಲಿ ಬಿಡುಗಡೆ ಮಾಡಿದ್ದು ಕೂಡ ಇದೇ ಸಂಸ್ಥೆ.

‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಸಂಸ್ಥೆಯು ತನ್ನ ‘ಡಿಂಚಕ್​ ಟಿವಿ’ ಮೂಲಕ ಈಗಾಗಲೇ ದಕ್ಷಿಣ ಭಾರತದ ಅನೇಕ​ ಸಿನಿಮಾಗಳನ್ನು ಹಿಂದಿಗೆ ಡಬ್​ ಮಾಡಿ ಪ್ರಸಾರ ಮಾಡಿದೆ. ಅಲ್ಲಿ ಹೆಚ್ಚು ಟಿಆರ್​ಪಿ ಗಳಿಸಿರುವುದು ಅಲ್ಲು ಅರ್ಜುನ್​ ಸಿನಿಮಾಗಳು. ಹಾಗಾಗಿ ಅವರ ಸಿನಿಮಾವನ್ನು ಹಿಂದಿ ಪ್ರೇಕ್ಷಕರು ಇಷ್ಟಪಡುತ್ತಾರೆ ಎಂಬ ಸತ್ಯ ‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಸಂಸ್ಥೆಯ ಮಾಲಿಕರಿಗೆ ಚೆನ್ನಾಗಿ ತಿಳಿದತ್ತು. ಹಾಗಾಗಿ ಅವರು ತಮ್ಮ ಟಿವಿ ಚಾನೆಲ್ ಮತ್ತು ಯೂಟ್ಯೂಬ್​ ಚಾನೆಲ್​ನಲ್ಲಿ ‘ಪುಷ್ಪ’ ಚಿತ್ರವನ್ನು ಚೆನ್ನಾಗಿ ಪ್ರಚಾರ ಮಾಡಿದರು. ಅದರ ಪರಿಣಾಮವಾಗಿ ಮೊದಲ ದಿನವೇ ಈ ಸಿನಿಮಾ ನೋಡಲು ಹಿಂದಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಮುಗಿಬಿದ್ದರು.

‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಯೂಟ್ಯೂಬ್​ ಚಾನೆಲ್​ ಮತ್ತು ‘ಡಿಂಚಕ್​ ಟಿವಿ’ ಮೂಲಕ ಅಲ್ಲು ಅರ್ಜುನ್​ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದವರಿಗೆ ಅವರ ಪ್ರತಿಭೆ ಏನೆಂಬುದು ತಿಳಿದಿತ್ತು. ಹಾಗಾಗಿ ಅವರೆಲ್ಲರೂ ಚಿತ್ರಮಂದಿರದಲ್ಲಿ ‘ಪುಷ್ಪ’ ಸಿನಿಮಾ ನೋಡಲು ಮನಸ್ಸು ಮಾಡಿದರು ಎನ್ನುತ್ತಾರೆ ‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಸಂಸ್ಥೆಯ ಮನೀಶ್​.

