ಸಿನಿಮಾ ರಂಗಕ್ಕೆ ಬರುವ ಮುನ್ನ ಯಾವ ಯಾವ ಕೆಲಸ ಮಾಡಿದ್ದರು ಹೇಮಂತ್ ರಾವ್
Hemanth M Rao: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ದೊಡ್ಡ ಖ್ಯಾತಿ ಗಳಿಸಿ, ದೊಡ್ಡ ಭರವಸೆಯನ್ನು ಮೂಡಿಸಿರುವ ನಿರ್ದೇಶಕ ಹೇಮಂತ್ ರಾವ್, ಸಿನಿಮಾ ರಂಗಕ್ಕೆ ಬರುವ ಮುಂಚೆ ಯಾವ ಯಾವ ಕೆಲಸ ಮಾಡಿದ್ದರು ಗೊತ್ತೆ?
ಹೇಮಂತ್ ರಾವ್, ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಮೂಲಕ ತಮ್ಮ ನಿಜ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಕ್ಕೆ ದೇಶದೆಲ್ಲೆಡೆಯಿಂದ ಪ್ರಶಂಸೆ ದೊರೆತಿದೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಹೇಮಂತ್ ರಾವ್ ಸರಳ ಕತೆಯನ್ನು ಅದ್ಭುತವಾಗಿ ತೆರೆಯ ಮೇಲೆ ತಂದು ಪ್ರೇಕ್ಷಕರನ್ನು ಹೊಸದೊಂದು ಭಾವ ಲೋಕಕ್ಕೆ ಕರೆದೊಯ್ದಿದ್ದಾರೆ. ಈಗ ಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ಹೇಮಂತ್ ರಾವ್, ಚಿತ್ರರಂಗಕ್ಕೆ ಬರುವ ಮುಂಚೆ ಏನು ಕೆಲಸ ಮಾಡುತ್ತಿದ್ದರು?
ಹೇಮಂತ್ ರಾವ್ ಮೂಲತಃ ಮೈಸೂರಿನವರು ಆದರೆ ಬಹಳ ಚಿಕ್ಕ ವಯಸ್ಸಿಗೆ ಮೈಸೂರಿನಿಂದ ಬೆಂಗಳೂರಿಗೆ ವಾಸ್ತವ್ಯ ಬದಲಾಯಿತು. ಅವರ ತಂದೆ ಜುವಾಲಜಿಸ್ಟ್, ಅವರ ತಾಯಿ ಕನ್ನಡದಲ್ಲಿ ಎಂಇ ಪದವಿ ಪಡೆದವರು. ಹಾಗಾಗಿ ಮನೆಯಲ್ಲಿ ಸಾಹಿತ್ಯ, ಓದಿನ ವಾತಾವರಣ ಸಾಕಷ್ಟಿತ್ತು. ಹೇಮಂತ್ ರಾವ್ ಶಿಕ್ಷಣದಲ್ಲಿ ಅತ್ಯುತ್ತಮ ಎನ್ನುವಂತಿರದಿದ್ದರೂ ಒಳ್ಳೆಯ ವಿದ್ಯಾರ್ಥಿಯೇ. ಅವರೇ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ಬಹಳ ಕಷ್ಟಪಟ್ಟು ಎಂಜಿನಿಯರಿಂಗ್ ಮುಗಿಸಿದರಂತೆ. ಮುಸಿದ ಮೇಲೆ ಸಹ ನಾನು ಒಳ್ಳೆಯ ಎಂಜಿನಿಯರ್ ಅಲ್ಲ, ಹಾಗಾಗಿ ಎಂಜಿನಿಯರ್ ಹುದ್ದೆ ಮಾಡುವುದಿಲ್ಲವೆಂದು ನಿಶ್ಚಯ ಸಹ ಮಾಡಿಕೊಂಡರಂತೆ.
