‘ಕನ್ನಡ್’ ಅಲ್ಲ ‘ಕನ್ನಡ’: ರಜತ್ ಶರ್ಮಾಗೆ ವೇದಿಕೆಯಲ್ಲೇ ಪ್ರೀತಿಯಿಂದ ತಿದ್ದಿ ಹೇಳಿದ ನಟ ಯಶ್

ರಾಷ್ಟ್ರೀಯ ವೇದಿಕೆ ‘ಆಪ್ ಕೀ ಅದಾಲತ್’ ಶೋನಲ್ಲಿ ಹಿರಿಯ ಪತ್ರಕರ್ತ ರಜತ್ ಶರ್ಮಾ ‘ಕನ್ನಡ್’ ಎಂದಾಗ, ನಟ ಯಶ್ ನಗುಮುಖದಿಂದಲೇ ‘ಅದು ಕನ್ನಡ’ ಎಂದು ಪ್ರೀತಿಯಿಂದ ತಿದ್ದಿದ್ದಾರೆ. ಭಾಷೆಯ ಉಚ್ಚಾರಣೆ ಹಾಗೂ ಗೌರವಕ್ಕೆ ಸ್ಪಂದಿಸಿದ ರಾಕಿಂಗ್ ಸ್ಟಾರ್ ಯಶ್ ಅವರ ಈ ಪ್ರಸಂಗಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ್ ಅಲ್ಲ ಕನ್ನಡ: ರಜತ್ ಶರ್ಮಾಗೆ ವೇದಿಕೆಯಲ್ಲೇ ಪ್ರೀತಿಯಿಂದ ತಿದ್ದಿ ಹೇಳಿದ ನಟ ಯಶ್
ಯಶ್-ರಜತ್

Updated on: Aug 17, 2026 | 7:33 AM

ಮುಖ್ಯಾಂಶಗಳು

  • ರಾಷ್ಟ್ರೀಯ ವೇದಿಕೆಯಲ್ಲಿ ಭಾಷಾ ಪ್ರೇಮ ಮೆರೆದ ಯಶ್
  • 'ಕನ್ನಡ್' ಅಲ್ಲ 'ಕನ್ನಡ': ರಜತ್ ಶರ್ಮಾಗೆ ಪ್ರೀತಿಯಿಂದ ತಿದ್ದಿದ ರಾಕಿಂಗ್ ಸ್ಟಾರ್
  • ಯಶ್ ಹಿಂದಿ ಸಂಭಾಷಣೆಗೆ ಫಿದಾ ಆದ 'ಆಪ್ ಕೀ ಅದಾಲತ್' ನಿರೂಪಕ

ರಾಕಿಂಗ್ ಸ್ಟಾರ್ ಯಶ್ ಅವರಿಗೆ (Yash) ಮಾತೃಭಾಷೆ ಕನ್ನಡದ ಮೇಲಿರುವ ಗೌರವ ಮತ್ತು ಪ್ರೀತಿ ಅಪಾರ. ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಹಿರಿಮೆಯನ್ನು ಎತ್ತಿಹಿಡಿದಿರುವ ಯಶ್, ವಿದೇಶಿ ಅಥವಾ ರಾಷ್ಟ್ರೀಯ ವೇದಿಕೆಗಳಲ್ಲಾದರೂ ಸರಿ, ಕನ್ನಡ ಭಾಷೆಯನ್ನು ಸರಿಯಾಗಿ ಉಚ್ಚರಿಸಬೇಕು ಎಂಬುದನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಪ್ರಸಿದ್ಧ ‘ಆಪ್ ಕೀ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಇಂತಹದೇ ಒಂದು ಆಸಕ್ತಿಕರ ಪ್ರಸಂಗ ನಡೆಯಿತು.

ಕನ್ನಡವನ್ನು ಯಾರೇ ತಪ್ಪಾಗಿ ಮಾತನಾಡಿದರೂ ಯಶ್ ಅವರು ಸಹಿಸಿಕೊಳ್ಳೋದಿಲ್ಲ. ಹಾಗಂತ ಸಿಟ್ಟು ಮಾಡಿಕೊಳ್ಳುವುದಿಲ್ಲ. ಬದಲಿಗೆ ಪ್ರೀತಿಯಿಂದಲೇ ತಿದ್ದಿ ಹೇಳುತ್ತಾರೆ. ‘ಆಪ್ ಕಿ ಅದಲಾತ್’ ಕಾರ್ಯಕ್ರಮದ ನಿರೂಪಕ ಹಾಗೂ ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರು ಯಶ್ ಅವರ ಬಳಿ ಪ್ರಶ್ನೆ ಕೇಳುವಾಗ ‘ಕನ್ನಡ್ ಸಿನಿಮಾಗಳು…’ ಎಂದು ಎಂದು ಉಚ್ಚರಿಸಿದರು. ಕೂಡಲೇ ಮಧ್ಯಪ್ರವೇಶಿಸಿದ ಯಶ್, ನಗುಮುಖದಿಂದಲೇ ‘ಸರ್… ಅದು ಕನ್ನಡ’ ಎಂದು ಪ್ರೀತಿಯಿಂದ ತಿದ್ದಿದರು.

ಇದಕ್ಕೆ ರಜತ್ ಶರ್ಮಾ ಅವರು ನಗುತ್ತಾ, ‘ಸರಿ… ಕನ್ನಡ’ ಎಂದು ತಮ್ಮ ಉಚ್ಚಾರಣೆಯನ್ನು ಸರಿಪಡಿಸಿಕೊಂಡರು. ನಂತರ ಯಶ್ ಅವರು ‘ಎಲ್ಲರೂ ಕೇಳಿಸಿಕೊಳ್ಳಿ ಕನ್ನಡ್ ಅಲ್ಲ ಅದು ಕನ್ನಡ’ ಎಂದು ಹಿಂದಿಯಲ್ಲೇ ನಗುತ್ತಾ ಹೇಳಿ, ‘ಭಾವನೆಗಳನ್ನು ಅರ್ಥಮಾಡಿಕೊಳ್ಳಿ’ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇದನ್ನೂ ಓದಿ: ಕೇವಲ ಸಂಭಾವನೆ ಅಲ್ಲ, ಲಾಭದಲ್ಲೂ ಪಾಲು ಪಡೆಯುತ್ತಾರೆ ಯಶ್; ಕೆಜಿಎಫ್ಗೂ ಮೊದಲಿನಿಂದಲೇ ಈ ತಂತ್ರ

ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲೂ ತಮ್ಮ ಭಾಷೆಯ ಸರಿಯಾದ ಉಚ್ಚಾರಣೆ ಮತ್ತು ಗೌರವಕ್ಕಾಗಿ ಯಶ್ ಅವರು ತೋರಿಸಿದ ಈ ಕಾಳಜಿಗೆ ಅಭಿಮಾನಿಗಳು ಹಾಗೂ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಶೋ ಆರಂಭ ಆಗುವ ಮೊದಲೇ ಯಶ್ ಅವರು ಹಿಂದಿ ಮಾತನಾಡುವ ಬಗ್ಗೆ ಹೇಳಿದ್ದರು. ‘ಎಲ್ಲಾ ಭಾಷೆಯನ್ನು ಗೌರವಿಸಬೇಕು. ಹಿಂದಿ ತಪ್ಪಾಗಿ ಮಾತನಾಡಿದ್ದರೆ ಕ್ಷಮಿಸಿ’ ಎಂದಿದ್ದರು. ಯಶ್ ಅವರ ಹಿಂದಿಗೆ ರಜತ್ ಶರ್ಮಾ ಅವರೇ ಫಿದಾ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us