ಎಸಿಯಿಂದ ಹೊರಬಂದ ತಕ್ಷಣ ತಲೆನೋವು, ಸುಸ್ತಾದಂತೆ ಅನಿಸುವುದಕ್ಕೆ ಕಾರಣವೇನು?

ಬೇಸಿಗೆಯಲ್ಲಿ ಕೆಲವರು ಎಸಿ ಬಿಟ್ಟು ಹೊರಗೆ ಬರುವುದಕ್ಕೆ ಮನಸ್ಸೆ ಮಾಡಲ್ಲ. ಮತ್ತೊಂದಿಷ್ಟು ಜನ ಅತಿಯಾಗಿ ಇದನ್ನು ಬಳಕೆ ಮಾಡುತ್ತಾರೆ. ಆದರೆ ಕೆಲವರಿಗೆ ಎಸಿಯಿಂದ ಹೊರಬಂದ ತಕ್ಷಣ ತಲೆನೋವು, ಆಯಾಸ, ತಲೆ ತಿರುಗುವುದು ಸೇರಿದಂತೆ ನಾನಾ ರೀತಿಯ ಅನುಭವವಾಗುತ್ತದೆ. ಈ ಬಗ್ಗೆ ಡಾ. ಸುಭಾಷ್ ಗಿರಿ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ಈ ರೀತಿ ಆಗುವುದಕ್ಕೆ ಕಾರಣವೇನು, ಇದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಎಸಿಯಿಂದ ಹೊರಬಂದ ತಕ್ಷಣ ತಲೆನೋವು, ಸುಸ್ತಾದಂತೆ ಅನಿಸುವುದಕ್ಕೆ ಕಾರಣವೇನು?
Air Conditioner Sickness
Image Credit source: Getty images

Updated on: Mar 21, 2026 | 8:45 PM

ಬೇಸಿಗೆ ಕಾಲದಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಅನೇಕರು ಎಸಿ (AC) ಬಳಕೆ ಮಾಡುತ್ತಾರೆ. ಆದರೆ ಕೆಲವರಿಗೆ ಎಸಿ ಇದ್ದಲ್ಲಿಂದ ಹೊರಬಂದ ಕೂಡಲೇ ತಲೆನೋವು, ಒಂದು ರೀತಿಯ ಸುಸ್ತಾದಂತೆ ಅನುಭವವಾಗುತ್ತದೆ. ಕೆಲವರಿಗೆ ತಲೆಸುತ್ತು, ಕಣ್ಣಿನಲ್ಲಿ ನೋವು, ಮೂಗು ಬ್ಲಾಕ್ ಆಗುವುದು, ಗಂಟಲು ಒಣಗುವುದು ಮತ್ತು ದೇಹದಲ್ಲಿ ಸ್ವಲ್ಪ ದುರ್ಬಲತೆ ಕೂಡ ಕಾಣಿಸಬಹುದು. ತಣ್ಣನೆಯ ವಾತಾವರಣದಿಂದ ಏಕಾಏಕಿ ಬಿಸಿ ವಾತಾವರಣಕ್ಕೆ ಬರುವಾಗ ದೇಹಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಇದರಿಂದ ಅಸಹಜತೆ ಹೆಚ್ಚಾಗುತ್ತದೆ. ಹಲವರು ಈ ರೀತಿ ಆಗುವುದನ್ನು ನಿರ್ಲಕ್ಷಿಸುತ್ತಾರೆ, ಆದರೆ ಈ ರೀತಿ ಪದೇ ಪದೇ ಆಗುತ್ತಿದ್ದರೆ ಅದನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಆದರೆ ಅದಕ್ಕೂ ಮೊದಲು ಈ ರೀತಿ ಆಗುವುದಕ್ಕೆ ಕಾರಣವೇನು, ಇದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಾರಣವೇನು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಎಸಿಯಲ್ಲಿ ಹೆಚ್ಚು ಸಮಯ ಕಳೆದರೆ ದೇಹ ತಣ್ಣಗಿರುವ ತಾಪಮಾನಕ್ಕೆ ಹೊಂದಿಕೊಳ್ಳುತ್ತದೆ. ನಂತರ ಏಕಾಏಕಿ ಹೊರಗಿನ ಬಿಸಿ ಗಾಳಿಗೆ ಬಂದಾಗ ದೇಹಕ್ಕೆ ತಾಪಮಾನ ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ತಲೆನೋವು ಮತ್ತು ದೌರ್ಬಲ್ಯ ಉಂಟಾಗಬಹುದು. ತಣ್ಣನೆಯ ಗಾಳಿಯಲ್ಲಿ ಹೆಚ್ಚು ಸಮಯ ಕಳೆದರೆ ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಷನ್) ಉಂಟಾಗಬಹುದು. ಹಾಗಾದಾಗಲೂ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಎಸಿ ಗಾಳಿ ಸಾಮಾನ್ಯವಾಗಿ ಒಣಗಿದಂತಿರುತ್ತದೆ. ಇದು ಮೂಗು ಮತ್ತು ಗಂಟಲಿನ ಮೇಲೆ ಪರಿಣಾಮ ಬೀರಿ ಅಸಹಜತೆಯನ್ನು ಉಂಟುಮಾಡುತ್ತದೆ. ಜೊತೆಗೆ, ಎಸಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅದರಲ್ಲಿ ಧೂಳು ಅಥವಾ ಅಲರ್ಜಿ ಉಂಟುಮಾಡುವ ಕಣಗಳು ಸಂಗ್ರಹವಾಗುತ್ತವೆ, ಇದು ಸಮಸ್ಯೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ನಿಮ್ಮ ಮಕ್ಕಳು ಕೂಡ ಎಸಿ ಕೊಠಡಿಯಲ್ಲಿ ಮಲಗುತ್ತಾರಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಸಮಸ್ಯೆ ತಡೆಗಟ್ಟಲು ಏನು ಮಾಡಬೇಕು?

  • ಎಸಿಯ ತಾಪಮಾನವನ್ನು ತುಂಬಾ ಕಡಿಮೆ ಮಾಡಬೇಡಿ, ಸಾಮಾನ್ಯ ಮಟ್ಟದಲ್ಲೇ ಇಡಿ.
  • ನಿರಂತರವಾಗಿ ಎಸಿಯಲ್ಲಿ ಹೆಚ್ಚು ಸಮಯ ಕಳೆಯಬೇಡಿ.
  • ಮಧ್ಯೆ ಮಧ್ಯೆ ಹೊರಗಿನ ತಾಜಾ ಗಾಳಿಯನ್ನು ಪಡೆಯಿರಿ.
  • ದಿನಪೂರ್ತಿ ಸಾಕಷ್ಟು ನೀರು ಕುಡಿಯಿರಿ.
  • ಹೊರಗೆ ಹೋಗುವ ಮೊದಲು ಎಸಿಯ ತಾಪಮಾನವನ್ನು ನಿಧಾನವಾಗಿ ಹೆಚ್ಚಿಸಿ.
  • ಸಮಸ್ಯೆ ಪದೇ ಪದೇ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us