
ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿ ಆಗಲಿಲ್ಲವೆಂದೇ ಹೇಳಬಹುದು. ಇದೀಗ ಯಶ್ ನಟನೆಯ ಮತ್ತೊಂದು ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ ರಿಲೀಸ್ಗೆ ರೆಡಿ ಆಗಿದ್ದು ಮುಂದಿನ ತಿಂಗಳು ಅಂದರೆ ನವೆಂಬರ್ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದರ ನಡುವೆ ಯಶ್ ಅವರ ನೆಕ್ಸ್ಟ್ ಸಿನಿಮಾಕ್ಕಾಗಿ ಈಗಾಗಲೇ ಚರ್ಚೆ ಆರಂಭವಾಗಿದ್ದು, ತೆಲುಗಿನ ನಿರ್ದೇಶಕರೊಬ್ಬರು ಯಶ್ಗೆ ಕತೆಯೊಂದನ್ನು ಹೇಳಿದ್ದಾರೆ ಎಂಬ ಸುದ್ದಿ ಸಣ್ಣದಾಗಿ ಹರಿದಾಡುತ್ತಿದೆ.
ಯಶ್, ತಮ್ಮ ಸಿನಿಮಾದ ಕತೆ ಮತ್ತು ನಿರ್ದೇಶಕರನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹಿಂದೆ ಬಂದಿದ್ದ ಸುದ್ದಿಗಳ ಪ್ರಕಾರ ಭಾರತದ ಹಲವು ಚಿತ್ರರಂಗಗಳ ಹಲವಾರು ನಿರ್ದೇಶಕರುಗಳಿಂದ ಯಶ್ ಕತೆ ಕೇಳಿದ ಬಳಿಕ ಗೀತು ಮೋಹನ್ದಾಸ್ ಅವರೊಟ್ಟಿಗೆ ‘ಟಾಕ್ಸಿಕ್’ ಸಿನಿಮಾ ಮಾಡಲು ಮುಂದಾಗಿದ್ದರು. ಈಗಲೂ ಸಹ ಯಶ್ ಅವರಿಗೆ ಹಲವಾರು ನಿರ್ದೇಶಕರುಗಳು ಕತೆ ಹೇಳುತ್ತಿದ್ದಾರಂತೆ. ಹಾಗೆಯೇ ಒಬ್ಬ ನಿರ್ದೇಶಕನ ಕತೆ ಯಶ್ ಅವರಿಗೆ ಹಿಡಿಸಿದ್ದು ಕತೆಯ ಮೇಲೆ ಚರ್ಚೆಗಳು ನಡೆಯುತ್ತಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ತೆಲುಗಿನಲ್ಲಿ ‘ಡೇವಿಡ್ ರೆಡ್ಡಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿರುವ ಹನುಮ ರೆಡ್ಡಿ ಹೆಸರಿನ ನಿರ್ದೇಶಕರೊಟ್ಟಿಗೆ ಯಶ್ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹನುಮ ರೆಡ್ಡಿ ‘ಡೇವಿಡ್ ರೆಡ್ಡಿ’ ಹೊರತಾಗಿ ಇನ್ಯಾವ ಸಿನಿಮಾ ಅನ್ನೂ ಸಹ ನಿರ್ದೇಶನ ಮಾಡಿಲ್ಲ. ಡೇವಿಡ್ ರೆಡ್ಡಿಯಲ್ಲಿ ಮಂಚು ಮನೋಜ್ ನಾಯಕನಾಗಿ ನಟಿಸಿದ್ದು, ಸಿನಿಮಾನಲ್ಲಿ ರಮ್ಯಾ ಕೃಷ್ಣ ಸೇರಿದಂತೆ ಇನ್ನೂ ಹಲವು ನಟ-ನಟಿಯರಿದ್ದಾರೆ. ‘ಡೇವಿಡ್ ರೆಡ್ಡಿ’ ಸಿನಿಮಾ ಇನ್ನೂ ಬಿಡುಗಡೆ ಸಹ ಆಗಿಲ್ಲ. ಅಷ್ಟರಲ್ಲೇ ಯಶ್ ಅವರೊಟ್ಟಿಗೆ ಎರಡನೇ ಸಿನಿಮಾ ನಿರ್ದೇಶಿಸಲು ಹನುಮ ರೆಡ್ಡಿ ಮುಂದಾಗಿದ್ದಾರೆ. ಹನುಮ ರೆಡ್ಡಿ ಈಗಾಗಲೇ ಯಶ್ ಅವರಿಗೆ ಕತೆ ಹೇಳಿದ್ದು, ಸಿನಿಮಾ ಇನ್ನೂ ಚರ್ಚೆಯ ಹಂತದಲ್ಲಿದೆ ಎನ್ನಲಾಗಿದೆ. ಆದರೆ ಯಶ್ ಅವರಿಗೆ ಕತೆ ಇಷ್ಟವಾಗಿದ್ದು, ಚಿತ್ರಕತೆಯನ್ನು ಅಂತಿಮಗೊಳಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಇದನ್ನೂ ಓದಿ:ಈ ವಿಷಯದಲ್ಲಿ ಯಶ್‌ಗಿಂತ ನಾನಿ ಬೆಸ್ಟ್; ನಟಿ ಶ್ರೀನಿಧಿ ಶೆಟ್ಟಿ ನೇರ ಮಾತು
ಯಶ್ ಅವರ ‘ಟಾಕ್ಸಿಕ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣಲಿಲ್ಲವಾದ್ದರಿಂದ ಅವರು ಮುಂದಿನ ಸಿನಿಮಾಕ್ಕೆ ಇನ್ನಷ್ಟು ಎಚ್ಚರಿಕೆ ವಹಿಸುವುದು ಖಾತ್ರಿ. ಹನುಮ ರೆಡ್ಡಿ ನಿರ್ದೇಶನದ ಒಂದೂ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಆದರೂ ಅವರಿಗೆ ಯಶ್ ಅವರು ಅವಕಾಶ ಕೊಡುತ್ತಿರುವುದು ಹಲವರಿಗೆ ಆಶ್ಚರ್ಯ ತಂದಿದೆ. ‘ಟಾಕ್ಸಿಕ್’ ಸಿನಿಮಾದಿಂದ ಅಭಿಮಾನಿಗಳಿಗೆ ಆಗಿರುವ ನಿರಾಸೆಯನ್ನು ಸರಿಪಡಿಸಲು ಯಶ್ ಅವರು ದೊಡ್ಡ ಸಿನಿಮಾದೊಂದಿಗೆ ಮತ್ತೆ ಬರುವ ನಿರೀಕ್ಷೆ ಅಭಿಮಾನಿಗಳದ್ದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