ಪರಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಆದ ದ್ವಾರಕೀಶ್ ಕಿರಿಯ ಪುತ್ರ ಗಿರಿ

|

Updated on: Nov 01, 2024 | 6:03 PM

ದ್ವಾರಕೀಶ್ ಅವರ ಪುತ್ರ ಗಿರಿ ಈಗ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ‘ಯೋಲೋ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಇದರಲ್ಲಿ ಅವರು ಕಾಮಿಡಿ ಪೊಲೀಸ್ ಪಾತ್ರ ಮಾಡಿದ್ದಾರೆ. ‘ಮೇಡ್ ಇನ್ ಇಂಡಿಯಾ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಪರಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಆದ ದ್ವಾರಕೀಶ್ ಕಿರಿಯ ಪುತ್ರ ಗಿರಿ
ಗಿರಿ ದ್ವಾರಕೀಶ್
Follow us on

ಸ್ಯಾಂಡಲ್​ವುಡ್​ನ ಪ್ರಸಿದ್ಧ ಕಲಾವಿದ, ನಿರ್ಮಾಪಕ, ಡೈರೆಕ್ಟರ್​ ದ್ವಾರಕೀಶ ಅವರ ಕಿರಿಯ ಪುತ್ರ ಗಿರಿ ಅವರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳು ಅವರ ಕೈಯಲ್ಲಿ ಇವೆ. ಪರಭಾಷೆಯ ಸಿನಿಮಾಗಳಲ್ಲಿ ಕೂಡ ಅವರು ನಟಿಸುತ್ತಿದ್ದಾರೆ. ಅವರು ನಟಿಸಿರುವ ಕಾಲಿವುಡ್​ನ ‘ಯೋಲೋ’ ಸಿನಿಮಾ ಈಗ ರಿಲೀಸ್​ಗೆ ಸಜ್ಜಾಗಿದೆ. ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಈ ಚಿತ್ರದಲ್ಲಿ ಗಿರಿ ದ್ವಾರಕೀಶ್ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಪೊಲೀಸ್ ಎಂದಮಾತ್ರಕ್ಕೆ ಆ ಪಾತ್ರ ಗಂಭೀರವಲ್ಲ. ಕಾಮಿಡಿ ಪೊಲೀಸ್ ಆಗಿ ಅವರು ಕಾಣಿಸಿಕೊಳ್ಳಲಿದ್ದಾರೆ.

‘ಯೋಲೋ’ ಸಿನಿಮಾಗೆ ಮಹೇಶ್ ಸೆಲ್ವರಾಜ್ ಅವರು ಬಂಡವಾಳ ಹೂಡಿದ್ದಾರೆ. ಸಿ.ಎಸ್. ಸಾಮ್ ಅವರು ಆ್ಯಕ್ಷನ್​-ಕಟ್ ಹೇಳಿದ್ದಾರೆ. ಸೂರಜ್ ನಲ್ಲುಸ್ವಾಮಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ಫ್ಯಾಂಟಸಿ ಮಿಶ್ರಿತ ಕಥಾಹಂದರ ಇರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಪ್ರಮುಖ ಒಟಿಟಿ ಸಂಸ್ಥೆಗಳಲ್ಲಿ ಒಂದಾದ ‘ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್‌’ನಲ್ಲಿ ತಮಿಳಿನ ‘ಹಾರ್ಟ್‌ ಬೀಟ್’ ವೆಬ್ ಸರಣಿ ಜನಪ್ರಿಯ ಆಯಿತು. ಅದರಲ್ಲಿ ಡಾ. ರಾಮನಾಥನ್ ಎಂಬ ಪಾತ್ರ ಮಾಡಿದ್ದ ಗಿರಿ, ಸಾಕಷ್ಟು ಪ್ರಶಂಸೆ ಗಳಿಸಿದ್ದರು. ಆ ಪಾತ್ರದ ಕಾಮಿಡಿಯನ್ನು ವೀಕ್ಷಕರು ಮೆಚ್ಚಿಕೊಂಡರು. ತಮಿಳು ಭಾಷೆಯಲ್ಲಿ ಹಿಟ್‌ ಆದ ಈ ವೆಬ್ ಸಿರೀಸ್ ಈಗ ತೆಲುಗಿಗೆ ಡಬ್‌ ಆಗಿದೆ. ಶೀಘ್ರದಲ್ಲೇ ಅದು ಕೂಡ ಪ್ರಸಾರ ಆಗಲಿದೆ.

ಗಿರಿ ದ್ವಾರಕೀಶ್ ಅವರು ‘ಯೋಲೋ’ ಸಿನಿಮಾದ ಮಾತ್ರವಲ್ಲದೇ, ವೈರಾ ಪ್ರಕಾಶ್ ನಿರ್ಮಾಣದ, ಎಸ್.ಪಿ. ಪೊನ್ ಶಂಕರ್ ನಿರ್ದೇಶನದ ತಮಿಳಿನ ‘ಮೇಡ್ ಇನ್ ಇಂಡಿಯಾ’ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಇದು ಈ ಪ್ಯಾನ್‌ ಇಂಡಿಯಾ ಸಿನಿಮಾ ಆಗಲಿದ್ದು, ಭಾರತದ ಪ್ರಮುಖ ನಗರಗಳು ಹಾಗೂ ಐತಿಹಾಸಿಕ ತಾಣಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಇದನ್ನೂ ಓದಿ: ವದಂತಿ ನಂಬಿ ವಿಷ್ಣುವರ್ಧನ್ ಜೊತೆಗಿನ ಗೆಳೆತನ ಹಾಳು ಮಾಡಿಕೊಂಡಿದ್ದ ದ್ವಾರಕೀಶ್

‘ಮೇಡ್ ಇನ್ ಇಂಡಿಯಾ’ ಸಿನಿಮಾ ಬರೀ ಲೊಕೇಷನ್‌ಗಳ ಮೂಲಕ ಮಾತ್ರವಲ್ಲದೇ ಸಂಗೀತದ ಕಾರಣದಿಂದಲೂ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ. ಖ್ಯಾತ ಮ್ಯೂಸಿಕ್ ಡೈರೆಕ್ಟರ್ ರಾಜ್ ವರ್ಮ ಅವರು ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಗಿರಿ ಅವರು ಮೋಟಿವೇಷನಲ್‌ ಸ್ಪೀಕರ್​ ಆಗಿ ನಟಿಸುತ್ತಿದ್ದಾರೆ. ಹೀಗೆ ಹಲವು ಪ್ರಾಜೆಕ್ಟ್​ಗಳಲ್ಲಿ ಗಿರಿ ಬ್ಯುಸಿ ಆಗಿದ್ದಾರೆ. ‘ಈ ರೀತಿಯ ವೈವಿಧ್ಯಮಯ ಸಿನಿಮಾಗಳ ಭಾಗವಾಗಲು ನನಗೆ ಖುಷಿ ಆಗುತ್ತದೆ. ಪ್ರತಿ ಪಾತ್ರ ಕೂಡ ಪ್ರೇಕ್ಷಕರೊಂದಿಗೆ ಹೊಸ ರೀತಿಯಲ್ಲಿ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಪ್ರೇಕ್ಷಕರ ಬೆಂಬಲ ಹಾಗೂ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.