ಅವರ ಆಶೀರ್ವಾದ ಇರುವ ವರೆಗೆ ಯಾರಿಂದಲೂ ನನ್ನ ತಡೆಯಲು ಆಗಲ್ಲ: ಜೂ ಎನ್ಟಿಆರ್
War 2 pre release: ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಮೊದಲ ಬಾರಿ ಒಟ್ಟಿಗೆ ನಟಿಸಿರುವ ‘ವಾರ್ 2’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇಂದು ಹೈದರಾಬಾದ್ನಲ್ಲಿ ಬಲು ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜೂ ಎನ್ಟಿಆರ್ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಜೂ ಎನ್ಟಿಆರ್ (Jr NTR) ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇಬ್ಬರೂ ಸೂಪರ್ ಸ್ಟಾರ್ ನಟರು ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಬಾಲಿವುಡ್ನ ಸೂಪರ್ ಸ್ಟಾರ್ ಹೃತಿಕ್ ರೋಷನ್ ಮತ್ತು ದಕ್ಷಿಣದ ಸ್ಟಾರ್ ಜೂ ಎನ್ಟಿಆರ್ ಇಬ್ಬರೂ ಒಟ್ಟಿಗೆ ನಟಿಸಿರುವುದು ಭಾರಿ ಕುತೂಹಲ ಮೂಡಿಸಿದೆ. ಇಂದು (ಆಗಸ್ಟ್ 10) ಹೈದರಾಬಾದ್ನಲ್ಲಿ ಬಲು ಅದ್ಧೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಹೃತಿಕ್ ರೋಷನ್, ಜೂ ಎನ್ಟಿಆರ್ ಇಬ್ಬರೂ ಭಾಗಿಯಾಗದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೂ ಎನ್ಟಿಆರ್, ‘ಎನ್ಟಿಆರ್ ಅವರ ಆಶೀರ್ವಾದ ನಮ್ಮ ಮೇಲೆ ಇರುವವರೆಗೆ, ನನ್ನ ಮೇಲೆ ಇರುವವರೆಗೆ ನನ್ನನ್ನು ತಡೆಯುವುದು ಯಾರ ಕೈಯಿಂದಲೂ ಸಾಧ್ಯವಿಲ್ಲ’ ಎಂದು ಜೂ ಎನ್ಟಿಆರ್ ಹೇಳಿದರು. ನಂದಮೂರಿ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲದ ಸಮಯದಲ್ಲಿ ಜೂ ಎನ್ಟಿಆರ್ ಈ ಮಾತು ಹೇಳಿರುವುದು ಕುತೂಹಲ ಕೆರಳಿಸಿದೆ. ಕಾರ್ಯಕ್ರಮದಲ್ಲಿ ತಮ್ಮ ತಂದೆ-ತಾಯಿ, ಮಲತಾಯಿ, ಅಣ್ಣಂದಿರನ್ನು ನೆನಪಿಸಿಕೊಂಡ ಜೂ ಎನ್ಟಿಆರ್, ಬಾಲಕೃಷ್ಣ, ಚಂದ್ರಬಾಬು ನಾಯ್ಡು ಅವರ ಹೆಸರುಗಳನ್ನು ಉಲ್ಲೇಖಿಸಲಿಲ್ಲ.
