ಸ್ಟಾರ್ ನಿರ್ದೇಶಕ ವಿವಿ ವಿನಾಯಕ್ಗೆ ಅನಾರೋಗ್ಯ, ಚಿತ್ರರಂಗದಿಂದ ದೂರ?
‘ಆದಿ’, ‘ಚೆನ್ನಕೇಶವ ರೆಡ್ಡಿ’, ‘ಠಾಗೂರ್’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ತೆಲುಗು ಚಿತ್ರರಂಗಕ್ಕೆ ನೀಡಿರುವ ನಿರ್ದೇಶಕ ವಿವಿ ವಿನಾಯಕ್ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಇನ್ನು ಮುಂದೆ ವಿನಾಯಕ್, ಸಿನಿಮಾ ರಂಗದಲ್ಲಿ ಸಕ್ರಿಯರಾಗಲಾರರು ಎನ್ನಲಾಗುತ್ತಿದೆ.
ಕೆಲ ವರ್ಷಗಳ ಹಿಂದೆ ತೆಲುಗು ಚಿತ್ರರಂಗದ (Tollywood) ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದವರು ವಿವಿ ವಿನಾಯಕ್ (VV Vinayk). ಜೂ ಎನ್ಟಿಆರ್, ಚಿರಂಜೀವಿ, ಅಲ್ಲು ಅರ್ಜುನ್, ರವಿತೇಜ ಇನ್ನೂ ಹಲವಾರು ಸ್ಟಾರ್ ನಟರಿಗೆ ಹಿಟ್ ಸಿನಿಮಾಗಳನ್ನು ಕೊಟ್ಟ ಶ್ರೇಯ ವಿವಿ ವಿನಾಯಕ್ ಅವರಿಗಿದೆ. ಇದೀಗ ಈ ಸ್ಟಾರ್ ನಿರ್ದೇಶಕನಿಗೆ ಅನಾರೋಗ್ಯ ಉಂಟಾಗಿದ್ದು, ಇನ್ನು ಮುಂದೆ ನಡೆದಾಡಲು ಸಹ ವಿವಿ ವಿನಾಯಕ್ಗೆ ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ವಿನಾಯಕ್ ಇನ್ನು ಮುಂದೆ ಚಿತ್ರರಂಗದಲ್ಲಿ ಸಕ್ರಿಯರಾಗಿರಲಾರರು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ವಿವಿ ವಿನಾಯಕ್, ಹೊಟ್ಟೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗೆ ತುತ್ತಾಗಿದ್ದು, ಅವರು ಜೀರ್ಣಶಕ್ತಿಯ ಸಮಸ್ಯೆ ಕಾಡುತ್ತಿತ್ತು. ಕಳೆದ ಕೆಲವು ತಿಂಗಳಿನಿಂದಲೂ ಚಿಕಿತ್ಸೆ ಪಡೆಯುತ್ತಿರುವ ವಿನಾಯಕ್, ತೂಕವನ್ನು ಕಳೆದುಕೊಂಡಿದ್ದು, ಬಹುತೇಕ ಸಮಯವನ್ನು ಮಂಚದಲ್ಲಿಯೇ ಕಳೆಯುವಂತಾಗಿದೆ ಎಂಬ ಮಾತುಗಳು ಟಾಲಿವುಡ್ನಲ್ಲಿ ಕೇಳಿ ಬರುತ್ತಿವೆ. ಕಳೆದ ವರ್ಷ, ನಿರ್ಮಾಪಕ ದಿಲ್ ರಾಜು, ವಿವಿ ವಿನಾಯಕ್ ಜೊತೆಗೆ ಸಿನಿಮಾ ಮಾಡುವ ಯೋಜನೆ ಇರುವುದಾಗಿ ಹೇಳಿಕೊಂಡಿದ್ದರು. ವಿನಾಯಕ್ ಸಹ, ಮೆಗಾಸ್ಟಾರ್ ಚಿರಂಜೀವಿ ಅವರಿಗಾಗಿ ಚಿತ್ರಕತೆಯನ್ನು ರೆಡಿ ಮಾಡಿಕೊಂಡಿದ್ದರು. ಆದರೆ ಆ ಸಿನಿಮಾ ಪ್ರಾರಂಭವೇ ಆಗಲಿಲ್ಲ.