ಆದರೆ ಎಂಜಿನಿಯರಿಂಗ್ ಆದ ಮೇಲೆ ಹಲವು ವರ್ಷ ಹೇಮಂತ್ ರಾವ್ ಬೇರೆ ಬೇರೆ ಕೆಲಸಗಳನ್ನು ಮಾಡಿದರು. ಬೆಂಗಳೂರಿನ ಜನಪ್ರಿಯ ಪಬ್ಗಳಲ್ಲಿ ಒಂದಾದ ಪರ್ಪಲ್ ಹೇಜ್ನಲ್ಲಿ ಡಿಜೆ ಆಗಿ ಕೆಲಸ ಮಾಡಿದ್ದರಂತೆ ಹೇಮಂತ್. ಅಲ್ಲಿ ಹಾಡುಗಳನ್ನು ಬದಲಿಸುವುದು, ಪರದೆಯ ಮೇಲೆ ಪ್ರಸಾರವಾಗುತ್ತಿರುವ ವಿಡಿಯೋಗಳನ್ನು ಬದಲಿಸುವುದು ಅವರ ಕೆಲಸ. ಪಬ್ಗೆ ಕುಡಿಯಲು ಬರುವವರು ತಮ್ಮ ಹಾಡಿನ ಬೇಡಿಕೆಗಳನ್ನು ಸಹ ಹೇಮಂತ್ ಗೆ ಹೇಳುತ್ತಿದ್ದರಂತೆ ಅದರಂತೆ ಹೇಮಂತ್ ಹಾಡುಗಳನ್ನು ಬದಲಿಸುತ್ತಿದ್ದರಂತೆ.
ಇದನ್ನೂ ಓದಿ:ಹೇಮಂತ್ ರಾವ್ ದೀರ್ಘ ಹಾಗೂ ಅಚ್ಚ ಕನ್ನಡದಲ್ಲೇ ಟೈಟಲ್ ನೀಡೋದೇಕೆ? ನಿರ್ದೇಶಕ ಕೊಟ್ಟರು ಉತ್ತರ
ಅದಾದ ಬಳಿಕ ಹೇಮಂತ್ ರಾವ್, ಬೆಂಗಳೂರಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಸೇರಿದರು. ಅಲ್ಲಿ ಫೀಚರ್ ಆರ್ಟಿಕಲ್ಗಳನ್ನು ಬರೆಯುತ್ತಿದ್ದರಂತೆ. ಅಲ್ಲಿ ತಮಗೆ ಬಹಳ ಒಳ್ಳೆಯ ಅನುಭವ ದೊರೆಯಿತೆಂದು ಹೇಮಂತ್ ರಾವ್ ಹೇಳಿಕೊಂಡಿದ್ದಾರೆ. ಸಾಕಷ್ಟು ಭಿನ್ನ ರೀತಿಯ ವ್ಯಕ್ತಿಗಳನ್ನು ಸಂದರ್ಶನ ಮಾಡುವ ಅವಕಾಶ ತಮಗೆ ಅಲ್ಲಿ ದೊರೆಯಿತೆಂದು ಸಹ ಅವರು ಹೇಳಿಕೊಂಡಿದ್ದಾರೆ.
ಆ ಬಳಿಕ ಐಟಿ ಸಂಸ್ಥೆಯೊಂದರಲ್ಲಿ ಕೇವಲ ನಾಲ್ಕೈದು ದಿನಗಳು ಮಾತ್ರವೇ ಹೇಮಂತ್ ರಾವ್ ಕೆಲಸ ಮಾಡಿದರಂತೆ. ಅಲ್ಲಿ ಮ್ಯಾನೇಜರ್ ಒಬ್ಬ, ಒಪ್ಪಂದವೊಂದಕ್ಕೆ ಸಹಿ ಹಾಕಿಸಿಕೊಳ್ಳಲು ಯತ್ನಿಸಿದನಂತೆ. ಒಪ್ಪಂದದ ಪ್ರಕಾರ, ಆ ಸಂಸ್ಥೆಯಲ್ಲಿ ಹೇಮಂತ್ ರಾವ್ ಎರಡು ವರ್ಷ ಕೆಲಸ ಮಾಡಬೇಕು, ಅಲ್ಲದೆ ಮೊದಲಿಗೆ ಹೇಮಂತ್ ರಾವ್ ಅವರೇ ಆ ಸಂಸ್ಥೆಗೆ ಹಣ ಕೊಡಬೇಕು, ಹಾಗೂ ಎರಡು ವರ್ಷದ ಬಳಿಕ ಸಹ ಬೇರೊಂದು ಸಂಸ್ಥೆಯ ಜೊತೆ ಕೆಲಸ ಮಾಡಬಾರದು ಎಂಬುದು ಅವರ ಒಪ್ಪಂದ. ಅದನ್ನು ಕೇಳಿ ಹೇಮಂತ್ ರಾವ್ ಹೇಳದೇ-ಕೇಳದೆ ಆ ಕೆಲಸ ಬಿಟ್ಟರಂತೆ.
