‘ಕ್ಷಮೆ ಕೇಳಿ, ವಿಡಿಯೋ ಡಿಲೀಟ್ ಮಾಡಿಸಿ, ಹಣ ನೀಡಿ’: ಎವಿ ರಾಜುಗೆ ಬಿಸಿ ಮುಟ್ಟಿಸಿದ ತ್ರಿಶಾ
ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಎ.ವಿ. ರಾಜುಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ. ತ್ರಿಶಾ ಅವರು ಲೀಗಲ್ ನೋಟಿಸ್ ಕಳಿಸಿದ್ದಾರೆ. ಇದರಲ್ಲಿ ಅವರು ಹಲವು ಷರತ್ತುಗಳನ್ನು ಹಾಕಿದ್ದಾರೆ. 24 ಗಂಟೆಯೊಳಗೆ ಕ್ಷಮೆ ಕೇಳಬೇಕು, 4 ದಿನದೊಳಗೆ ಮಾನನಷ್ಟ ಪರಿಹಾರ ಹಣ ನೀಡಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ನಟಿ ತ್ರಿಶಾ (Trisha Krishnan) ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ತಮಿಳುನಾಡು ರಾಜಕಾರಣಿ ಎ.ವಿ. ರಾಜು (AV Raju) ಅವರಿಗೆ ಲೀಗಲ್ ನೋಟಿಸ್ ಕಳಿಸಲಾಗಿದೆ. ರಾಜು ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುವುದಾಗಿ ತ್ರಿಶಾ ಅವರು ಈ ಮೊದಲೇ ವಾರ್ನಿಂಗ್ ನೀಡಿದ್ದರು. ಅದಕ್ಕೆ ತಕ್ಕಂತೆಯೇ ಅವರು ಖಡಕ್ ಆಗಿ ನೋಟಿಸ್ (Legal Notice) ಕಳಿಸಿದ್ದಾರೆ. ಇದರಲ್ಲಿ ಅವರು ಒಂದಷ್ಟು ಷರತ್ತುಗಳನ್ನು ಹಾಕಿದ್ದಾರೆ. ಕ್ಷಮೆ ಕೇಳಬೇಕು, ವೈರಲ್ ಆಗಿರುವ ವಿಡಿಯೋ ಮತ್ತು ಸುದ್ದಿಗಳನ್ನು ಡಿಲೀಟ್ ಮಾಡಿಸಬೇಕು ಹಾಗೂ ಮಾನನಷ್ಟದ ಪರಿಹಾರ ನೀಡಬೇಕು ಎಂದು ತ್ರಿಶಾ ಕೃಷ್ಣನ್ ಅವರು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಎ.ವಿ. ರಾಜು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.
ಎ.ವಿ. ರಾಜು ಹೇಳಿದ್ದೇನು?
ಕೆಲವೇ ದಿನಗಳ ಹಿಂದೆ ಮಾಧ್ಯಮಗಳ ಜತೆ ಮಾತಾಡುವಾಗ ತ್ರಿಶಾ ಹೆಸರನ್ನು ಎ.ವಿ. ರಾಜು ಅವರು ಎಳೆದು ತಂದಿದ್ದರು. ‘ಲೈಂಗಿಕ ಬಯಕೆಗಾಗಿ ಎ. ವೆಂಕಟಾಚಲಂ ಅವರು ನಟಿ ತ್ರಿಶಾರನ್ನು 25 ಲಕ್ಷ ರೂ.ಗೆ ಕೇಳಿದ್ದರು. ಅದನ್ನು ಶಾಸಕ ಕರುಣಾಸ್ ವ್ಯವಸ್ಥೆ ಮಾಡಿದ್ದರು. ಇಂಥ ಕೆಲಸಕ್ಕಾಗಿ ಹಲವು ನಟಿಯರು ಇದ್ದಾರೆ’ ಎಂದು ಎ.ವಿ. ರಾಜು ಹೇಳಿದ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜು ಅವರ ಮಾತುಗಳನ್ನು ಅನೇಕರು ಖಂಡಿಸಿದ್ದಾರೆ. ತ್ರಿಶಾ ಅವರು ಕಾನೂನಿನ ಮೂಲಕ ಸಮರಕ್ಕೆ ಇಳಿದಿದ್ದಾರೆ.
