Beast: ‘ಬೀಸ್ಟ್​​’ಗೆ ಸಂಕಷ್ಟ; ಚಿತ್ರದ ಬಿಡುಗಡೆಯನ್ನೇ ಬ್ಯಾನ್ ಮಾಡಿದೆ ಈ ದೇಶ; ಕಾರಣವಾದರೂ ಏನು?

| Updated By: shivaprasad.hs

Updated on: Apr 05, 2022 | 11:29 AM

Beast Banned in Kuwait | Vijay: ‘ಬೀಸ್ಟ್’ ಚಿತ್ರ ವಿಜಯ್ ನಟನೆಯ ನಿರೀಕ್ಷಿತ ಸಿನಿಮಾಗಳಲ್ಲೊಂದು. ಚಿತ್ರವನ್ನು ವಿಶ್ವದ ಹಲವು ದೇಶಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಆದರೆ ಕುವೈತ್ ಚಿತ್ರವನ್ನು ಬ್ಯಾನ್ ಮಾಡಿದೆ. ಇದಕ್ಕೆ ಕಾರಣಗಳೇನು? ಸಮಸ್ಯೆ ಪರಿಹಾರವಾಗಬಹುದೇ? ಇಲ್ಲಿದೆ ಮಾಹಿತಿ.

Beast: ‘ಬೀಸ್ಟ್​​’ಗೆ ಸಂಕಷ್ಟ; ಚಿತ್ರದ ಬಿಡುಗಡೆಯನ್ನೇ ಬ್ಯಾನ್ ಮಾಡಿದೆ ಈ ದೇಶ; ಕಾರಣವಾದರೂ ಏನು?
‘ಬೀಸ್ಟ್’ ಚಿತ್ರದಲ್ಲಿ ವಿಜಯ್
Follow us on

ಯಶ್ ನಟನೆಯ ‘ಕೆಜಿಎಫ್ 2’ಗೂ ಒಂದು ದಿನ ಮೊದಲು ವಿಜಯ್ (Vijay) ನಟನೆಯ ‘ಬೀಸ್ಟ್’ (Beast Movie) ರಿಲೀಸ್ ಆಗುತ್ತಿದೆ. ಏಪ್ರಿಲ್ 13ರಂದು ತೆರೆಕಾಣುತ್ತಿರುವ ‘ಬೀಸ್ಟ್’ ಕೂಡ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ತಮಿಳಿನಲ್ಲಿ ತಯಾರಾಗಿರುವ ಚಿತ್ರವು ಹಲವು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ. ಯುಗಾದಿಯಂದು ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿತ್ತು. ಕಮರ್ಷಿಯಲ್ ಮಾಸ್ ಎಂಟರ್​ಟೈನರ್ ಚಿತ್ರವಾಗಿರುವ ‘ಬೀಸ್ಟ್’ ಕತೆ ಬೇರೆ ಚಿತ್ರದಿಂದ ಪ್ರೇರಿತವಾದದ್ದೇ ಎಂಬ ಚರ್ಚೆಗಳೂ ನಡೆಯುತ್ತಿವೆ. ಅದೇನೇ ಇದ್ದರೂ ವಿಜಯ್​ಗೆ ಅಪಾರ ಅಭಿಮಾನಿಗಳಿರುವ ಕಾರಣ, ಅವರ ಚಿತ್ರ ವಿಶ್ವದ ಹಲವೆಡೆ ರಿಲೀಸ್ ಆಗುತ್ತಿದೆ. ಆದರೆ ಚಿತ್ರಕ್ಕೆ ಹೊಸ ಸಮಸ್ಯೆಯೊಂದು ಎದುರಾಗಿದ್ದು, ಕುವೈತ್ ‘ಬೀಸ್ಟ್’ ಚಿತ್ರದ ರಿಲೀಸ್​ಅನ್ನು ನಿಷೇಧಿಸಿದೆ ಎಂದು DNA ವರದಿ ಮಾಡಿದೆ.

ಬೀಸ್ಟ್​ ಟ್ರೇಲರ್​ನಲ್ಲಿ ಕತೆಯ ಕುರಿತು ಮಾಹಿತಿ ಬಿಟ್ಟುಕೊಡಲಾಗಿತ್ತು. ಭಯೋತ್ಪಾದಕರು ಮಾಲ್ ಒಂದನ್ನು ಹೈಜ್ಯಾಕ್ ಮಾಡುತ್ತಾರೆ. ನಾಯಕ ಮಾಲ್ ಒಳಗೇ ಇರುತ್ತಾನೆ. ಆತ ಎಲ್ಲರನ್ನೂ ಹೇಗೆ ಕಾಪಾಡುತ್ತಾನೆ ಎನ್ನುವುದು ಚಿತ್ರದ ಕತೆಯಾಗಿದೆ. ಆದರೆ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಕುವೈತ್​ ಚಿತ್ರವನ್ನು ಬ್ಯಾನ್ ಮಾಡಿದೆ ಎಂದು ಹೇಳಲಾಗಿದೆ.

