‘ರಣಬಾಲಿ’ ಸೆಟ್‌ನಲ್ಲಿ ವಿಜಯ್ ದೇವರಕೊಂಡ ಭಾರಿ ಬೇಡಿಕೆ ಇಟ್ಟರಾ? ವೈರಲ್ ಸ್ಕ್ರೀನ್‌ಶಾಟ್‌ಗೆ ಸಿಕ್ಕಿತು ಸ್ಪಷ್ಟನೆ

ವಿಜಯ್ ದೇವರಕೊಂಡ 'ರಣಬಾಲಿ' ಚಿತ್ರೀಕರಣದ ವೇಳೆ ಭಾರಿ ಬೇಡಿಕೆಗಳನ್ನು ಇಟ್ಟಿದ್ದಾರೆಂಬ ವೈರಲ್ ವದಂತಿಯನ್ನು ಅವರ ತಂಡ ತಳ್ಳಿಹಾಕಿದೆ. 123ತೆಲುಗು ಹೆಸರಿನಲ್ಲಿ ಹರಿದಾಡಿದ ಸ್ಕ್ರೀನ್‌ಶಾಟ್‌ಗಳು ಸಂಪೂರ್ಣ ನಕಲಿ ಹಾಗೂ ಉದ್ದೇಶಪೂರ್ವಕ ಅಪಪ್ರಚಾರ ಎಂದು ತಂಡ ಖಂಡಿಸಿದೆ. 123ತೆಲುಗು ಕೂಡ ಇಂತಹ ಯಾವುದೇ ವರದಿ ಪ್ರಕಟಿಸಿಲ್ಲವೆಂದು ತಿಳಿಸಿದೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬದಂತೆ ಅಭಿಮಾನಿಗಳಿಗೆ ಮನವಿ ಮಾಡಲಾಗಿದೆ.

‘ರಣಬಾಲಿ’ ಸೆಟ್‌ನಲ್ಲಿ ವಿಜಯ್ ದೇವರಕೊಂಡ ಭಾರಿ ಬೇಡಿಕೆ ಇಟ್ಟರಾ? ವೈರಲ್ ಸ್ಕ್ರೀನ್‌ಶಾಟ್‌ಗೆ ಸಿಕ್ಕಿತು ಸ್ಪಷ್ಟನೆ
ವಿಜಯ್-ರಶ್ಮಿಕಾ
Edited By:

Updated on: Jun 26, 2026 | 9:10 AM

ತೆಲುಗು ನಟ ವಿಜಯ್ ದೇವರಕೊಂಡ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ದೊಡ್ಡ ವದಂತಿಯೊಂದಕ್ಕೆ ಅವರ ಚಿತ್ರತಂಡ ಬ್ರೇಕ್ ಹಾಕಿದೆ. ‘ರಣಬಾಲಿ’ ಚಿತ್ರದ ಶೂಟಿಂಗ್ ವೇಳೆ ವಿಜಯ್ ಭಾರಿ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂಬ ಸ್ಕ್ರೀನ್‌ಶಾಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ಈ ಸ್ಕ್ರೀನ್‌ಶಾಟ್ ಸಂಪೂರ್ಣ ನಕಲಿ ಎಂದು ನಟನ ಆಪ್ತ ವಲಯ ತಿಳಿಸಿದೆ.

ಖ್ಯಾತ ಸಿನಿ ವೆಬ್‌ಸೈಟ್ ‘123ತೆಲುಗು’ ಹೆಸರಿನಲ್ಲಿದ್ದ ಆ ನಕಲಿ ವರದಿಯಲ್ಲಿ ವಿಜಯ್ ದೇವರಕೊಂಡ ಅವರು ಚಿತ್ರೀಕರಣಕ್ಕಾಗಿ 5 ರಿಂದ 6 ಕ್ಯಾರವಾನ್ ಹಾಗೂ 40 ರಿಂದ 50 ಸಹಾಯಕರನ್ನು ಕೇಳಿದ್ದಾರೆ ಎಂದು ಬರೆಯಲಾಗಿತ್ತು. ಇದರಿಂದ ಬೇಸತ್ತ ನಿರ್ಮಾಪಕರು ಪ್ರೊಡ್ಯೂಸರ್ ಕೌನ್ಸಿಲ್ ಮೆಟ್ಟಿಲೇರಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗಿತ್ತು.