ಎ.ವಿ. ರಾಜು ವೈರಲ್ ವಿಡಿಯೋ:
WTF this Trisha should file legal action against him,nowdays these guys are behaving very cheaply #Trisha | #TrishaKrishnan pic.twitter.com/Ip1ZClB8xS
— Sekar 𝕏 (@itzSekar) February 20, 2024
ನೋಟಿಸ್ ತಲುಪಿದ 24 ಗಂಟೆಯೊಳಗೆ ಕ್ಷಮೆ ಕೇಳದಿದ್ದರೆ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತ್ರಿಶಾ ಕೃಷ್ಣನ್ ಪರ ವಕೀಲರು ನೋಟಿಸ್ನಲ್ಲಿ ತಿಳಿಸಿದ್ದಾರೆ. ನಾಲ್ಕು ದಿನಗಳ ಒಳಗೆ ಮಾನನಷ್ಟ ಪರಿಹಾರ ಹಣವನ್ನು ನೀಡಬೇಕು. ಈಗಾಗಲೇ ವೈರಲ್ ಆಗಿರುವ ವಿಡಿಯೋ ಮತ್ತು ಪ್ರಕಟ ಆಗಿರುವ ಸುದ್ದಿಗಳನ್ನು ನಿಮ್ಮದೇ ಖರ್ಚಿನಲ್ಲಿ ಡಿಲೀಟ್ ಮಾಡಿಸಬೇಕು. ಇನ್ಮುಂದೆ ನಟಿಯ ವಿರುದ್ಧ ಯಾವುದೇ ರೀತಿಯಲ್ಲಿ ಮಾನಹಾನಿ ಆಗುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ತಾಕೀತು ಮಾಡಲಾಗಿದೆ.
ತ್ರಿಶಾ ಕಳಿಸಿದ ಲೀಗಲ್ ನೋಟಿಸ್:
— Trish (@trishtrashers) February 22, 2024
ಒಂದು ಇಂಗ್ಲಿಷ್ ದಿನಪತ್ರಿಕೆಯಲ್ಲಿ ಹಾಗೂ 5 ಲಕ್ಷಕ್ಕಿಂತ ಹೆಚ್ಚು ಓದುಗರನ್ನು ಹೊಂದಿರುವ ತಮಿಳಿ ದಿನಪತ್ರಿಕೆಯಲ್ಲಿ ಕ್ಷಮಾಪಣೆ ಪತ್ರವನ್ನು ಪ್ರಕಟಿಸಬೇಕು. ಆರೋಪ ಮಾಡಿದ ರೀತಿಯಲ್ಲೇ ಸುದ್ದಿ ವಾಹಿನಿಗಳ ಕ್ಯಾಮೆರಾ ಎದುರಲ್ಲಿ ಕ್ಷಮೆ ಕೇಳಿಬೇಕು. ಕ್ಷಮೆ ಕೇಳಿದ ವಿಡಿಯೋವನ್ನು ಯೂಟ್ಯೂಬ್ನಲ್ಲಿಯೂ ಅಪ್ಲೋಡ್ ಮಾಡಬೇಕು ಎಂದು ಎ.ವಿ. ರಾಜು ಅವರಿಗೆ ತ್ರಿಶಾ ಕೃಷ್ಣನ್ ಸೂಚಿಸಿದ್ದಾರೆ.
ಇದನ್ನೂ ಓದಿ: ತ್ರಿಶಾ ಕೃಷ್ಣನ್ ಬಗ್ಗೆ ಅಸಹ್ಯ ಮಾತು; ಖಾರವಾಗಿ ಪ್ರತಿಕ್ರಿಯೆ ನೀಡಿದ ನಟಿ
ಈ ರೀತಿ ಖಡಕ್ ತಿರುಗೇಟು ನೀಡುವುದಾಗಿ ತ್ರಿಶಾ ಕೃಷ್ಣನ್ ಅವರು ಮೊದಲೇ ಎಚ್ಚರಿಸಿದ್ದರು. ‘ಪ್ರಚಾರಕ್ಕಾಗಿ ಕೀಳು ವ್ಯಕ್ತಿಗಳು ಎಷ್ಟು ಕೆಳಮಟ್ಟಕ್ಕೆ ಬೇಕಿದ್ದರೂ ಇಳಿಯುವುದನ್ನು ಮತ್ತೆಮತ್ತೆ ನೋಡಲು ಅಸಹ್ಯ ಅನಿಸುತ್ತದೆ. ಖಂಡಿತವಾಗಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ನನ್ನ ಲೀಗಲ್ ಡಿಪಾರ್ಟ್ಮೆಂಟ್ನವರು ಇದೆಲ್ಲವನ್ನು ನೋಡಿಕೊಳ್ಳುತ್ತಾರೆ’ ಎಂದು ತ್ರಿಶಾ ಕೃಷ್ಣನ್ ಟ್ವೀಟ್ ಮಾಡಿದ್ದರು. ಅದರಂತೆಯೇ ಈಗ ಕ್ರಮ ಕೈಗೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.