ಬಿಗ್ ಬಾಸ್ ಮನೆ ಸೇರಿರುವ ಮಂಜು ಪಾವಗಡ ಅವರು ಒಂದಲ್ಲಾ ಒಂದು ಹುಡುಗಿಯರ ಜತೆ ಫ್ಲರ್ಟ್ ಮಾಡುತ್ತಾ ಇರುತ್ತಾರೆ. ಈ ಬಗ್ಗೆ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕೂಡ ಹೇಳಿದ್ದಾರೆ. ಮಂಜು ಅವರ ಅದೃಷ್ಟ ಆರೀತಿ ಇದೆ ಎಂದು ನೇರವಾಗಿಯೇ ಕಾಲೆಳೆದಿದ್ದರು. ಈಗ ದಿವ್ಯಾ ಅವರನ್ನು ಬಿಟ್ಟು ವೈಷ್ಣವಿ ಹಿಂದೆ ಮಂಜು ಸುತ್ತುತ್ತಿದ್ದಾರೆ. ಕಣ್ಸನ್ನೆಯಲ್ಲೇ ಎಲ್ಲವನ್ನೂ ಹೇಳುತ್ತಿದ್ದಾರೆ. ಅಷ್ಟಕ್ಕೂ ಮಂಜು ವೈಷ್ಣವಿ ಹಿಂದೆ ಸುತ್ತುತ್ತಿರುವುದೇಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡದೆ ಇರದು. ಅದಕ್ಕೂ ಉತ್ತರ ಇದೆ.
ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ಟಾಸ್ಕ್ ಅನುಸಾರ ಮನೆಯಲ್ಲಿ ಅತಿ ಹೆಚ್ಚು ಸೈಲೆಂಟ್ ಇರುವವರಿಗೆ ಮೈಕ್ ಹಾಗೂ ಅತಿಯಾಗಿ ಮಾತನಾಡುವವರಿಗೆ ಪ್ಲಾಸ್ಟರ್ ನೀಡಬೇಕಿತ್ತು. ಅತಿ ಹೆಚ್ಚು ಮಾತಾಡೋದು ಮಂಜು ಎಂದು ಮನೆಯ ಬಹುತೇಕರು ಹೇಳಿದ್ದರು. ಹೀಗಾಗಿ, ಮನೆ ಮಂದಿ ಅತಿ ಹೆಚ್ಚು ಪ್ಲಾಸ್ಟರ್ ನೀಡಿದ್ದು ಮಂಜುಗೆ. ಇನ್ನು, ಬಿಗ್ ಬಾಸ್ ಮನೆಯಲ್ಲಿ ನಾಲ್ಕು ವಾರ ಕಳೆದರೂ ವೈಷ್ಣವಿ ಅಷ್ಟಾಗಿ ಮಾತನಾಡುವುದನ್ನು ಕಲಿತಿಲ್ಲ. ಹೀಗಾಗಿ, ವೈಷ್ಣವಿಗೆ ಎಲ್ಲರೂ ಮೈಕ್ ನೀಡಿದ್ದರು.
ಎಲ್ಲರೂ ಇಲ್ಲಿಗೆ ಟಾಸ್ಕ್ ಪೂರ್ಣಗೊಂಡಿದೆ ಎಂದೇ ಭಾವಿಸಿದ್ದರು. ಆದರೆ, ಅಲ್ಲಿ ಆಗಿದ್ದೇ ಬೆರೆ. ಬಿಗ್ ಬಾಸ್ ಧ್ವನಿಯಲ್ಲಿ ಆದೇಶವೊಂದು ಬಂದಿತ್ತು. ಇದರ ಅನುಸಾರ, ಮುಂದಿನ ಆದೇಶ ಬರುವವರೆಗೂ ಮಂಜು ಮಾತನಾಡುವ ಹಾಗಿಲ್ಲ. ಯಾರ ಜತೆಯಾದರೂ ಮಾತನಾಡಬೇಕು ಎಂದರೆ ವೈಷ್ಣವಿ ಮೂಲಕವೇ ಮಾತುಕತೆ ನಡೆಯಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಅಷ್ಟೇ ಅಲ್ಲ ಇಲ್ಲೊಂದು ಟ್ವಿಸ್ಟ್ ಕೂಡ ನೀಡಲಾಗಿತ್ತು.
ವೈಷ್ಣವಿ ಜತೆಯೂ ಮಂಜು ಮಾತನಾಡುವಂತಿಲ್ಲ. ಅವರ ಜತೆ ಸನ್ನೆ ಮೂಲಕವೇ ಎಲ್ಲವನ್ನೂ ಹೇಳಬೇಕು. ಹೀಗಾಗಿ, ಮಂಜು ಸದಾ ವೈಷ್ಣವಿ ಹಿಂದೆಯೇ ಸುತ್ತುತ್ತಿದ್ದಾರೆ. ಅಷ್ಟೇ ಅಲ್ಲ, ವೈಷ್ಣವಿಗೆ ಸನ್ನೆಯ ಮೂಲಕವೇ ಎಲ್ಲವನ್ನೂ ಹೇಳುತ್ತಿದ್ದಾರೆ.
ಸದ್ಯ, ದಿವ್ಯಾ ನಿಧಾನವಾಗಿ ಮಂಜು ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಪ್ರಶಾಂತ್ ಸಂಬರಗಿ ಅವರು ದಿವ್ಯಾ ಸುರೇಶ್ ಬಳಿ ಆಪ್ತ ಸಮಾಲೋಚನೆ ನಡೆಸಿ ಮಂಜು ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದಾರೆ. ಒಂದೊಮ್ಮೆ ಮಂಜ-ದಿವ್ಯಾ ದೂರವಾದರೆ, ಮಂಜು ಹೆಚ್ಚಾಗಿ ವೈಷ್ಣವಿ ಜತೆ ಕಾಲ ಕಳೆದರೂ ಅಚ್ಚರಿ ಇಲ್ಲ.
ಇದನ್ನೂ ಓದಿ: BBK8: ’ಮಂಜುನ ಮದ್ವೆ ಆಗೋಕೆ ಚಾನ್ಸೇ ಇಲ್ಲ’: ಸಂಬರಗಿ ಬಳಿ ಎಲ್ಲವನ್ನೂ ಬಿಚ್ಚಿಟ್ಟ ದಿವ್ಯಾ ಸುರೇಶ್