
ವೆಟ್ರಿಮಾರನ್ (Vetrimaran) ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರುಗಳಲ್ಲಿ ಒಬ್ಬರು. ಆಸ್ಕರ್ಗೆ ಕಳಿಸಲ್ಪಟ್ಟಿದ್ದ ‘ವಿಸಾರನೈ’, ಹಲವು ರಾಷ್ಟ್ರಪ್ರಶಸ್ತಿಗಳನ್ನು, ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದ ‘ಆಡುಕುಲಂ’, ‘ಅಸುರನ್’, ‘ವಡ ಚೆನ್ನೈ’, ‘ವಿಡುದಲೈ’ ಇನ್ನೂ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವೆಟ್ರಿಮಾರನ್ ಇದೀಗ ಮತ್ತೊಂದು ಹೊಸ ಸಿನಿಮಾದೊಂದಿಗೆ ಬಂದಿದ್ದಾರೆ. ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಬಲು ರಕ್ತಸಿಕ್ರವಾಗಿದೆ ಈ ಟೀಸರ್.
ವೆಟ್ರಿಮಾರನ್ ನಿರ್ದೇಶನ ಮಾಡಿರುವ ‘ವಡ ಚೆನ್ನೈ’ (ಉತ್ತರ ಚೆನ್ನೈ) ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಜನ ಸ್ನೇಹಿ ರೌಡಿ ರಾಜನ್ ಕೊಲೆಗೆ ಯುವಕನೊಬ್ಬ ದ್ವೇಷ ತೀರಿಸಿಕೊಳ್ಳುವ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಸಿನಿಮಾನಲ್ಲಿ ಧನುಶ್ ಅದ್ಭುತವಾಗಿ ನಟಿಸಿದ್ದರು. ‘ವಡ ಚೆನ್ನೈ’ ಸಿನಿಮಾನಲ್ಲಿ ಹಲವು ಉಪಕತೆಗಳು ಸಹ ಇದ್ದವು. ಇದೀಗ ಅದೇ ‘ವಡ ಚೆನ್ನೈ’ ಪ್ರದೇಶದ ಹೊಸ ಕತೆಯೊಂದನ್ನು ಹೇಳಲು ವೆಟ್ರಿಮಾರನ್ ಮುಂದಾಗಿದ್ದಾರೆ.
ವೆಟ್ರಿಮಾರನ್, ‘ಅರಸನ್’ ಹೆಸರಿನ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಸಿನಿಮಾನಲ್ಲಿ ಸಿಂಭು ನಾಯಕ. ಇದೊಂದು ನಿಜ ಘಟನೆ ಆಧರಿತ ಸಿನಿಮಾ ಎಂಬುದನ್ನು ಬಲು ಜಾಣತನದಿಂದ ವೆಟ್ರಿಮಾರನ್ ಇಂದು ಬಿಡುಗಡೆ ಆಗಿರುವ ಪ್ರೋಮೊನಲ್ಲಿ ತೋರಿಸಿದ್ದಾರೆ. ಸಿನಿಮಾದ ನಾಯಕ ಸಿಂಭು ನ್ಯಾಯಾಲಯದ ಮುಂದೆ ನಿಂತು ನಿರ್ದೇಶಕನೊಬ್ಬನಿಗೆ (ನೆಲ್ಸನ್) ‘ನಾನು ನಿಮ್ಮ ಮುಂದೆ ಹೇಳುತ್ತಿರುವುದೆಲ್ಲವೂ ನಿಜ. ನಡೆದ ಘಟನೆ, ನಡೆದ ಸ್ಥಳ, ಕೊಂದವರು, ಕೊಲೆ ಆದವರು ಎಲ್ಲವೂ ನಿಜ. ಆದರೆ ನೀವು ಮಾತ್ರ ಸಿನಿಮಾ ಮಾಡುವಾಗ ಸಾಮಾನ್ಯವಾಗಿ ಹಾಕುತ್ತೀರಲ್ಲ ಇದೆಲ್ಲ ಕಾಕತಾಳೀಯ ಎಂದು ಆ ಬೋರ್ಡ್ ಹಾಕಿಬಿಡಿ’ ಎಂದು ಹೇಳುತ್ತಾರೆ. ಸಿಂಭು ಪಾತ್ರ ಆ ಡೈಲಾಗ್ ಹೇಳಿದಾಗಲೇ ಸಿನಿಮಾಕ್ಕೂ ನಿಜ ಘಟನೆಗೂ ಸಂಬಂಧ ಇಲ್ಲ, ಸಂಬಂಧ ಇದ್ದರೆ ಅದು ಕಾಕತಾಳೀಯ’ ಎಂಬ ಬೋರ್ಡ್ ಪರದೆಯ ಮೇಲೆ ಕಾಣುತ್ತದೆ.
