AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಗೋರಿಯನ್ನು ತಾವೇ ಕಟ್ಟಿಕೊಂಡಿದ್ದ ಹನಿ ಸಿಂಗ್

ಹನಿ ಸಿಂಗ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಎದುರಿಸಿದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ. ಅತಿರೇಕದ ಅಹಂಕಾರದಿಂದ ತಾನು 'ದೇವರು' ಎಂದು ಭಾವಿಸಿದ್ದ ಅವರ ದುರಹಂಕಾರದ ಬಗ್ಗೆ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಮೊದಲೇ ಎಚ್ಚರಿಸಿದ್ದರು. ಅವರ ಮಾತುಗಳು ಹೇಗೆ ನಿಜವಾದವು.

ತಮ್ಮ ಗೋರಿಯನ್ನು ತಾವೇ ಕಟ್ಟಿಕೊಂಡಿದ್ದ ಹನಿ ಸಿಂಗ್
ಹನಿ ಸಿಂಗ್
ರಾಜೇಶ್ ದುಗ್ಗುಮನೆ
|

Updated on:May 28, 2026 | 1:20 PM

Share

ಖ್ಯಾತ ರಾಪರ್ ಮತ್ತು ಗಾಯಕ ಯೋಯೋ ಹನಿ ಸಿಂಗ್ ಹಾಡುಗಳು ಈಗ ಮೊದಲಿನಷ್ಟು ಹಿಟ್ ಆಗುತ್ತಿಲ್ಲ. ಅವರು ಹಲವು ಸಂದರ್ಶನಗಳನ್ನು ನೀಡುತ್ತಿದ್ದಾರೆ. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ತಾವೆದುರಿಸಿದ ಮಾನಸಿಕ ಆರೋಗ್ಯದ ಸಮಸ್ಯೆಗಳು ಹಾಗೂ ಚಿತ್ರರಂಗದಿಂದ ದಿಢೀರ್ ದೂರ ಸರಿದಿದ್ದರ ಹಿಂದಿನ ಅಸಲಿ ಕಾರಣಗಳನ್ನು ಅವರು ಇತ್ತೀಚೆಗೆ ಬಿಚ್ಚಿಟ್ಟಿದ್ದಾರೆ. ವಿಶೇಷವೆಂದರೆ, ತಾವಾಗಿಯೇ ತಂದುಕೊಂಡ ಈ ಕಷ್ಟದ ದಿನಗಳ ಬಗ್ಗೆ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರು ಮೊದಲೇ ಎಚ್ಚರಿಸಿದ್ದರು ಎಂದು ಹನಿ ಸಿಂಗ್ (Honey Singh) ಹೇಳಿಕೊಂಡಿದ್ದಾರೆ. ಅದರಲ್ಲೂ ಕಿಂಗ್ ಖಾನ್ ಅಂದು ಹೇಳಿದ್ದ ಮಾತುಗಳು ಮುಂದೆ ತಮ್ಮ ಜೀವನದಲ್ಲಿ ಹೇಗೆ ನಿಜವಾದವು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿದ ಹನಿ ಸಿಂಗ್, ‘2013 ಮತ್ತು 2014ರ ಅವಧಿಯಲ್ಲಿ ನಾನು ವೃತ್ತಿಜೀವನದ ಉತ್ತುಂಗದಲ್ಲಿದ್ದೆ. ಆದರೆ ಅದೇ ಸಮಯದಲ್ಲಿ ನನ್ನ ಬುದ್ಧಿ ಕೆಟ್ಟಿತ್ತು. ಅತಿ ಚಿಕ್ಕ ವಯಸ್ಸಿನಲ್ಲೇ ಭಾರಿ ಹಣ, ಯಶಸ್ಸು ಮತ್ತು ಮಿತಿಮೀರಿದ ಜನಪ್ರಿಯತೆ ಸಿಕ್ಕಿದ್ದರಿಂದ ನನ್ನ ನಡುವಳಿಕೆಯೇ ಬದಲಾಗಿಹೋಗಿತ್ತು. ನಾನು ಎಲ್ಲರನ್ನೂ ಗೌರವವಿಲ್ಲದೆ ನಡೆಸಿಕೊಳ್ಳುತ್ತಿದ್ದೆ. ಎಲ್ಲವನ್ನೂ ನಾನೇ ಮಾಡಿದ್ದು ಎಂಬ ಅಹಂಕಾರ ತಲೆಗೇರಿ, ಕೊನೆಗೆ ನನ್ನನ್ನು ನಾನೇ ‘ದೇವರು’ ಎಂದು ಕರೆದುಕೊಳ್ಳಲು ಶುರುಮಾಡಿದ್ದೆ. ಒಳಗಿನಿಂದ ನಾನು ತುಂಬಾ ರಾಕ್ಷಸೀ ಪ್ರವೃತ್ತಿಯ ಮನಸ್ಥಿತಿಗೆ ತಲುಪಿದ್ದೆ. ನನ್ನ ಆ ರೂಪ ನನಗೇ ಇಷ್ಟವಾಗುತ್ತಿರಲಿಲ್ಲ’ ಎಂದು ಹನಿ ಸಿಂಗ್ ತಮ್ಮ ಕರಾಳ ದಿನಗಳನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಯಶಸ್ಸಿನ ದಿನಗಳಲ್ಲಿ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರಂತಹ ದಿಗ್ಗಜರ ಜೊತೆ ಕೆಲಸ ಮಾಡುವ ಅವಕಾಶ ಹನಿ ಸಿಂಗ್ ಅವರಿಗೆ ಸಿಕ್ಕಿತ್ತು. ‘ಅವರೆಲ್ಲರೂ ಅಷ್ಟೊಂದು ಎತ್ತರಕ್ಕೆ ಬೆಳೆದಿದ್ದರೂ ತುಂಬಾ ಸರಳವಾಗಿದ್ದಾರೆ. ನಾನು ಹೋಗುತ್ತಿದ್ದ ತಪ್ಪು ಹಾದಿ ಮತ್ತು ನನ್ನ ಕೆಟ್ಟ ಲೈಫ್‌ಸ್ಟೈಲ್ ಅನ್ನು ಅವರು ಗಮನಿಸುತ್ತಿದ್ದರು. ಮುಖ್ಯವಾಗಿ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ನನ್ನನ್ನು ಕರೆದು, ನೀನು ಮಾಡುತ್ತಿರುವುದು ತಪ್ಪು, ಇದರಿಂದ ದೂರ ಇರು ಎಂದು ಪದೇ ಪದೇ ಎಚ್ಚರಿಸುತ್ತಿದ್ದರು. ಅದರಲ್ಲೂ ಶಾರುಖ್ ಖಾನ್ ಹಲವು ಬಾರಿ ನನ್ನ ಬಳಿ, ನೀನು ಹೋಗುತ್ತಿರುವ ಈ ಹಾದಿ ನಿನ್ನನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ, ನಿನ್ನನ್ನು ಮುಗಿಸಿ, ಸರ್ವನಾಶ ಮಾಡುತ್ತದೆ ಎಂದು ನೇರವಾಗಿಯೇ ಹೇಳಿದ್ದರು’ ಎಂದು ಹನಿ ಸಿಂಗ್ ಬಹಿರಂಗಪಡಿಸಿದ್ದಾರೆ.

