ನ. 1ರಂದು ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ; ವಿಧಾನಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಾಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಇರುವುದರಿಂದ ವಿಧಾನಸೌಧದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಜನಿಕಾಂತ್, ಜೂನಿಯರ್ ಎನ್ಟಿಆರ್, ಸುಧಾ ಮೂರ್ತಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ನಮ್ಮನ್ನು ಅಗಲಿ 1 ವರ್ಷ ಕಳೆದಿದೆ. ನಾಳೆ (ನ. 1) ವಿಧಾನಸೌಧದ ಎದುರು ಪುನೀತ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna Award) ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ವೇದಿಕೆ ನಿರ್ಮಾಣ ಮಾಡಲಾಗಿದೆ. ಮಂಗಳವಾರ ಸಂಜೆ 4 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಖ್ಯಾತ ನಟರಾದ ರಜನಿಕಾಂತ್ (Rajinikanth), ಜೂನಿಯರ್ ಎನ್ಟಿಆರ್ (Jr NTR), ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ (Sudha Murthy) ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ರಜನಿಕಾಂತ್ ಕೂಡ ಖಚಿತಪಡಿಸಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ:ಪುನೀತ್ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ; ನಟ ಜೂ. ಎನ್ಟಿಆರ್-ರಜನಿಕಾಂತ್ ಭಾಗಿ
ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ದಿವಂಗತ ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಧಾನಸಭೆ ಸ್ಪೀಕರ್ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಮಲಕಾಪೂರೆ, ಕರ್ನಾಟಕ ರತ್ನ ಪ್ರಶಸ್ತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್. ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಮತ್ತು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಭಾಗಿಯಾಗಲಿದ್ದಾರೆ.
ವಿಧಾನಸೌಧದಲ್ಲಿ ಪೊಲೀಸ್ ಭದ್ರತೆ: ವಿಧಾನಸೌಧದಲ್ಲಿ ನಾಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಇರುವುದರಿಂದ ವಿಧಾನಸೌಧದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಆರ್. ಶ್ರೀನಿವಾಸಗೌಡ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. 7 ಎಸಿಪಿ, 16 ಇನ್ಸ್ಪೆಕ್ಟರ್, 25 ಪಿಎಸ್ಐ, 300 ಕಾನ್ಸ್ಟೆಬಲ್, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 6 ತುಕಡಿಗಳ ನಿಯೋಜನೆ ಮಾಡಲಾಗಿದೆ.
ವಿಧಾನಸೌಧದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಮತ್ತು ಸಚಿವ ಆರ್. ಅಶೋಕ್ ಮಾತನಾಡಿದ್ದು, ನಾಳೆ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮಕ್ಕೆ ಸುಮಾರು 20 ಸಾವಿರ ಜನ ಸೇರುವ ಸಾಧ್ಯತೆಯಿದೆ. ವಿಧಾನಸೌಧದ ಎದುರು ರೋಡ್ ಬ್ಲಾಕ್ ಮಾಡುತ್ತೇವೆ. 5 ಸಾವಿರ ಪಾಸ್ ನೀಡುತ್ತೇವೆ. ಚಿತ್ರರಂಗದವರು, ಬೆಂಗಳೂರು ನಾಗರಿಕರು ಸೇರಿ 5 ಸಾವಿರ ಜನರಿಗೆ ಪಾಸ್ಗಳನ್ನು ನೀಡಲಾಗುತ್ತದೆ. ನಟರಾದ ರಜನಿಕಾಂತ್ ಮತ್ತು ಜೂನಿಯರ್ ಎನ್ ಟಿ ಆರ್ ಬರಲಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ಪುನೀತ್ ಕುಮಾರ್ ಅವರ ಮನೆಗೆ ತೆರಳಿ ಆಹ್ವಾನ ನೀಡುತ್ತೇವೆ. ನಾಳೆ ಪ್ರಶಸ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Karnataka Ratna: ಪುನೀತ್ ರಾಜ್‌ಕುಮಾರ್ ಗೆ ನ. 1ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ -ಸಿಎಂ ಬೊಮ್ಮಾಯಿ ಹೇಳಿಕೆ
ಪುನೀತ್ ರಾಜ್‌ಕುಮಾರ್ ಕಳೆದ ವರ್ಷ ತೀವ್ರ ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿದ್ದರು. ಅವರ 1ನೇ ವರ್ಷದ ಪುಣ್ಯತಿಥಿಯ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಬಹು ನಿರೀಕ್ಷಿತ ಮತ್ತು ಕೊನೆಯ ಸಿನಿಮಾ ಗಂಧದ ಗುಡಿಯನ್ನು ರಿಲೀಸ್ ಮಾಡಲಾಗಿತ್ತು. ಈ ಸಿನಿಮಾ ಇನ್ನೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಪುನೀತ್ ರಾಜ್ಕುಮಾರ್ಗೆ ನೀಡಲಾಗುತ್ತಿರುವ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಬೆಳ್ಳಿಯ ಸ್ಮರಣಿಕೆ, 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರಲಿದೆ.
ಇನ್ನಷ್ಟು ಮನರಂಜನೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Mon, 31 October 22