ವೆಟ್ರಿಮಾರನ್ (Vetrimaran) ನಿರ್ದೇಶನದ ವಿಡುದಲೈ ಪಾರ್ಟ್ 1 (Viduthalai Part 1) ಸಿನಿಮಾ ಒಂದು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ವಿಜಯ್ ಸೇತುಪತಿ (Vijay Sethupathi), ಸೂರಿ (Soori), ಗೌತಮ್ ಮೆನನ್, ರಾಜೀವ್ ಮೆನನ್ ನಟಿಸಿರುವ ಈ ಸಿನಿಮಾ ಪೊಲೀಸ್ ಕಾನ್ಸ್ಟೆಬಲ್ ಹಾಗೂ ಶಸಸ್ತ್ರ ಕ್ರಾಂತಿಕಾರಿ ಹೋರಾಟಗಾರನೊಬ್ಬನ ನಡುವಿನ ಕತೆಯನ್ನು ಒಳಗೊಂಡಿದೆ. ಪಾರ್ಟ್ 1ನೋಡಿದವರು ಪಾರ್ಟ್ 2 ಸಿನಿಮಾಕ್ಕಾಗಿ ಕಾಯುತ್ತಿರುವಾಗಲೇ ಸಿನಿಮಾ ಕತೆಯ ಪ್ರಮುಖ ಎಳೆಯೊಂದನ್ನು ವೆಟ್ರಿಮಾರನ್ ಬಿಟ್ಟುಕೊಟ್ಟಿದ್ದಾರೆ.
ಪಾರ್ಟ್ 1 ನಲ್ಲಿ ಸಾಮಾನ್ಯ ಕಾನ್ಸ್ಟೆಬಲ್ ಆಗಿರುವ ಕುಮರೇಸನ್, ಈವರೆಗೆ ಯಾರ ಕೈಗೂ ಸಿಗದೇ ಇದ್ದ ಕ್ರಾಂತಿಕಾರಿ ಹೋರಾಟಗಾರನ ಗುಂಪಿನ ನಾಯಕ ವಾದಿಯಾರ್ ಅನ್ನು ಹಿಡಿಯುತ್ತಾನೆ, ತಮ್ಮದೇ ಪೊಲೀಸರ ಗುಂಪಿನ ಕೈಗೆ ಸಿಕ್ಕಿ ಹಿಂಸೆ ಅನುಭವಿಸುತ್ತಿರುವ ತನ್ನ ಮೆಚ್ಚಿನ ಹುಡುಗಿಯನ್ನು ಬಿಡಸಲಿಕ್ಕಾಗಿ ಈ ಸಾಹಸವನ್ನು ಕುಮರೇಸನ್ ಮಾಡಿದ್ದಾನೆ. ವಾದಿಯಾರ್ ಬಂಧನ ದೃಶ್ಯಕ್ಕೆ ವಿಡುದಲೈ ಸಿನಿಮಾದ ಮೊದಲ ಭಾಗ ಮುಗಿದಿತ್ತು.
ಇದೀಗ ಸಂದರ್ಶನವೊಂದರಲ್ಲಿ ಸಿನಿಮಾದ ಎರಡನೇ ಭಾಗದ ಗುಟ್ಟು ರಟ್ಟು ಮಾಡಿರುವ ವೆಟ್ರಿಮಾರನ್, ಎರಡನೇ ಭಾಗದ ಕತೆಯು ಎರಡು ಭಾಗಗಳಲ್ಲಿ ನಡೆಯುತ್ತದೆ. ಕತೆಯ ಒಂದು ಎಳೆ ದಟ್ಟ ಅರಣ್ಯದ ಒಳಗೆ ನಡೆದರೆ ಇನ್ನೊಂದು ಎಳೆ ಗೆಸ್ಟ್ ಹೌಸ್ ಒಂದರ ಒಳಗೆ ನಡೆಯುತ್ತದೆ. ಎರಡನೇ ಭಾಗದಲ್ಲಿ ನಡೆಯುವ ಬಹುತೇಕ ಸಂಘಟನೆಗಳು ಚೀಫ್ ಸೆಕರೇಟರಿ ಸುಬ್ರಹ್ಮಣಿಯನ್ ಅವರ ಕಾರಣದಿಂದಲೇ ನಡೆಯುತ್ತದೆ ಎಂದಿದ್ದಾರೆ ವೆಟ್ರಿಮಾರನ್. ಅದರ ಜೊತೆಗೆ ಎರಡನೇ ಭಾಗದ ಕತೆಯ ಮತ್ತೊಂದು ಪ್ರಮುಖ ಎಳೆಯನ್ನೂ ಬಿಟ್ಟುಕೊಟ್ಟಿರುವ ವೆಟ್ರಿಮಾರನ್, ಮೊದಲ ಭಾಗದ ಕೊನೆಯಲ್ಲಿ ಖಡ್ಡಾಯ ರಜೆಯ ಮೇಲೆ ಊರಿಗೆ ಹೋಗುವ ಪೊಲೀಸ್ ಇನ್ಸ್ಪೆಕ್ಟರ್ ಅಮುಧನ್ ಪಾತ್ರ ಮರಳಿ ಬಂದು ಬಹಳ ಪ್ರಮುಖ ತಿರುವೊಂದನ್ನು ಕತೆಗೆ ನೀಡಲಿದೆ ಎಂದಿದ್ದಾರೆ. ಅಲ್ಲದೆ, ಮೊದಲ ಭಾಗದ ಕತೆಯಲ್ಲಿ ಪ್ರಮುಖ ಪಾತ್ರಧಾರಿಯಾಗಿರುವ ಡಿಎಸ್ಪಿ ಯನ್ನು ಸೇವೆಯಿಂದ ವಜಾ ಮಾಡಲಾಗುತ್ತದೆ ಎಂಬ ಅಂಶವನ್ನೂ ವೆಟ್ರಿ ಬಿಟ್ಟುಕೊಟ್ಟಿದ್ದಾರೆ.