‘ಬೀಸ್ಟ್​’ ಚಿತ್ರ ಬ್ಯಾನ್ ಮಾಡಲು ಕಾರಣ ಏನು? ಪೂರ್ಣ ವಿವರ: 

ಕುವೈತ್​ನ ಮಾಹಿತಿ ಸಚಿವಾಲಯವು ‘ಬೀಸ್ಟ್’ ರಿಲೀಸ್​ಗೆ ಅನುಮತಿ ನಿರಾಕರಿಸಿದೆ. ಆದರೆ ಇದಕ್ಕೆ ಖಚಿತ ಕಾರಣಗಳನ್ನು ನೀಡಿಲ್ಲ. ಆದರೆ ವಿಶ್ಲೇಷಕ ರಮೇಶ್ ಬಾಲಾ ಪ್ರಕಾರ, ಬೀಸ್ಟ್ ಚಿತ್ರದಲ್ಲಿ ಪಾಕಿಸ್ತಾನದ ಕುರಿತ ವಿಚಾರಗಳು, ಭಯೋತ್ಪಾದನೆ ಹಾಗೂ ಹಿಂಸೆಯ ವೈಭವೀಕರಣವಿರುವುದರಿಂದ ಅನುಮತಿ ನಿರಾಕರಿಸಲಾಗಿದೆ ಎಂದಿದ್ದಾರೆ.

ಕುವೈತ್​ನಲ್ಲಿ ಬ್ಯಾನ್ ಆದ ಚಿತ್ರಗಳಲ್ಲಿ ‘ಬೀಸ್ಟ್​’ ಮೊದಲನೆಯ ಚಿತ್ರವೇನೂ ಅಲ್ಲ. ಇತ್ತೀಚೆಗೆ ‘ಕುರುಪ್’, ‘ಎಫ್​ಐಆರ್​’ ಚಿತ್ರಗಳೂ ಬ್ಯಾನ್ ಆಗಿದ್ದವು. ಕುವೈತ್​ ಸೆನ್ಸಾರ್ ಮಂಡಳಿ ಚಿತ್ರಗಳ ವಿಷಯಗಳಲ್ಲಿ ಇತ್ತೀಚೆಗೆ ಕಠಿಣ ನಿಲುವು ತಳೆದಿದೆ ಎಂದೂ ರಮೇಶ್ ಬಾಲಾ ಹೇಳಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ, ಚಿತ್ರತಂಡ ಸಮಸ್ಯೆಯನ್ನು ಸದ್ಯದಲ್ಲೇ ಸರಿಪಡಿಸಲಿದೆ ಎನ್ನಲಾಗಿದೆ.

ರಮೇಶ್ ಬಾಲಾ ಟ್ವೀಟ್ ಇಲ್ಲಿದೆ:

‘ಬೀಸ್ಟ್’ ಚಿತ್ರವನ್ನು ನೆಲ್ಸನ್ ದಿಲೀಪ್​ಕುಮಾರ್ ನಿರ್ದೇಶಿಸಿದ್ದಾರೆ. ಸನ್ ಪಿಚ್ಚರ್ಸ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಏಪ್ರಿಲ್ 13ರಂದು ರಿಲೀಸ್ ಆಗಲಿರುವ ಈ ಚಿತ್ರಕ್ಕೂ ಹಾಗೂ ಯಶ್ ನಟನೆಯ ‘ಕೆಜಿಎಫ್ 2’ಗೂ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ ಎಂದು ಹೇಳಲಾಗುತ್ತಿದೆ. ಚಿತ್ರತಂಡದವರು ಪರಸ್ಪರ ಹಾರೈಸಿದ್ದು, ತಮ್ಮ ನಡುವೆ ಯಾವುದೇ ಪೈಪೋಟಿ ಇಲ್ಲ ಎಂದಿದ್ದಾರೆ. ಯಶ್ ‘ಕೆಜಿಎಫ್ 2’ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ಕೆಜಿಎಫ್ 2 ವರ್ಸಸ್ ಬೀಸ್ಟ್ ಅಲ್ಲ. ಕೆಜಿಎಫ್ 2 ಮತ್ತು ಬೀಸ್ಟ್’ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Samantha: ‘ತೆರೆಯ ಮೇಲೆ ಮತ್ತೆ ಒಂದಾಗಲಿದ್ದಾರೆ ಚೈ- ಸ್ಯಾಮ್’; ಸಮಂತಾ- ನಾಗ ಚೈತನ್ಯ ಕುರಿತ ಈ ಸುದ್ದಿಯ ಅಸಲಿಯತ್ತೇನು?

ಗ್ರೀಸ್​ನಲ್ಲಿ ತೆರೆಕಾಣಲಿರುವ ಮೊದಲ ದಕ್ಷಿಣ ಭಾರತೀಯ ಚಿತ್ರ ಕೆಜಿಎಫ್ 2; ರಿಲೀಸ್​ಗೂ ಮುನ್ನ ಹಲವು ದಾಖಲೆ ಬರೆದ ಯಶ್​ ಚಿತ್ರ

Published On - 11:25 am, Tue, 5 April 22