ತೆಲುಗು ಚಿತ್ರರಂಗದ ಡ್ರಗ್ಸ್ ಕೇಸ್ಗೆ ಸಿಕ್ತು ಟ್ವಿಸ್ಟ್; ಸ್ಟಾರ್ ನಟ-ನಟಿಯರಿಗೆ ಮತ್ತೆ ಸಂಕಷ್ಟ ಶುರು
ಟಾಲಿವುಡ್ ಡ್ರಗ್ಸ್ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ಸೆಲೆಬ್ರಿಟಿಗಳ ದೂರವಾಣಿ ಕರೆ ವಿವರ, ವಾಟ್ಸಾಪ್ ಸಂದೇಶ, ಸಾಕ್ಷಿಗಳ ಹೇಳಿಕೆ ಮತ್ತು ತಪ್ಪೊಪ್ಪಿಗೆ ದಾಖಲೆಗಳನ್ನು ಇಡಿ ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ.
ಚಿತ್ರರಂಗಕ್ಕೆ ಡ್ರಗ್ಸ್ ಎಂಬುದು ದೊಡ್ಡ ಕಳಂಕವಾಗಿದೆ. ಕೆಲವರು ಮಾಡುವ ತಪ್ಪಿನಿಂದಾಗಿ ಇಡೀ ಬಣ್ಣದ ಲೋಕವೇ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಒಂದಷ್ಟು ದಿನಗಳ ಕಾಲ ಕನ್ನಡ ಮತ್ತು ಹಿಂದಿ ಚಿತ್ರರಂಗದ ಡ್ರಗ್ಸ್ ಕೇಸ್ ಸಖತ್ ಸುದ್ದಿ ಆಗಿತ್ತು. ನಂತರ ಟಾಲಿವುಡ್ ಮಂದಿ ಕೂಡ ಡ್ರಗ್ಸ್ ಪ್ರಕರಣದಲ್ಲಿ (Tollywood Drug Case) ತನಿಖೆ ಎದುರಿಸಬೇಕಾಯಿತು. ಬಳಿಕ ಆ ಕೇಸ್ ತಣ್ಣಗಾಗಿತ್ತು. ಎಲ್ಲಾ ಮುಗಿಯಿತು ಎನ್ನುವಾಗಲೇ ಮತ್ತೆ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇದರಿಂದ ತೆಲುಗು ಚಿತ್ರರಂಗದ ಅನೇಕರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಸ್ಟಾರ್ ನಟ-ನಟಿಯರ ಮತ್ತು ತಂತ್ರಜ್ಞರ ಮೇಲೆ ಡ್ರಗ್ಸ್ ಸೇವನೆ ಆರೋಪ ಇದೆ. ಇದರ ಜೊತೆಗೆ ಅಕ್ರಮ ಹಣ ವರ್ಗಾವಣೆ (Money Laundering) ನಡೆದಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಸಂಬಂಧ ಹಲವು ಸೆಲೆಬ್ರಿಟಿಗಳು ವಿಚಾರಣೆಗೆ ಒಳಪಡಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಈ ಮೊದಲು ತನಿಖೆ ಮಾಡಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಎಲ್ಲ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಆ ಮೂಲಕ ಟಾಲಿವುಡ್ ಡ್ರಗ್ಸ್ ಪ್ರಕರಣದ ತನಿಖೆ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿರುವುದರಿಂದ ಅನೇಕ ಸೆಲೆಬ್ರಿಟಿಗಳಿಗೆ ಚಿಂತೆ ಶುರುವಾಗಿದೆ.
ತೆಲಂಗಾಣ ಅಬಕಾರಿ ಇಲಾಖೆಯ ‘ವಿಶೇಷ ತನಿಖಾ ತಂಡ’ 2021ರ ಸೆಪ್ಟೆಂಬರ್ನಲ್ಲಿ ಹಲವು ಸೆಲೆಬ್ರಿಟಿಗಳಿಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೆಲವೇ ದಿನಗಳ ಹಿಂದೆ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ಎ. ರೇವಂತ್ ರೆಡ್ಡಿ ನ್ಯಾಯಾಲಯದಲ್ಲಿ ಈ ಬಗ್ಗೆ ಮೊಕದ್ದಮೆ ಹೂಡಿದ್ದರು. ಅದರ ವಿಚಾರಣೆ ಕೈಗೆತ್ತಿಕೊಂಡು ನ್ಯಾಯಾಲಯವು ಕೆಲವು ಆದೇಶಗಳನ್ನು ಹೊರಡಿಸಿದೆ. ಅಬಕಾರಿ ಇಲಾಖೆಯು ಸಂಗ್ರಹಿಸಿದ ಎಲ್ಲ ಮಾಹಿತಿಗಳನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಬೇಕು ಎಂದು ಆದೇಶಿಸಲಾಗಿದೆ.
ಸೆಲೆಬ್ರಿಟಿಗಳ ದೂರವಾಣಿ ಕರೆ ವಿವರ, ವಾಟ್ಸಾಪ್ ಸಂದೇಶ, ಸಾಕ್ಷಿಗಳ ಹೇಳಿಕೆ ಮತ್ತು ತಪ್ಪೊಪ್ಪಿಗೆ ದಾಖಲೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ. ಇಡಿ ಅಧಿಕಾರಿಗಳು ತನಿಖೆ ನಡೆಸಿ, ನಂತರ ಸಲ್ಲಿಸಲಿರುವ ಅಂತಿಮ ವರದಿಯಲ್ಲಿ ಕ್ಲೀನ್ ಚಿಟ್ ಸಿಕ್ಕರೆ ಮಾತ್ರ ಆರೋಪಿತ ಟಾಲಿವುಡ್ ಸೆಲೆಬ್ರಿಟಿಗಳು ನಿಟ್ಟುಸಿರು ಬಿಡಬಹುದು. ಸದ್ಯ ಇಡಿ ತನಿಖೆ ಆರಂಭ ಆಗಿದ್ದು, ಹಲವರಿಗೆ ನಡುಕ ಶುರುವಾಗಿದೆ.
ತೆಲುಗು ಸೆಲೆಬ್ರಿಟಿಗಳು ಡ್ರಗ್ಸ್ ಪೆಡ್ಲರ್ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಕುರಿತಂತೆ 10 ನಟರು, ಕೆಲವು ನಟಿಯರು ಮತ್ತು ಸೆಲೆಬ್ರಿಟಿಗಳ ಕಾರು ಚಾಲಕರನ್ನು ತನಿಖೆಗೆ ಒಳಪಡಿಸಲಾಗಿರುವ ಬಗ್ಗೆ ಮಾಹಿತಿ ಕೇಳಿಬಂದಿದೆ. ಇನ್ನೂ ಹಲವರಿಗೆ ಸಮನ್ಸ್ ನೀಡಲಾಗಿದೆ ಎಂದು ವರದಿ ಆಗಿದೆ.
ಇದನ್ನೂ ಓದಿ:
Viral News: 6 ವರ್ಷಗಳಿಂದ ಗಂಡನ ಊಟಕ್ಕೆ ಡ್ರಗ್ಸ್ ಬೆರೆಸುತ್ತಿದ್ದ ಹೆಂಡತಿ; ಕಾರಣವೇನು ಗೊತ್ತಾ?
ಸುಶಾಂತ್ ಸಿಂಗ್ ನೆರೆ ಮನೆಯವನನ್ನು ಅರೆಸ್ಟ್ ಮಾಡಿದ ಪೊಲೀಸರು; ಇದಕ್ಕಿದೆ ಡ್ರಗ್ಸ್ ಲಿಂಕ್