ವಿಶೇಷವೆಂದರೆ ಹೇಮಂತ್ ರಾವ್ ಪ್ರೈವೇಟ್ ಡಿಟೆಕ್ಟಿವ್ (ಖಾಸಗಿ ಗೂಢಚಾರ) ಆಗಿಯೂ ಕೆಲಸ ಮಾಡಿದ್ದರಂತೆ. ಫ್ರೆಂಚ್ ಸಿನಿಮಾ ಸರಣಿಯೊಂದನ್ನು ನೋಡಿ, ತಾನೂ ಡಿಟೆಕ್ಟಿವ್ ಆಗಬೇಕೆಂಬ ಬಯಕೆಯಿಂದ ಜಯನಗರದ ಖಾಸಗಿ ಡಿಟೆಕ್ಟಿವ್ ಸಂಸ್ಥೆಯೊಂದಕ್ಕೆ ಹೇಮಂತ್ ಸೇರಿಕೊಂಡಿದ್ದರಂತೆ. ಅಲ್ಲಿ ಚಿತ್ರ-ವಿಚಿತ್ರ ಅಸೈನ್ಮೆಂಟ್ಗಳು ಅವರಿಗೆ ಸಿಗುತ್ತಿದ್ದವಂತೆ. ಯಾರದ್ದೋ ವ್ಯಕ್ತಿಯ ಕಾರು ಫಾಲೋ ಮಾಡಬೇಕು, ಕದ್ದು ಮುಚ್ಚಿ ಚಿತ್ರಗಳನ್ನು ತೆಗೆಯಬೇಕು ಇಂಥಹಾ ಕೆಲಸಗಳು ಬರುತ್ತಿದ್ದವಂತೆ. ಡಿಟೆಕ್ಟಿವ್ ವೃತ್ತಿ ಕೇಳಲು, ನೋಡಲು ಮಜ ಎನಿಸುತ್ತವೆ ಆದರೆ ನಿಜಕ್ಕೂ ಅದು ಬಹಳ ಕಷ್ಟದ ಕೆಲಸ ಎಂದಿದ್ದಾರೆ ಹೇಮಂತ್.
ಇದನ್ನೂ ಓದಿ:‘ಸಪ್ತ ಸಾಗರ ದಾಟಿ’ ದೊಡ್ಮನೆ ತಲುಪಿದ ಹೇಮಂತ್ ರಾವ್: ಶಿವಣ್ಣನೊಟ್ಟಿಗೆ ಸಿನಿಮಾ
ಇದೆಲ್ಲದರ ಹೊರತಾಗಿ ಕೆಲ ಕಾಲ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಸಹ ಕೆಲಸ ಮಾಡಿದ್ದರಂತೆ ಹೇಮಂತ್ ರಾವ್. ರಿಯಲ್ ಎಸ್ಟೇಟ್, ಬೆಂಗಳೂರಿನಲ್ಲಿ ಸಖತ್ ಜೋರಾಗಿ ನಡೆಯುತ್ತಿತ್ತು, ಯಾರಿಗೋ ಹೋಗಿ ಎಲ್ಲೋ ಒಂದು ಜಾಗ ತೋರಿಸಿದರೆ ಹಣ ಸಿಗುತ್ತಿತ್ತು, ಅದನ್ನೂ ಕೆಲ ಮಾಡಿದೆ. ಜಾಹೀರಾತು ಸಂಸ್ಥೆಯಲ್ಲಿ ಕೆಲಸ ಮಾಡಿದೆ. ಡಾಕ್ಯುಮೆಂಟರಿ ನಿರ್ದೇಶಿಸಲು ಪ್ರಯತ್ನಿಸಿದ್ದೆ, ಕೆಲವು ಜನಪ್ರಿಯ ನಿರ್ದೇಶಕರಿಗಾಗಿ ಆಡಿಷನ್ಗಳನ್ನು ಮಾಡಿಕೊಟ್ಟಿದ್ದೇನೆ ಹೀಗೆ ಹಲವು ಕೆಲಸಗಳನ್ನು ಮಾಡಿದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ ಎಂದಿದ್ದಾರೆ ಹೇಮಂತ್ ರಾವ್.
ಹೇಮಂತ್ ರಾವ್ ಮೊದಲಿಗೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದರು. ಆ ಬಳಿಕ ಜೇಕಬ್ ವರ್ಗೀಸ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದರು. 2016 ರಲ್ಲಿ ಮೊದಲ ಬಾರಿಗೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶಕರಾದರು ಹೇಮಂತ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