ವಿಜಯ್ ದೇವರಕೊಂಡ ತಂಡದ ಅಧಿಕೃತ ಹೇಳಿಕೆ:

ಈ ಅಪಪ್ರಚಾರದ ವಿರುದ್ಧ ವಿಜಯ್ ದೇವರಕೊಂಡ ಅವರ ಅಧಿಕೃತ ತಂಡ ಪ್ರಕಟಣೆ ಹೊರಡಿಸಿದೆ. ‘ವಿಜಯ್ ದೇವರಕೊಂಡ ಅವರ ಹೆಸರಿಗೆ ಮಸಿ ಬಳಿಯಲು ಕೆಲವು ವ್ಯಕ್ತಿಗಳು ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನ್ಯೂಸ್ ಪೋರ್ಟಲ್ ಮಾದರಿಯಲ್ಲಿ ಸೃಷ್ಟಿಸಿರುವ ಈ ಸ್ಕ್ರೀನ್‌ಶಾಟ್‌ಗಳು ಸಂಪೂರ್ಣ ನಕಲಿ. ವಿಜಯ್ ಅವರು ‘ರಣಬಾಲಿ’ ಚಿತ್ರಕ್ಕಾಗಿ ಯಾವುದೇ ಕ್ಯಾರವಾನ್ ಬೇಡಿಕೆ ಇಟ್ಟಿಲ್ಲ. ಇಂತಹ ಆಧಾರರಹಿತ ವದಂತಿಗಳನ್ನು ಯಾರೂ ನಂಬಬೇಡಿ’ ಎಂದು ತಂಡ ಮನವಿ ಮಾಡಿದೆ.

ಇದರ ಬೆನ್ನಲ್ಲೇ ‘123ತೆಲುಗು’ ಸಂಸ್ಥೆ ಕೂಡ ಸ್ಪಷ್ಟನೆ ನೀಡಿದೆ. ತಾವು ಇಂತಹ ಯಾವುದೇ ಲೇಖನ ಪ್ರಕಟಿಸಿಲ್ಲ ಎಂದು ತಿಳಿಸಿದೆ. ತಮ್ಮ ಬ್ರ್ಯಾಂಡ್ ಹೆಸರನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಸಿನಿಮಾ ಹಾಗೂ ವೈಯಕ್ತಿಕ ಜೀವನದ ಅಪ್ಡೇಟ್ಸ್:

ರಾಹುಲ್ ಸಂಕೃತ್ಯನ್ ನಿರ್ದೇಶನದ ‘ರಣಬಾಲಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಇವರಿಬ್ಬರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಇವರ ಮದುವೆ ಕೂಡ ನೆರವೇರಿತ್ತು.

ಇದನ್ನೂ ಓದಿ: ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

‘ರಣಬಾಲಿ’ ಚಿತ್ರವು 19ನೇ ಶತಮಾನದ ಬ್ರಿಟಿಷ್ ಆಳ್ವಿಕೆಯ ಹಿನ್ನೆಲೆಯನ್ನು ಹೊಂದಿರುವ ಐತಿಹಾಸಿಕ ಕಥೆಯಾಗಿದೆ. ಇದರಲ್ಲಿ ವಿಜಯ್ ದೇವರಕೊಂಡ ಸ್ವಾತಂತ್ರ್ಯ ಹೋರಾಟಗಾರ ‘ರಣಬಾಲಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ‘ಜಯಮ್ಮ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಚಿತ್ರದ ಮುಖ್ಯ ವಿಲನ್ ಆಗಿ ನಟಿಸುತ್ತಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ 2026ರ ಸೆಪ್ಟೆಂಬರ್ 11 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us