‘ಕೆಜಿಎಫ್​ 2’ ಕಲೆಕ್ಷನ್​ ವಿಚಾರದಲ್ಲಿ ಮೂಡಿದೆ ಚಿಂತೆ; ಮನಸ್ಸು ಬದಲಿಸುತ್ತಾ ಆಂಧ್ರ ಸರ್ಕಾರ?

| Updated By: ರಾಜೇಶ್ ದುಗ್ಗುಮನೆ

Updated on: Apr 11, 2022 | 2:42 PM

ಆಂಧ್ರ ಪ್ರದೇಶದಲ್ಲಿ ಈವರೆಗೆ ‘ಕೆಜಿಎಫ್​ ಚಾಪ್ಟರ್​ 2’ ಬುಕಿಂಗ್ ಓಪನ್ ಆಗಿಲ್ಲ. ಹೀಗೇಕೆ ಎಂದು ಅನೇಕರು ಆಲೋಚಿಸುತ್ತಿದ್ದಾರೆ. ಇದಕ್ಕೆ ಮಹತ್ವದ ಕಾರಣವೊಂದಿದೆ.

‘ಕೆಜಿಎಫ್​ 2’ ಕಲೆಕ್ಷನ್​ ವಿಚಾರದಲ್ಲಿ ಮೂಡಿದೆ ಚಿಂತೆ; ಮನಸ್ಸು ಬದಲಿಸುತ್ತಾ ಆಂಧ್ರ ಸರ್ಕಾರ?
ಯಶ್
Follow us on

‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾ (KGF Chapter 2) ಕೇವಲ ಕನ್ನಡ ಚಿತ್ರವಾಗಿ ಉಳಿದಿಲ್ಲ. ಪರಭಾಷಿಗರು ಕೂಡ ಇದು ನಮ್ಮದೇ ಚಿತ್ರ ಎಂಬಷ್ಟು ಪ್ರೀತಿ ತೋರುತ್ತಿದ್ದಾರೆ. ಈ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು, ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಮಧ್ಯೆ ಆಂಧ್ರ ಪ್ರದೇಶದ (Andhra Pradesh) ಭಾಗದಲ್ಲಿ ಸರ್ಕಾರದ ಹೊಸ ನಿಯಮದಿಂದ ಚಿತ್ರದ ಬಾಕ್ಸ್​ ಆಫೀಸ್ ಕಲೆಕ್ಷನ್​ಗೆ ಕೊಂಚ ಹಿನ್ನಡೆ ಆಗುವ ಸೂಚನೆ ಸಿಕ್ಕಿದೆ. ಒಂದೊಮ್ಮೆ ಸರ್ಕಾರ ಮನಸ್ಸು ಬದಲಿಸಿದರೆ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಕೇರಳದಲ್ಲಿ ಈಗಾಗಲೇ ‘ಕೆಜಿಎಫ್​ ಚಾಪ್ಟರ್​ 2’ ಮುಂಗಡ ಬುಕಿಂಗ್ ಆರಂಭಗೊಂಡಿದೆ. ಬೆಂಗಳೂರು ಸೇರಿ ಹಲವು ಕಡೆಗಳಲ್ಲಿ ಹಲವು ಶೋಗಳ ಟಿಕೆಟ್​ಗಳು ಸೋಲ್ಡ್​ಔಟ್​ ಆಗಿದೆ. ಆದರೆ, ಆಂಧ್ರ ಪ್ರದೇಶದಲ್ಲಿ ಈವರೆಗೆ ‘ಕೆಜಿಎಫ್​ ಚಾಪ್ಟರ್​ 2’ ಬುಕಿಂಗ್ ಓಪನ್ ಆಗಿಲ್ಲ. ಹೀಗೇಕೆ ಎಂದು ಅನೇಕರು ಆಲೋಚಿಸುತ್ತಿದ್ದಾರೆ. ಇದಕ್ಕೆ ಮಹತ್ವದ ಕಾರಣವೊಂದಿದೆ.

