
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದಕ್ಷಿಣ ಭಾರತದಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಕನ್ನಡದಿಂದ ವೃತ್ತಿಜೀವನ ಆರಂಭಿಸಿದ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೇ ಗ್ಲೋಬಲ್ ಲೆವೆಲ್ನಲ್ಲೂ ಅವರು ಹವಾ ಮಾಡುತ್ತಿದ್ದಾರೆ. ನಟ ‘ದಳಪತಿ’ ವಿಜಯ್ (Thalapathy Vijay) ಜೊತೆ ಅವರು ‘ವಾರಿಸು’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಥಮನ್ ಎಸ್. ಸಂಗೀತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ರಂಜಿದಮೆ..’ ಹಾಡು ಸೂಪರ್ ಹಿಟ್ ಆಗಿದೆ. ಪ್ರಪಂಚದಾದ್ಯಂತ ಈ ಸಾಂಗ್ ಸಖತ್ ಸೌಂಡು ಮಾಡುತ್ತಿದೆ. ಆ ಮೂಲಕ ‘ವಾರಿಸು’ (Varisu) ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ.
‘ರಂಜಿದಮೆ..’ ಹಾಡಿನಲ್ಲಿ ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಕೆಮಿಸ್ಟ್ರಿ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅಂದಹಾಗೆ, ಸದ್ಯಕ್ಕೆ ರಿಲೀಸ್ ಆಗಿರುವುದು ಲಿರಿಕಲ್ ವಿಡಿಯೋ ಮಾತ್ರ. ಯೂಟ್ಯೂಬ್ ಗ್ಲೋಬಲ್ ಚಾರ್ಟ್ಸ್ನಲ್ಲಿ ಈ ಸಾಂಗ್ 2ನೇ ಸ್ಥಾನ ಪಡೆದುಕೊಂಡಿದೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ.
ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಂಗೀತ ನಿರ್ದೇಶಕ ಥಮನ್ ಎಸ್. ಅವರು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಕೆಲಸಕ್ಕೆ ಈ ಪರಿ ಮೆಚ್ಚುಗೆ ಸಿಗುತ್ತಿರುವುದಕ್ಕೆ ಅವರು ಹಿರಿಹಿರಿ ಹಿಗ್ಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೂ ಈ ವಿಚಾರ ಹೆಮ್ಮೆ ತಂದಿದೆ. ಸದ್ಯ ಯೂಟ್ಯೂಬ್ನಲ್ಲಿ ‘ರಂಜಿದಮೆ..’ ಹಾಡು 58 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.
‘ವಾರಿಸು’ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಮೂಲಕ ದಿಲ್ ರಾಜು ಮತ್ತು ಶಿರಿಷ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. 2023ರ ಜನವರಿ 12ಕ್ಕೆ ‘ವಾರಿಸು’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾಗೆ ಭರ್ಜರಿ ಸ್ವಾಗತ ಕೋರಲು ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಫ್ಯಾನ್ಸ್ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
‘ದಳಪತಿ’ ವಿಜಯ್ ಮತ್ತು ಎಂಎಂ ಮಾನಸಿ ಅವರು ಜೊತೆಯಾಗಿ ‘ರಂಜಿದಮೆ..’ ಹಾಡಿಗೆ ಧ್ವನಿ ನೀಡಿದ್ದಾರೆ. ವಿಜಯ್ ಜೊತೆ ರಶ್ಮಿಕಾ ಮಂದಣ್ಣ ಅವರು ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಸದ್ಯಕ್ಕಂತೂ ಈ ಹಾಡು ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:55 pm, Sun, 20 November 22