ವೆಟ್ರಿಮಾರನ್ ಬಿಟ್ಟುಕೊಟ್ಟಿರುವ ಸುಳಿವಿನ ಪ್ರಕಾರ ಊಹಿಸುವುದಾದರೆ ವಾದಿಯಾರ್ ಅನ್ನು ಹಿಡಿದಿರುವ ಸೂರಿಯೇ, ವಾದಿಯಾರ್ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಸಾಧ್ಯತೆ ಇದೆ. ವಾದಿಯಾರ್ ಜೊತೆ ಅರಣ್ಯ ಸೇರಿ ಪೊಲೀಸರಿಗೆ ಎದುರಾಗಿ ನಿಂತು ಹೋರಾಡುವ ಕತೆಯನ್ನು ಎರಡನೇ ಭಾಗ ಒಳಗೊಂಡಿರಬಹುದಾಗಿ ಊಹಿಸಬಹುದಾಗಿದೆ. ಮೊದಲ ಭಾಗದಲ್ಲಿ ಒಳ್ಳೆಯ ಪೊಲೀಸ್ ಆಗಿದ್ದರೂ ಕೆಲಸ ಉಳಿಸಿಕೊಳ್ಳಲು ಕಡ್ಡಾಯ ರಜೆಗೆ ತೆರಳಿರುವ ಇನ್ಸ್ಪೆಕ್ಟರ್ ಅಮುದನ್, ಸೂರಿಯ ದಾರಿ ತಪ್ಪಿಸಿ ಅವರ ಸಾವಿಗೆ ಕಾರಣವಾಗುವ ಸಾಧ್ಯತೆಯೂ ಇದೆ. ಸೂರಿ, ಅಮುದನ್ ಅನ್ನು ಆದರ್ಶವಾಗಿ ಕಾಣುವ ಕಾರಣ ಅಮುದನ್ ಮೂಲಕವೇ ಸೂರಿಯನ್ನು ಪೊಲೀಸರು ಭೇಟೆಯಾಡಬಹುದಾದ ಸಾಧ್ಯತೆ ಇದೆ.
ಸಿನಿಮಾದ ಕತೆ ಏನೇ ಇರಲಿ ವೆಟ್ರಿಮಾರನ್ ಅದನ್ನು ಅದ್ಭುತವಾಗಿ ತೆರೆಗೆ ತರಲಿದ್ದಾರೆ ಎಂಬುದನ್ನು ಅನುಮಾನವಿಲ್ಲ. ಈ ವರೆಗೆ ಕೆಲವು ಅತ್ಯದ್ಭುತ ಸಿನಿಮಾಗಳನ್ನು ವೆಟ್ರಿಮಾರನ್ ನಿರ್ದೇಶನ ಮಾಡಿದ್ದಾರೆ. ಪೊಲ್ಲಾಧವನ್, ಆಡುಕುಲಂ, ವಡಾ ಚೆನ್ನೈ, ಅಸುರನ್, ವಿಸಾರನೈ ಹಾಗೂ ಈಗ ಸಿನಿಮಾಗಳನ್ನು ವೆಟ್ರಿಮಾರನ್ ನಿರ್ದೇಶನ ಮಾಡಿದ್ದಾರೆ. ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರ ನಿರ್ದೇಶನದ ವಿಸಾರನೈ ಸಿನಿಮಾ ಆಸ್ಕರ್ಗೆ ಅಧಿಕೃತವಾಗಿ ಭಾರತದಿಂದ ಕಳಿಸಲ್ಪಟ್ಟಿತ್ತು. ವಿಡುದಲೈ 2 ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನೂ ಹಲವು ದೃಶ್ಯಗಳ ಚಿತ್ರೀಕರಣ ಬಾಕಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