ನನ್ನ ಸಿನಿಮಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ನಟ ವಿಶ್ವಕ್ ಸೇನ್ ಆರೋಪ
Vishwak Sen: ತಮ್ಮ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಗಾಮಿ’ ವಿರುದ್ಧ ಕೆಲವು ವಿರೋಧಿಗಳು ಷಡ್ಯಂತ್ರ ಮಾಡಿದ್ದಾರೆ. ಸಿನಿಮಾಕ್ಕೆ ತೊಂದರೆ ನೀಡುತ್ತಿದ್ದಾರೆಂದು ನಟ ವಿಶ್ವಕ್ ಸೇನ್ ಆರೋಪಿಸಿದ್ದಾರೆ.
ತೆಲುಗು ಚಿತ್ರರಂಗದ (Tollywood) ಭವಿಷ್ಯದ ಸ್ಟಾರ್ ಎನಿಸಿಕೊಳ್ಳುತ್ತಿರುವ ವಿಶ್ವಕ್ ಸೇನ್ ನಟನೆಯ ‘ಗಾಮಿ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ತೆರೆ ಕಂಡಿದೆ. ಭಾರಿ ಬಜೆಟ್ನ ಈ ಸಿನಿಮಾ ಬಗ್ಗೆ ನಟ ವಿಶ್ವಕ್ ಸೇನ್ಗೆ ಭಾರಿ ನಿರೀಕ್ಷೆ, ಭರವಸೆ ಇತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಷ್ಟೇನು ಸದ್ದು ಮಾಡುತ್ತಿಲ್ಲ. ನಟನೆ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಚಿತ್ರರಂಗದಲ್ಲಿ ಕೆಲವು ವಿರೋಧಿಗಳನ್ನು ಕಟ್ಟಿಕೊಂಡಿರುವ ವಿಶ್ವಕ್ ಸೇನ್, ಇದೀಗ ತಮ್ಮ ಸಿನಿಮಾದ ಕಳಪೆ ಪ್ರದರ್ಶನಕ್ಕೆ ವಿರೋಧಿಗಳ ಷಡ್ಯಂತ್ರವೇ ಕಾರಣ ಎಂದು ಆರೋಪ ಮಾಡಿದ್ದಾರೆ. ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
‘ನಮ್ಮ ‘ಗಾಮಿ’ ಸಿನಿಮಾದ ಮೇಲೆ ಸತತ ದಾಳಿಗಳು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸಿನಿಮಾವನ್ನು ಬಗ್ಗೆ ಋಣಾತ್ಮಕ ಅಭಿಪ್ರಾಯಗಳನ್ನು ಸತತವಾಗಿ ಹರಿಬಿಡಲಾಗುತ್ತಿದೆ. ಬುಕ್ ಮೈ ಶೋ ಸೇರಿದಂತೆ ಹಲವು ವೇದಿಕೆಗಳಲ್ಲಿ ನಮ್ಮ ಸಿನಿಮಾವನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿರುವುದು ಗಮನಕ್ಕೆ ಬಂದಿದೆ. ಬುಕ್ ಮೈ ಶೋನಲ್ಲಿ ನಮ್ಮ ರೇಟಿಂಗ್ 9 ಅಥವಾ 10 ಇತ್ತು ಅದನ್ನು ಒಂದಕ್ಕೆ ಬರುವಂತೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ವಿವಾದದಲ್ಲಿ ಅರ್ಜುನ್ ಸರ್ಜಾ ಸಿನಿಮಾ; ತಿರುಗೇಟು ಕೊಟ್ಟ ವಿಶ್ವಕ್ ಸೇನ್; ಹೊಸ ಹೀರೋಗೆ ಮಣೆ?
‘ಬಾಟ್ಗಳನ್ನು ಬಳಸಿಕೊಂಡು ಬುಕ್ಮೈ ಶೋನಲ್ಲಿ ನಮ್ಮ ರೇಟಿಂಗ್ ಕುಗ್ಗಿಸಲಾಗುತ್ತಿದೆ. 9-10 ಇದ್ದ ರೇಟಿಂಗ್ ಅನ್ನು ಒಮ್ಮೆಲೆ 1ಕ್ಕೆ ಇಳಿಸಲಾಗಿದೆ. ಋಣಾತ್ಮಕ ಕಮೆಂಟ್ ಹಾಕಿಸಲಾಗಿದೆ. ನಮ್ಮ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಲು ದಿನಗಳನ್ನೇ ವ್ಯಯಿಸಲಾಗುತ್ತಿದೆ. ನನ್ನನ್ನು ಕುಗ್ಗಿಸಲು ಎಷ್ಟು ಪ್ರಯತ್ನ ಮಾಡುತ್ತೀಯೋ ಮಾಡು, ಸ್ಪ್ರಿಂಗ್ ರೀತಿ, ಎಷ್ಟು ಕುಗ್ಗಿಸುತ್ತೀಯೋ ಅಷ್ಟು ವೇಗವಾಗಿ ಪುಟಿದು ಬರುತ್ತೇನೆ. ಈ ಕೃತ್ಯದ ಹಿಂದೆ ಯಾರಿದ್ದಾರೆ, ಯಾಕಾಗಿ ಹೀಗೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ, ಆದರೆ ಇದೆಲ್ಲದರ ಮಧ್ಯೆ ಒಳ್ಳೆಯ ಸಿನಿಮಾಕ್ಕೆ ಬೆಂಬಲ ನೀಡುತ್ತಿರುವವರಿಗೆ ನನ್ನ ಧನ್ಯವಾದಗಳು’ ಎಂದಿದ್ದಾರೆ ವಿಶ್ವಕ್ ಸೇನ್.
‘ನಮ್ಮ ಒಳ್ಳೆಯ ಪ್ರಯತ್ನಕ್ಕೆ ಬೆಂಬಲ ನೀಡಿರುವ ವಿಮರ್ಶಕರಿಗೆ, ಮಾಧ್ಯಮದವರಿಗೆ ಮತ್ತು ಸಿನಿಮಾ ಪ್ರೇಮಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಒಳ್ಳೆಯ ಸಿನಿಮಾಕ್ಕೆ ನಿಮ್ಮ ಬೆಂಬಲ ಹೀಗೆಯೇ ಇರಲಿ. ಈಗ ನಮ್ಮ ಸಿನಿಮಾಕ್ಕೆ ಸಮಸ್ಯೆ ಒಡ್ಡುವ ಕಾರ್ಯ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಯತ್ನಿಸುತ್ತಿದ್ದೇವೆ’ ಎಂದು ವಿಶ್ವಕ್ ಸೇನ್ ಹೇಳಿದ್ದಾರೆ. ವಿಶ್ವಕ್ ಸೇನ್ ನಟಿಸಿರುವ ‘ಗಾಮಿ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಾಕ್ಸ್ ಆಫೀಸ್ನಲ್ಲಿಯೂ ಸಿನಿಮಾ ಅಷ್ಟಾಗಿ ಸದ್ದು ಮಾಡುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