ಬಿಡುಗಡೆಗೆ ಮುನ್ನವೇ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ವಿಜಯ್ ದೇವರಕೊಂಡ ಸಿನಿಮಾ

Kingdom movie: ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಕಳೆದ ಕೆಲ ಸಿನಿಮಾಗಳಲ್ಲಿ ನಿರಾಸೆ ಅನುಭವಿಸಿರುವ ವಿಜಯ್ ದೇವರಕೊಂಡ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾ ಬಿಡುಗಡೆಗೆ ಮುಂಚೆಯೇ ಭರ್ಜರಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ.

ಬಿಡುಗಡೆಗೆ ಮುನ್ನವೇ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ವಿಜಯ್ ದೇವರಕೊಂಡ ಸಿನಿಮಾ
Vijay Deverakonda
Updated By: ರಾಜೇಶ್ ದುಗ್ಗುಮನೆ

Updated on: Jul 29, 2025 | 11:02 AM

ವಿಜಯ್ ದೇವರಕೊಂಡ (Vijay Deverakonda) ನಟನೆಯ ಕಳೆದ ಕೆಲ ಸಿನಿಮಾಗಳು ನಿರೀಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್​​ನಲ್ಲಿ ತೋರಿಲ್ಲ. ಇದು ಸ್ವತಃ ವಿಜಯ್ ದೇವರಕೊಂಡ ಮತ್ತು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹಾಗೆಂದು ವಿಜಯ್ ದೇವರಕೊಂಡಗೆ ಅವಕಾಶಗಳೇನು ಕಡಿಮೆ ಆಗಿಲ್ಲ. ಇದೀಗ ನಟ ವಿಜಯ್ ದೇವರಕೊಂಡ ‘ಕಿಂಗ್​ಡಮ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಇದೇ ತಿಂಗಳ 31ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾಕ್ಕಾಗಿ ಸಾಕಷ್ಟು ಶ್ರಮವನ್ನು ವಿಜಯ್ ದೇವರಕೊಂಡ ಹಾಕಿದ್ದು, ಶ್ರಮದ ಪ್ರತಿಫಲ ಸಿನಿಮಾ ಬಿಡುಗಡೆಗೆ ಮುನ್ನವೇ ಸಿಗಲಾರಂಭಿಸಿದೆ.

ವಿಜಯ್ ದೇವರಕೊಂಡ ನಟನೆಯ ‘ಕಿಂಗ್​ಡಮ್’ ಸಿನಿಮಾ ಬಿಡುಗಡೆಗೆ ಮುಂಚೆಯೇ 50 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾದ ವಿದೇಶ ಬಿಡುಗಡೆ ಹಕ್ಕು, ವಿಶೇಷವಾಗಿ ಉತ್ತರ ಅಮೆರಿಕದ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿವೆ. ಭಾರತದಲ್ಲಿಯೂ ಸಹ ಸಿನಿಮಾದ ಬಿಡುಗಡೆ ಹಕ್ಕಿಗೆ ಭರ್ಜರಿ ದರವೇ ನಿಗದಿ ಆಗಿದೆ. ಸಿನಿಮಾದ ಆಡಿಯೋ ಹಕ್ಕುಗಳ ಮಾರಾಟದಿಂದಲೂ ಉತ್ತಮ ಮೊತ್ತವೇ ದೊರಕಿದ್ದು, ಈ ವರೆಗೆ ಸುಮಾರು 50 ಕೋಟಿ ಬ್ಯುಸಿನೆಸ್ ಆಗಿದೆ ಎನ್ನಲಾಗುತ್ತಿದೆ. ಅದೂ ಡಿಜಿಟಲ್ ಹಕ್ಕು ಮಾರಾಟದ ಹೊರತಾಗಿ!

‘ಕಿಂಗ್​ಡಮ್’ ಸಿನಿಮಾದ ಡಿಜಿಟಲ್ ಹಕ್ಕು ಮಾರಾಟ ಹೊರತಾಗಿಯೇ ಈ ವರೆಗೆ 50 ಕೋಟಿ ಬ್ಯುಸಿನೆಸ್ ಆಗಿರುವುದು ಬಹಳ ಒಳ್ಳೆಯ ಬೆಳವಣಿಗೆ ಆಗಿದ್ದು, ಸಿನಿಮಾದ ನಿರ್ಮಾಪಕರು ಈಗಾಗಲೇ ಸೇಫ್ ಆಗಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಬಿಡುಗಡೆಯನ್ನು ಬಲು ಜೋರಾಗಿಯೇ ನಿರ್ಮಾಪಕರು ಮಾಡುತ್ತಿದ್ದು, ಆಂಧ್ರ-ತೆಲಂಗಾಣಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಕಳೆದ ಗುರುವಾರ ಬಿಡುಗಡೆ ಆದ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದ ಕಳಪೆ ಪ್ರದರ್ಶನ ಸಹ ‘ಕಿಂಗ್ಡಮ್​’ಗೆ ವರವಾಗಿ ಪರಿಣಮಿಸಲಿದೆ.

ಇದನ್ನೂ ಓದಿ:ಬಲು ವೇಗವಾಗಿ ಮುನ್ನುಗ್ಗುತ್ತಿದ್ದಾರೆ ನಟಿ ಭಾಗ್ಯಶ್ರೀ ಬೋರ್ಸೆ, ಯಾರೀಕೆ?

‘ಕಿಂಗ್ಡಮ್’ ಸಿನಿಮಾದ ಸೆನ್ಸಾರ್ ಮುಗಿದಿದ್ದು, ಯು/ಎ ಪ್ರಮಾಣ ಪತ್ರ ದೊರೆತಿದೆ. ವಿಜಯ್ ದೇವರಕೊಂಡ ಬಲು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ‘ಕಿಂಗ್ಡಮ್’ ಪಕ್ಕಾ ಆಕ್ಷನ್ ಥ್ರಿಲ್ಲರ್ ಕತೆ ಒಳಗೊಂಡಿದ್ದು, ಸಿನಿಮಾದ ಟ್ರೈಲರ್ ಇಂದು (ಜುಲೈ 26) ಬಿಡುಗಡೆ ಆಗಲಿದೆ. ತಿರುಪತಿಯಲ್ಲಿ ಇದಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಸಹ ಚಿತ್ರತಂಡ ಹಮ್ಮಿಕೊಂಡಿದೆ.

‘ಕಿಂಗ್ಡಮ್’ ಸಿನಿಮಾವನ್ನು ಗೌತಮ್ ತಿನುರಾರಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ಸೂಪರ್ ಹಿಟ್ ‘ಜರ್ಸಿ’ ಸಿನಿಮಾ ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನಾಗ ವಂಶಿ ಮತ್ತು ಸಾಯಿ ಸೌಜನ್ಯ. ಸಿನಿಮಾದ ನಾಯಕಿ ಭಾಗ್ಯಶ್ರೀ ಬೋರ್ಸೆ. ಮೊದಲು ಈ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Sat, 26 July 25