ಇದನ್ನೂ ಓದಿ:ಸಿನಿಮಾ ನಿರ್ಮಾಣ ತ್ಯಜಿಸಿದ ವೆಟ್ರಿಮಾರನ್, ಕಾರಣ ಏನು?
ಪ್ರೋಮೊ ಮುಂದುವರೆದಂತೆ ಸಿಂಭು ಓಡಿ ಹೋಗಿ ಕಟಕಟೆಯಲ್ಲಿ ನಿಲ್ಲುತ್ತಾರೆ. ನ್ಯಾಯಾಧೀಶರು ಒಂದೇ ರಾತ್ರಿಯಲ್ಲಿ ಮೂರು ಕೊಲೆ ಮಾಡಿರುವ ಆರೋಪ ಇದೆ ನಿನ್ನ ಮೇಲೆ ಒಪ್ಪಿಕೊಳ್ಳುತ್ತೀಯ ಎನ್ನುತ್ತಾರೆ ಅದಕ್ಕೆ ಸಿಂಭು, ಇಲ್ಲ ನನ್ನನ್ನು ಸುಳ್ಳೆ ಇದರಲ್ಲಿ ಸಿಲುಕಿಸಿದ್ದಾರೆ. ಘಟನೆ ನಡೆದ ದಿನ ರಾತ್ರಿ ಸಿನಿಮಾಕ್ಕೆ ಹೋಗಿದ್ದೆ ನನಗೂ ಕೊಲೆಗೂ ಸಂಬಂಧ ಇಲ್ಲ ಎಂದು ಬಲು ವಿನಯದಿಂದ ನ್ಯಾಯಾಧೀಶರ ಮುಂದೆ ಹೇಳುತ್ತಾರೆ.
ಅದರ ಬೆನ್ನಲ್ಲೆ ಸಿಂಭು ಸಂಪೂರ್ಣ ರಕ್ತ ಸಿಕ್ತನಾಗಿ ಕೈಯಲ್ಲಿ ಕತ್ತಿ ಹಿಡಿದುಕೊಂಡು ಕಗ್ಗತ್ತಲಲ್ಲಿ ನಡೆದುಕೊಂಡು ಬರುತ್ತಿರುವ ಹಳೆಯ ಸೀನ್ ಒಂದನ್ನು ವೆಟ್ರಿ ತೋರಿಸಿದ್ದಾರೆ. ಸಿಂಭು ಪಾತ್ರ ಯುವಕನಿದ್ದಾಗ ಒಂದೇ ರಾತ್ರಿ ಮಾಡಿದ ಮೂರು ಕೊಲೆಗಳ ಬಗೆಗಿನ ಸಿನಿಮಾ ಅನ್ನು ಇದು ಒಳಗೊಂಡಿದ್ದು, ವೆಟ್ರಿಮಾರನ್ ಈಗ ಹೇಳುತ್ತಿರುವ ‘ಅರಸನ್’ ಕತೆ ಅದೇ ವಡ ಚೆನ್ನೈ ಭಾಗದ ಕತೆಯಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