‘ಮೊದಲ ಸಿನಿಮಾ ಬಿಡುಗಡೆ ಆಗುವ ಮುಂಚೆ ಅಧೋನಿಯ ಮುಜೀಬ್ ಎಂಬಾತ ಅಭಿಮಾನಿಯಾದ. ಅದಾದ ಬಳಿಕ ಒಬ್ಬೊಬ್ಬರ ಬಳಿಕ ಒಬ್ಬೊಬ್ಬರು ಸೇರಿಕೊಳ್ಳುತ್ತಾ ಇಂದು ಕೋಟ್ಯಂತರ ಮಂದಿ ಆಗಿದ್ದಾರೆ. ನಿಮ್ಮ ಋಣವನ್ನು ಎಂದಿಗೂ ನಾನು ತೀರಿಸಲು ಸಾಧ್ಯವಿಲ್ಲ. ಅಪ್ಪ-ಅಮ್ಮ ಜನ್ಮ ನೀಡಿದ್ದಾರೆ ಆದರೆ ಈ ಜೀವ, ಜೀವನ ನಿಮಗೆ ಅಂಕಿತ. ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ. ದಯವಿಟ್ಟು ಸಿನಿಮಾ ನೋಡಿ ಆಶೀರ್ವಾದಿಸಿ. ಸಿನಿಮಾದಲ್ಲಿರುವ ಟ್ವಿಸ್ಟ್ಗಳನ್ನು ಯಾರೂ ಹೊರಗೆ ಹೇಳಬೇಡಿ’ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಕಿಯಾರಾ ಅಡ್ವಾಣಿ ಬಿಕಿನಿಗೆ ಸಿಬಿಎಫ್ಸಿ ಕತ್ತರಿ, ‘ವಾರ್ 2’ಗೆ ಈಗ ಗ್ಲಾಮರ್ ಕೊರತೆ
ತಮ್ಮ ಸಹನಟ ಹೃತಿಕ್ ರೋಷನ್ ಬಗ್ಗೆ ಮಾತನಾಡಿದ ಜೂ ಎನ್ಟಿಆರ್, ‘ನನ್ನ ಹಾಗೂ ಹೃತಿಕ್ ಅವರ ವೃತ್ತಿ ಜೀವನ ಬಹುತೇಕ ಏಕಕಾಲದಲ್ಲಿ ಶುರುವಾಯ್ತು. ಅವರನ್ನು ನೋಡುವ ಮುನ್ನ ನಾನು ಮೈಖಲ್ ಜಾಕ್ಸನ್ ಅಭಿಮಾನಿ ಆಗಿದ್ದೆ. ಆದರೆ ಅವರನ್ನು ನೋಡಿದ ಬಳಿಕ ನಾನೂ ಅವರಂತೆ ಡ್ಯಾನ್ಸ್ ಮಾಡಬೇಕು ಎಂಬ ಆಸೆ ಹುಟ್ಟಿತು. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹೇಳುತ್ತಿದ್ದಾರೆ ‘ವಾರ್ 2’ನಲ್ಲಿ ಇಬ್ಬರ ನಡುವೆ ಡ್ಯಾನ್ಸ್ ಫೈಟ್ ನಡೆದಿದೆ ಎಂದು ಖಂಡಿತ ಇಲ್ಲ. ಹೃತಿಕ್ ರೋಷನ್, ಇಡೀ ಭಾರತದಲ್ಲಿಯೇ ಅದ್ಭುತವಾದ ಡ್ಯಾನ್ಸರ್’ ಎಂದಿದ್ದಾರೆ ಜೂ ಎನ್ಟಿಆರ್.
‘ನಾನು ಹೃತಿಕ್ ರೋಷನ್ ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಅವರು ಪರಿಪೂರ್ಣ ನಟ, ಡ್ಯಾನ್ಸರ್ ಆಗಿದ್ದರೂ ಸಹ ಪ್ರತಿಬಾರಿ ಸೆಟ್ಗೆ ಬಂದಾಗ ಹೊಸ ವಿದ್ಯಾರ್ಥಿಯ ಹಾಗೆ ಬರುತ್ತಾರೆ. ಅವರು ಅದ್ಭುತ ನಟ, ನೃತ್ಯಗಾರ ಮಾತ್ರವೇ ಅಲ್ಲದೆ ಅವರು ಮಾನವೀಯ ಗುಣವುಳ್ಳ ವ್ಯಕ್ತಿ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಇದು ನನ್ನ ಮೊದಲ ಬಾಲಿವುಡ್ ಸಿನಿಮಾ ಮಾತ್ರವಲ್ಲ ಅವರ ಮೊದಲ ತೆಲುಗು ಸಿನಿಮಾ ಸಹ. ಅವರನ್ನು ನಾವು ಹೃದಯದಲ್ಲಿಟ್ಟುಕೊಳ್ಳುತ್ತೇವೆ. ಇನ್ನು ಮುಂದೆ ಅವರ ಜವಾಬ್ದಾರಿ ನಮ್ಮದು’ ಎಂದಿದ್ದಾರೆ ಜೂ ಎನ್ಟಿಆರ್.
ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಸಾವಿರಾರು ಮಂದಿ ಪೊಲೀಸರು ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ಆದಷ್ಟು ಶೀಘ್ರವೇ ನಾವು ಫೋಟೊಸೆಶನ್ ಇಟ್ಟುಕೊಳ್ಳೋಣ. ಎಲ್ಲರೂ ಜಾಗೃತೆಯಿಂದ ಮನೆಗೆ ಹೋಗಿ, ನಿಮ್ಮನ್ನು ಕಾಯುತ್ತಿರುವವರನ್ನು ಸೇರಿಕೊಳ್ಳಿ ಎಂದರು. ‘ಜೈ ಎನ್ಟಿಆರ್-ಜೈ ಹರಿಕೃಷ್ಣ’ ಎಂದು ಮಾತು ಮುಗಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Sun, 10 August 25




