The Kerala Story: ಮೈಸೂರಲ್ಲಿ 215 ಮಹಿಳೆಯರಿಗೆ ಉಚಿತವಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ ತೋರಿಸಿದ ವಿಶ್ವ ಹಿಂದೂ ಪರಿಷತ್
Vishwa Hindu Parishad: ವಿಶ್ವ ಹಿಂದೂ ಪರಿಷತ್ ವತಿಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ನೂರಾರು ಮಹಿಳೆಯರು ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ‘ಭಾರತ್ ಮಾತಾ ಕಿ ಜೈ, ವಂದೇ ಮಾತರಂ, ಸನಾತನ ಧರ್ಮಕ್ಕೆ ಜೈ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಗಿದೆ.
ಹಲವು ಕಾರಣಗಳಿಂದಾಗಿ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಚರ್ಚೆ ಹುಟ್ಟುಹಾಕಿದೆ. ದೇಶಾದ್ಯಂತ ಸಂಚಲನ ಮೂಡಿಸಿದ ಈ ಚಿತ್ರವನ್ನು ಕೋಟ್ಯಂತರ ಜನರು ವೀಕ್ಷಿಸಿದ್ದಾರೆ. ಸತತ ನಾಲ್ಕನೇ ವಾರವೂ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿದೆ. ಒಂದಷ್ಟು ಕಡೆಗಳಲ್ಲಿ ಚಿತ್ರವನ್ನು ಉಚಿತವಾಗಿ ತೋರಿಸುವ ಕೆಲಸ ಆಗಿದೆ. ಮೈಸೂರಿನಲ್ಲಿ ವಿಶ್ವ ಹಿಂದೂ ಪರಿಷತ್ (Vishwa Hindu Parishad) ವತಿಯಿಂದ 215 ಮಹಿಳೆಯರಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಫ್ರೀ ಆಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಮೈಸೂರಿನ ಐನಾಕ್ಸ್ ಮಲ್ಟಿಪ್ಲೆಕ್ಸ್ನಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಿನಿಮಾದಲ್ಲಿ ವಿವಾದಾತ್ಮಕ ಕಥಾಹಂದರ ಇದೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್ ಜಿಹಾದ್ ಮತ್ತು ಮತಾಂತರದ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿದ್ದು, ಅದಾ ಶರ್ಮಾ (Adah Sharma) ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದುಂಟು. ಆದರೆ ಹಿಂದೂ ಪರ ಸಂಘಟನೆಗಳು ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಬೆಂಬಲ ಸೂಚಿಸಿವೆ. ವಿಶ್ವ ಹಿಂದೂ ಪರಿಷತ್ ವತಿಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ನೂರಾರು ಮಹಿಳೆಯರು ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ‘ಭಾರತ್ ಮಾತಾ ಕಿ ಜೈ, ವಂದೇ ಮಾತರಂ, ಸನಾತನ ಧರ್ಮಕ್ಕೆ ಜೈ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಗಿದೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿ ಸಿನಿಮಾ ನೋಡಿ, ಪ್ರಿಯಕರನ ವಿರುದ್ಧ ದೂರು ನೀಡಿದ ಮಾಡೆಲ್
‘ದಿ ಕೇರಳ ಸ್ಟೋರಿ’ ಸಿನಿಮಾ 25 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡು, ಮುನ್ನುಗ್ಗುತ್ತಿದೆ. ಮೇ 5ರಂದು ಈ ಚಿತ್ರ ಬಿಡುಗಡೆ ಆಯಿತು. ನೋಡನೋಡುತ್ತಿದ್ದಂತೆಯೇ 25 ದಿನ ಕಳೆದು ಹೋಗಿದೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಅದಾ ಶರ್ಮಾ ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ದೊಡ್ಡ ಮೈಲೇಜ್ ಸಿಕ್ಕಿದೆ. ನಿರ್ದೇಶಕ ಸುದೀಪ್ತೋ ಸೇನ್ ಅವರ ಖ್ಯಾತಿ ಕೂಡ ಹೆಚ್ಚಾಗಿದೆ. ನಾಲ್ಕನೇ ವೀಕೆಂಡ್ನಲ್ಲೂ ಅಬ್ಬರಿಸಿದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚಿನ್ನದ ಬೆಳೆ ತೆಗೆದಿದೆ. ಈವರೆಗೂ 225 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಆಗಿದೆ. ಇಂದಿಗೂ ‘ದಿ ಕೇರಳ ಸ್ಟೋರಿ’ ಸಿನಿಮಾ ಚರ್ಚೆಯಲ್ಲಿದೆ.
ಇದನ್ನೂ ಓದಿ: ಮಾರಿಷಸ್: ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಕ್ಕೆ ಬಾಂಬ್ ಬೆದರಿಕೆ
ಈ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಹಲವು ಬಗೆಯ ಗಾಸಿಪ್ಗಳು ಹಬ್ಬಿವೆ. 5ನೇ ವೀಕೆಂಡ್ನಲ್ಲೂ ಹೆಚ್ಚಿನ ಜನರು ಈ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ. ಹಾಗಾಗಿ ಈ ಸಮಯದಲ್ಲಿ ಒಟಿಟಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವುದು ಸೂಕ್ತ ನಿರ್ಧಾರ ಅಲ್ಲ ಎಂಬುದು ಟ್ರೇಡ್ ತಜ್ಞರ ಅಭಿಪ್ರಾಯ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 250 ಕೋಟಿ ರೂಪಾಯಿ ಗಳಿಸಬಹುದು ಎಂದು ಕೆಲವರು ಅಂದಾಜಿಸಿದ್ದಾರೆ. ಆದರೆ ಅದು ನಿಜವಾಗುವುದು ಅನುಮಾನ ಎನ್ನಲಾಗುತ್ತಿದೆ. ಸದ್ಯಕ್ಕೆ ‘ದಿ ಕೇರಳ ಸ್ಟೋರಿ’ ಸಿನಿಮಾದ ನಿರ್ಮಾಪಕರು ಯಾವುದೇ ಒಟಿಟಿ ಸಂಸ್ಥೆಯ ಜೊತೆ ಡೀಲ್ ಮುಗಿಸಿಲ್ಲ ಎಂಬುದು ತಿಳಿದುಬಂದಿದೆ. ಶೀಘ್ರದಲ್ಲೇ ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ವಿಪುಲ್ ಅಮೃತ್ಲಾಲ್ ಶಾ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.