18ನೇ ವಯಸ್ಸಿಗೆ ನೇಣಿಗೆ ಶರಣಾದ ಟಿಕ್‌ಟಾಕ್ ತಾರೆ ಡಜಾರಿಯಾ ಕ್ವಿಂಟ್, ಆತ್ಮಹತ್ಯೆಗೆ ಕಾರಣವೇನು?
ಡಜಾರಿಯಾ ಆತ್ಮಹತ್ಯೆ ಮಾಡಿಕೊಳ್ಳೋಕೆ ಕಾರಣ ಏನು ಎನ್ನುವ ವಿಚಾರ ಇನ್ನೂ ಬಹಿರಂಗಗೊಂಡಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಮೆರಿಕ ಟಿಕ್‌ಟಾಕ್ ತಾರೆ ಡಜಾರಿಯಾ ಕ್ವಿಂಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ 18ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಟಿಕ್ಟಾಕ್ನಲ್ಲಿ ಅಂತಿಮ ವೀಡಿಯೋವನ್ನು ಪೋಸ್ಟ್ ಮಾಡಿದ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡೀ ಹೆಸರಿನ ಮೂಲಕವೇ ಡಜಾರಿಯಾ ಖ್ಯಾತಿ ಪಡೆದುಕೊಂಡಿದ್ದರು. ಟಿಕ್ಟಾಕ್ನಲ್ಲಿ ಬರೋಬ್ಬರಿ 14 ಲಕ್ಷ ಫಾಲೋವರ್ಗಳನ್ನು ಹೊಂದಿದ್ದರು. ಇತ್ತೀಚೆಗೆ ಇದು ನನ್ನ ಕೊನೆಯ ಪೋಸ್ಟ್ ಎಂದು ಹೇಳಿಕೊಂಡಿದ್ದ ಅವರು, ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಜಾರಿಯಾ ಸಾವು ಆತ್ಮಹತ್ಯೆ ಎಂದು ಆಕೆಯ ಪೋಷಕರು ದೃಢಪಡಿಸಿದ್ದಾರೆ. ಡಜಾರಿಯಾ ತಂದೆ ರಹೀಮ್ ಅಲ್ಲಾ, ಮಗಳ ಚಿತ್ರಗಳನ್ನು ಟಿಕ್‌ಟಾಕ್‌ಗೆ ಹಂಚಿಕೊಂಡಿದ್ದು, ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಅಮೆರಿಕದ ಲೂಯಿಸಿಯಾನದವರಾದ ಡಜಾರಿಯಾ ಸಣ್ಣ ವಯಸ್ಸಿನಲ್ಲೇ ಸಾಮಾಜಿಕ ಜಾಲತಾಣಕ್ಕೆ ಕಾಲಿಟ್ಟು ಖ್ಯಾತಿ ಹೆಚ್ಚಿಸಿಕೊಂಡಿದ್ದರು. ಅವರ ಟಿಕ್‌ಟಾಕ್‌ಗೆ ಕಾಲಿಟ್ಟ ನಂತರ ಅವರ ಖ್ಯಾತಿ ದುಪ್ಪಟ್ಟಾಗಿತ್ತು. ಆದರೆ, ಸಣ್ಣ ವಯಸ್ಸಿನಲ್ಲೇ ಅವರು ಪ್ರಾಣ ಕಳೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಡಜಾರಿಯಾ ಇತ್ತೀಚೆಗೆ ತುಂಬಾನೇ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಮಾತು ಈಗ ಕೇಳಿ ಬಂದಿದೆ. ಸದಾ ಸಾಮಾಜಿಕ ಜಾಲತಾಣದಲ್ಲೇ ಕಾಲ ಕಳೆಯುತ್ತಿದ್ದ ಅವರು ಮೃತಪಡಲು ಖಿನ್ನತೆಯೇ ಕಾರಣವಾ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಕುಟುಂಬದವರಿಂದಲೂ ಹೇಳಿಕೆ ಪಡೆದಿದ್ದಾರೆ.
ಇದನ್ನೂ ಓದಿ: ಕೈಕಾಲು ಕಟ್ಟಿ ನಾಯಿಯನ್ನ ಕೊಳಕ್ಕೆ ಎಸೆದು ಟಿಕ್ ಟಾಕ್ ಮಾಡಿದ್ದ ಪುಂಡರು ಅರೆಸ್ಟ್