ಹಿಂದಿ ರೀತಿಯೇ ಮಲಯಾಳಂನಲ್ಲೂ ‘ಪುಷ್ಪ’ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ‘ಆರ್ಯ’ ಸಿನಿಮಾದ ಕಾಲದಿಂದಲೂ ಕೇರಳದಲ್ಲಿ ಅಲ್ಲು ಅರ್ಜುನ್​ ಅವರ ಸಿನಿಮಾಗಳಿಗೆ ಬೇಡಿಕೆ ಇದೆ. ಅಲ್ಲಿ ಫ್ಯಾಮಿಲಿ ಆಡಿಯನ್ಸ್​ ಕೂಡ ಅಲ್ಲು ಅರ್ಜುನ್​ ಅವರನ್ನು ಇಷ್ಟಪಟ್ಟಿದ್ದಾರೆ. ಕೇರಳದಲ್ಲಿ ಅವರಿಗೆ ಇರುವ ಜನಪ್ರಿಯತೆ ‘ಪುಷ್ಪ’ ಚಿತ್ರದ ಯಶಸ್ಸಿಗೆ ಕಾರಣ ಆಯ್ತು ಎಂದಿದ್ದಾರೆ ವಿತರಕ, ಇ4 ಎಂಟರ್​ಟೇನ್​ಮೆಂಟ್​ ಸಂಸ್ಥೆಯ ಮುಕೇಶ್​ ಮೆಹ್ತಾ. ‘ಪುಷ್ಪ’ ಚಿತ್ರದ ಹಾಡು, ಟೀಸರ್​ ಮುಂತಾದ ಕಂಟೆಂಟ್​​ಗಳನ್ನು ತೆಲುಗಿನ ಜೊತೆಜೊತೆಗೆ ಬೇರೆ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡಲಾಯ್ತು. ಪ್ರಾದೇಶಿಕ ಭಾಷೆಯ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಅದು ಸಹಾಯಕವಾಯ್ತು ಎಂಬುದು ಮುಕೇಶ್​ ಮೆಹ್ತಾ ಅನಿಸಿಕೆ.

‘ಅಲ್ಲು ಅರ್ಜುನ್​ ಅವರಿಗೆ ಕೇರಳದಲ್ಲಿ ಒಳ್ಳೆಯ ಮಾರ್ಕೆಟ್​ ಇದೆ. ಆದರೆ ಸಿನಿಮಾ ಗೆಲುವಿಗೆ ಅದೊಂದೇ ಸಾಕಾಗುವುದಿಲ್ಲ. ಪುಷ್ಪ ಸಿನಿಮಾ ಎಲ್ಲ ಆಯಾಮದಲ್ಲಿಯೂ ಉತ್ತಮವಾಗಿತ್ತು. ಕಥೆ, ಪಾತ್ರವರ್ಗ, ಸಂಗೀತ, ಆ್ಯಕ್ಷನ್​ ಹೀಗೆ ಎಲ್ಲದರ ಕಾರಣದಿಂದ ಸಿನಿಮಾ ಯಶಸ್ವಿ ಆಯಿತು’ ಎಂದು ಮುಕೇಶ್​ ಮೆಹ್ತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಲ್ಲು ಅರ್ಜುನ್​ ರೀತಿಯೇ ದಕ್ಷಿಣ ಭಾರತದ ಇತರೆ ನಟರು ಕೂಡ ಹಿಂದಿ ಡಬ್ಬಿಂಗ್​ ಮಾರ್ಕೆಟ್​ನಲ್ಲಿ ಗೆಲುವು ಕಾಣಬಹುದು. ಪ್ರಭಾಸ್​, ರಾಮ್​ ಚರಣ್​, ಯಶ್​, ಜ್ಯೂ. ಎನ್​ಟಿಆರ್​ ಮುಂತಾದ ನಟರಿಗೆ ಆ ಸಾಮರ್ಥ್ಯ ಇದೆ. ದಕ್ಷಿಣ ಭಾರತದಲ್ಲಿ ತಯಾರಾಗುವ ಸಿನಿಮಾಗಳ ಗುಣಮಟ್ಟ ಚೆನ್ನಾಗಿ ಇರುತ್ತದೆ ಎಂದು ‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಮನೀಶ್​ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಅಲ್ಲು ಅರ್ಜುನ್​ ಹೊಸ ಚಿತ್ರಕ್ಕೆ ಅಟ್ಲಿ ನಿರ್ದೇಶನ; ಸಂಭಾವನೆ ಎಷ್ಟು ಅಂತ ಕೇಳಿದ್ರೆ ಅಚ್ಚರಿ ಆಗತ್ತೆ

‘ಪುಷ್ಪ’ ಚಿತ್ರವನ್ನು ಹಾಡಿ ಹೊಗಳಿದ ಮಹೇಶ್​ ಬಾಬು; ಈ ಪರಿ ಪ್ರಶಂಸೆಗೆ ಅಲ್ಲು ಅರ್ಜುನ್​ ಪ್ರತಿಕ್ರಿಯೆ ಏನು?