ಸಿನಿಮಾ ಟಿಕೆಟ್​ ದರದ ವಿಚಾರದಲ್ಲಿ ಆಂಧ್ರ ಪ್ರದೇಶ ಸರ್ಕಾರ ಹೊಸ ನಿಯಮ ಜಾರಿಗೆ ತಂದಿತ್ತು. ನಗರ ವ್ಯಾಪ್ತಿಯಲ್ಲಿ ಇರುವ ಮಲ್ಟಿಪ್ಲೆಕ್ಸ್​ಗಳಿಗೆ ಟಿಕೆಟ್​ ಮೊತ್ತ 75 ರೂಪಾಯಿ ಕನಿಷ್ಠ ಹಾಗೂ 250 ರೂಪಾಯಿ ಗರಿಷ್ಟ ಮೊತ್ತ ನಿಗದಿ ಮಾಡಲಾಗಿತ್ತು. ಎಸಿ ಹಾಗೂ ಎಸಿ ರಹಿತ ಚಿತ್ರಮಂದಿರಗಳ ಟಿಕೆಟ್​ ದರ 20-100 ರೂ ಅಂತರದಲ್ಲಿ ಇರಬೇಕು ಎಂದು ಹೇಳಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೊಡ್ಡ ಬಜೆಟ್​ನ ಚಿತ್ರಗಳಿಗೆ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಘೋಷಿಸಿತ್ತು. ಜತೆಗೆ ಕೆಲ ಷರತ್ತುಗಳನ್ನು ಕೂಡ ವಿಧಿಸಿತ್ತು.

ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ದಾಟಿರಬೇಕು ಮತ್ತು ಸಿನಿಮಾದ ಶೇ.20 ಶೂಟಿಂಗ್ ಆಂಧ್ರ ಪ್ರದೇಶದಲ್ಲೇ ಆಗಿರಬೇಕು. ಹೀಗಿದ್ದರೆ ಮಾತ್ರ ಟಿಕೆಟ್ ದರ ಹೆಚ್ಚಿಸಿಕೊಳ್ಳಬಹುದು. ‘ಕೆಜಿಎಫ್​ 2’ ಬಜೆಟ್ 100 ಕೋಟಿ ಮೇಲಿದೆ. ಆದರೆ, ಚಿತ್ರದ ಶೇ.20 ಶೂಟಿಂಗ್ ಆಂಧ್ರದಲ್ಲಿ ನಡೆದಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಸೂಕ್ತ ಸ್ಪಷ್ಟನೆ ಸಿಕ್ಕಿಲ್ಲ. ಈ ಕಾರಣಕ್ಕೆ ಸಿನಿಮಾದ ಟಿಕೆಟ್​ ದರವನ್ನು ಹೆಚ್ಚಿಸುವಂತಿಲ್ಲ.

ಈ ಹಿಂದೆ ‘ರಾಧೆ ಶ್ಯಾಮ್​’ ಹಾಗೂ ‘ಆರ್​ಆರ್​ಆರ್’ ಚಿತ್ರಗಳಿಗೆ ಸರ್ಕಾರದಿಂದ ವಿನಾಯಿತಿ ಸಿಕ್ಕಿತ್ತು. ಈ ಎರಡೂ ಚಿತ್ರಗಳ ಶೆ.20 ಶೂಟಿಂಗ್ ಆಂಧ್ರದಲ್ಲಿ ನಡೆದಿರಲಿಲ್ಲ. ಆದರೆ, ಹೊಸ ನಿಯಮ ಬರುವುದಕ್ಕೂ ಮೊದಲೇ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿತ್ತು ಎಂಬ ಕಾರಣಕ್ಕೆ ಸಿನಿಮಾದ ಟಿಕೆಟ್​ ದರ ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ ‘ಕೆಜಿಎಫ್​ 2’ಗೂ ಇದೇ ರೀತಿಯ ವಿನಾಯಿತಿ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಯಶ್​ ಎಂಟ್ರಿಗೆ ಹೆದರಿದ ಬಾಲಿವುಡ್​ ಹೀರೋ; ಪೈಪೋಟಿ ನೀಡಲಾಗದೇ ಹಿಂದೆ ಸರಿದ ಶಾಹಿದ್​ ಕಪೂರ್ ‘ಜೆರ್ಸಿ’

‘ಕೆಜಿಎಫ್​ ಚಾಪ್ಟರ್​ 2’ ಬಗ್ಗೆ ಹಲವು ಅಚ್ಚರಿಯ ವಿಚಾರಗಳು; ಯಶ್ ಜತೆಗಿನ ವಿಶೇಷ ಸಂದರ್ಶನ