ಅಂದು ಶಾರುಖ್ ಖಾನ್ ಹೇಳಿದ ಮಾತುಗಳು ಮುಂದೆ ಹನಿ ಸಿಂಗ್ ಜೀವನದಲ್ಲಿ ಅಕ್ಷರಶಃ ನಿಜವಾದವು. ತಲೆಗೇರಿದ ಅಹಂಕಾರ ಮತ್ತು ಕೆಟ್ಟ ಅಭ್ಯಾಸಗಳಿಂದಾಗಿ ಹನಿ ಸಿಂಗ್ ಮುಂದೆ ಮಾನಸಿಕ ಕಾಯಿಲೆಗೆ ಒಳಗಾದರು. ಪರಿಣಾಮವಾಗಿ, ಸಿನಿಮಾ ಜಗತ್ತಿನ ನಂಬರ್ ಒನ್ ಸ್ಥಾನದಲ್ಲಿದ್ದಾಗಲೇ ಅವರು ಎಲ್ಲವನ್ನೂ ಕಳೆದುಕೊಂಡು ಚಿತ್ರರಂಗದಿಂದ ಹಲವು ವರ್ಷಗಳ ಕಾಲ ಸಂಪೂರ್ಣವಾಗಿ ಹೊರಗುಳಿಯಬೇಕಾಯಿತು.

ಇದನ್ನೂ ಓದಿ: ಶಾರುಖ್ ಖಾನ್, ಅಕ್ಷಯ್ ಕುಮಾರ್ ನನಗೆ ಎಚ್ಚರಿಕೆ ನೀಡಿದ್ದರು: ಹನಿ ಸಿಂಗ್

ತಮ್ಮ ತಪ್ಪಿನ ಅರಿವಾಗಿ, ಸುದೀರ್ಘ ವರ್ಷಗಳ ಚಿಕಿತ್ಸೆ ಮತ್ತು ಹೋರಾಟದ ನಂತರ ಹನಿ ಸಿಂಗ್ ಈಗ ಮಾನಸಿಕ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸದ್ಯ ಸಂಗೀತ ಲೋಕಕ್ಕೆ ಭರ್ಜರಿಯಾಗಿ ಕಂಬ್ಯಾಕ್ ಮಾಡಿರುವ ಅವರು ಲೈವ್ ಶೋಗಳನ್ನು ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:15 pm, Thu, 28 May 26

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More