ನಟಿ ತ್ರಿಶಾ ಕೃಷ್ಣನ್ ಎಕ್ಸ್ ಖಾತೆ ಹ್ಯಾಕ್; ತಲೆ ನೋವು ತಂದಿಟ್ಟ ಸೈಬರ್ ಖದೀಮರು

ತ್ರಿಶಾ ಕೃಷ್ಣನ್ ಅವರ ‘ಎಕ್ಸ್’ (ಟ್ವಿಟರ್​) ಖಾತೆಯನ್ನು 60 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಈ ಖಾತೆಯನ್ನು ಸೈಬರ್ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಕ್ರಿಪ್ಟೋ ಕರೆನ್ಸಿ ವಂಚನೆಗೆ ಸಂಬಂಧಿಸಿದವರು ಈ ಕೃತ್ಯ ಎಸಗಿದ್ದಾರೆ. ಅಭಿಮಾನಿಗಳು ಈ ಮೋಸಕ್ಕೆ ಬಲಿ ಆಗಬಾರದು ಎಂಬ ಉದ್ದೇಶದಿಂದ ತ್ರಿಶಾ ಅವರು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ನಟಿ ತ್ರಿಶಾ ಕೃಷ್ಣನ್ ಎಕ್ಸ್ ಖಾತೆ ಹ್ಯಾಕ್; ತಲೆ ನೋವು ತಂದಿಟ್ಟ ಸೈಬರ್ ಖದೀಮರು
Trisha Krishnan

Updated on: Feb 11, 2025 | 10:51 PM

ಸೆಲೆಬ್ರಿಟಿಗಳು ತಮ್ಮ ಫ್ಯಾನ್ಸ್ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್ ಮೀಡಿಯಾ ಬಳಸುತ್ತಾರೆ. ಇಂಥ ಸೆಲೆಬ್ರಿಟಿಗಳ ಮೇಲೆ ಸೈಬರ್ ಖದೀಮರು ಕಣ್ಣು ಇಟ್ಟಿರುತ್ತಾರೆ. ಹ್ಯಾಕರ್​ಗಳು ಮಾಡುವ ಕಿತಾಪತಿಗೆ ನಟ-ನಟಿಯರು ತೊಂದರೆ ಅನುಭವಿಸಬೇಕಾಗುತ್ತದೆ. ಸದ್ಯಕ್ಕೆ ನಟಿ ತ್ರಿಶಾ ಕೃಷ್ಣನ್ ಅವರಿಗೆ ಸೈಬರ್ ಕಿಡಿಗೇಡಿಗಳಿಂದ ಸಮಸ್ಯೆ ಆಗಿದೆ. ಅವರ ಎಕ್ಸ್ (ಟ್ವಿಟರ್) ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ಬಗ್ಗೆ ತ್ರಿಶಾ ಅವರು ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕ್ರಿಪ್ಟೋ ಕರೆನ್ಸಿಯ ಹಗರಣದಲ್ಲಿ ತೊಡಗಿಕೊಂಡಿರುವ ಸ್ಕ್ಯಾಮರ್​ಗಳು ತ್ರಿಶಾ ಕೃಷ್ಣನ್ ಅವರ ಟ್ವಿಟರ್ ಖಾತೆಯಲ್ಲಿ ಅಸಂಬದ್ಧ ಪೋಸ್ಟ್​ಗಳನ್ನು ಮಾಡಿದ್ದಾರೆ. ಇದರಿಂದ ತ್ರಿಶಾ ಅವರ ಫಾಲೋವರ್ಸ್​ ಯಾಮಾರುವ ಅಪಾಯ ಇದೆ. ಹಾಗಾಗಿ ಕೂಡಲೇ ತಮ್ಮ ಇನ್​ಸ್ಟಾಗ್ರಾಮ್ ಖಾತೆಯ ಮೂಲಕ ತ್ರಿಶಾ ಅವರು ಅಭಿಮಾನಿಗಳನ್ನು ಎಚ್ಚರಿಸಿದ್ದಾರೆ. ತಮ್ಮ ಎಕ್ಸ್ ಖಾತೆ ಹ್ಯಾಕ್ ಆಗಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಈ ಖಾತೆಗೆ 60 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

‘ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಅದು ಸರಿ ಆಗುವ ತನಗೆ ಏನೇ ಪೋಸ್ಟ್ ಆದರೂ ಅದು ನನ್ನಿಂದ ಅಲ್ಲ. ಧನ್ಯವಾದಗಳು’ ಎಂದು ತ್ರಿಶಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಅಂದಹಾಗೆ, ತ್ರಿಶಾ ಅವರು ಈ ರೀತಿ ಹ್ಯಾಕರ್​ಗಳ ಕೃತ್ಯಕ್ಕೆ ಗುರಿ ಆಗಿದ್ದು, ಇದೇ ಮೊದಲೇನೂ ಅಲ್ಲ. ಈ ಮುಂಚೆ ಕೂಡ ಅವರಿಗೆ ಇಂಥ ಕಿರಿಕಿರಿ ಉಂಟಾಗಿತ್ತು. ಈಗ ಮತ್ತೆ ಅವರನ್ನೇ ಹ್ಯಾಕರ್​ಗಳು ಟಾರ್ಗೆಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಕ್ಷಮೆ ಕೇಳಿ, ವಿಡಿಯೋ ಡಿಲೀಟ್​ ಮಾಡಿಸಿ, ಹಣ ನೀಡಿ’: ಎವಿ ರಾಜುಗೆ ಬಿಸಿ ಮುಟ್ಟಿಸಿದ ತ್ರಿಶಾ

ತ್ರಿಶಾ ಕೃಷ್ಣನ್ ಅವರಿಗೆ ಈಗ 41 ವರ್ಷ ವಯಸ್ಸು. ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಅವರು ಆ್ಯಕ್ಟೀವ್ ಆಗಿದ್ದಾರೆ. ಇಂದಿಗೂ ಕೂಡ ತ್ರಿಶಾ ಅವರ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಗ್ಲಾಮರ್ ಮತ್ತು ಫಿಟ್ನೆಸ್ ಕಾಪಾಡಿಕೊಂಡಿರುವ ಅವರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ‘ವಿದಾಮುಯರ್ಚಿ’ ಸಿನಿಮಾದಲ್ಲಿ ಅಜಿತ್ ಕುಮಾರ್​ ಜೊತೆ ತ್ರಿಶಾ ನಟಿಸಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಿಲ್ಲ. ಮೊದಲ ದಿನ ಉತ್ತಮ ಗಳಿಕೆ ಆಗಿದ್ದರೂ ಕೂಡ ಎರಡನೇ ದಿನಕ್ಕೆ ಕುಸಿತ ಕಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.