ಇದನ್ನೂ ಓದಿ:ಜೂ. ಎನ್ಟಿಆರ್ ಕಾಲ್ಶೀಟ್ ಪಡೆಯಲು ಮನೆಮುಂದೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ನಿರ್ಮಾಪಕ
ವಿವಿ ವಿನಾಯಕ್ ಸಹೋದರ ವಿಜಯ್, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ವಿವಿ ವಿನಾಯಕ್ ಅವರಿಗೆ ಅನಾರೋಗ್ಯ ಆಗಿದ್ದಿದ್ದು ನಿಜ. ಕಳೆದ ಕೆಲವು ತಿಂಗಳಿಂದಲೂ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಈಗ ಅವರ ಆರೋಗ್ಯ ಸರಿಯಾಗಿದೆ. ಶೀಘ್ರವೇ ಅವರು ತಮ್ಮ ಕಚೇರಿಗೆ ಮರಳಲಿದ್ದಾರೆ. ಆಗ ಎಲ್ಲರನ್ನು ಕರೆಸಿ ಎಲ್ಲ ಮಾಹಿತಿಗಳನ್ನು ಅವರೇ ನೀಡಲಿದ್ದಾರೆ’ ಎಂದಿದ್ದಾರೆ.
ವಿವಿ ವಿನಾಯಕ್, ಜೂ ಎನ್ಟಿಆರ್ ನಟಿಸಿದ ಮೊದಲ ಸಿನಿಮಾ ‘ಆದಿ’ ನಿರ್ದೇಶನ ಮಾಡಿದ್ದರು. ವಿವಿ ವಿನಾಯಕ್ಗೂ ಸಹ ಅದು ಮೊದಲ ಸಿನಿಮಾ ಆಗಿತ್ತು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇತ್ತೀಚೆಗೆ ಮರು ಬಿಡುಗಡೆ ಆಗಿ ಹಿಟ್ ಆಯ್ತು. ಆ ಬಳಿಕ ಚಿರಂಜೀವಿ ಜೊತೆಗೆ ‘ಠಾಗೂರ್’ ಸಿನಿಮಾ ಮಾಡಿದರು. ಅದೂ ಸಹ ಬ್ಲಾಕ್ ಬಸ್ಟರ್ ಆಯ್ತು. ಜು ಎನ್ಟಿಆರ್ ನಟನೆಯ ‘ಸಾಂಬ’, ‘ಅದುರ್ಸ್’, ಬಾಲಕೃಷ್ಣ ನಟನೆಯ ಬ್ಲಾಕ್ ಬಸ್ಟರ್ ‘ಚೆನ್ನಕೇಶವ ರೆಡ್ಡಿ’, ಪ್ರಭಾಸ್ ನಟನೆಯ ‘ಯೋಗಿ’ (ಇದು ಕನ್ನಡದ ಜೋಗಿಯ ರೀಮೇಕ್), ಅಲ್ಲು ಅರ್ಜುನ್ ನಟನೆಯ ‘ಬನ್ನಿ’, ‘ಬದ್ರಿನಾಥ್’, ರಾಮ್ ಚರಣ್ ನಟನೆಯ ‘ನಾಯಕ್’, ಚಿರಂಜೀವಿಯ ರೀ ಎಂಟ್ರಿ ಸಿನಿಮಾ ‘ಖೈದಿ ನಂಬರ್ 150’ ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪಕ್ಕಾ ಮಾಸ್, ಕಮರ್ಶಿಯನ್ ಸಿನಿಮಾ ನಿರ್ದೇಶಿಸುತ್ತಿದ್ದ ವಿನಾಯಕ್, ತೆಲುಗಿನಲ್ಲಿ ಮಾಸ್ ಸಿನಿಮಾಗಳ, ರಾಯಲ್ ಸೀಮಾ ಸಿನಿಮಾಗಳ ಹರಿವಿಗೆ ಕಾರಣವಾಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