
ಬೆಳಗ್ಗೆ ಎದ್ದ ತಕ್ಷಣ ಬ್ಲ್ಯಾಕ್ ಕಾಫಿ ಕುಡಿಯುವ ಅಭ್ಯಾಸ ಹಲವರಿಗಿದೆ. ಇತ್ತೀಚೆಗೆ ಬ್ಲ್ಯಾಕ್ ಕಾಫಿಗೆ ನಿಂಬೆ ರಸ ಸೇರಿಸಿ ಕುಡಿಯುವುದು ಕೂಡ ಟ್ರೆಂಡ್ ಆಗಿದೆ. ಇದರಿಂದ ಬೇಗ ತೂಕ ಕಡಿಮೆಯಾಗುತ್ತದೆ, ದೇಹದ ಕೊಬ್ಬು ಕರಗುತ್ತದೆ, ಬಾಡಿ ಡಿಟಾಕ್ಸ್ ಆಗುತ್ತದೆ ಎಂಬ ಹಲವು ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಪಾನೀಯ ನಿಜಕ್ಕೂ ತೂಕ ಇಳಿಸಲು ಮ್ಯಾಜಿಕ್ ಡ್ರಿಂಕ್ ಆಗಿದೆಯೇ, ಇದನ್ನು ಪ್ರತಿದಿನ ಕುಡಿಯುವುದು ಎಲ್ಲರಿಗೂ ಸುರಕ್ಷಿತವೇ, ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಈ ಬಗ್ಗೆ ಯಥಾರ್ಥ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಯಟೆಟಿಕ್ಸ್ ವಿಭಾಗದ ಮುಖ್ಯಸ್ಥೆ ಸುಹಾನಿ ಸೇಠ್ ಅಗರ್ವಾಲ್ ಅವರು ಬ್ಲ್ಯಾಕ್ ಕಾಫಿಯಲ್ಲಿರುವ ಕೆಫೀನ್ ಕೆಲಕಾಲ ಎನರ್ಜಿ ಹೆಚ್ಚಿಸಬಹುದು. ಕೆಲವರಲ್ಲಿ ಹಸಿವನ್ನು ಸ್ವಲ್ಪ ಕಡಿಮೆ ಮಾಡಬಹುದು.
ಕಾಫಿಗೆ ನಿಂಬೆ ಸೇರಿಸಿದ ಮಾತ್ರಕ್ಕೆ ಹೆಚ್ಚುವರಿ ಕೊಬ್ಬು ಕರಗುತ್ತದೆ ಅಥವಾ ತೂಕ ವೇಗವಾಗಿ ಇಳಿಯುತ್ತದೆ ಎಂಬುದಕ್ಕೆ ಬಲವಾದ ವೈಜ್ಞಾನಿಕ ಸಾಕ್ಷ್ಯವಿಲ್ಲ. ಬ್ಲ್ಯಾಕ್ ಕಾಫಿಯಲ್ಲಿರುವ ಕೆಫೀನ್ ದೇಹದ ಮೆಟಾಬಾಲಿಕ್ ರೇಟ್ ಮತ್ತು ಎನರ್ಜಿಯನ್ನು ಅಲ್ಪಾವಧಿಗೆ ಹೆಚ್ಚಿಸಬಹುದು. ಆದರೆ ಇದರ ಪರಿಣಾಮ ಸೀಮಿತವಾಗಿರುತ್ತದೆ. ಕೇವಲ ಬ್ಲ್ಯಾಕ್ ಕಾಫಿ ಅಥವಾ ನಿಂಬೆ ಕಾಫಿ ಕುಡಿಯುವುದರಿಂದ ತೂಕ ಕಡಿಮೆಯಾಗುವುದಕ್ಕೆ ಸಾಧ್ಯವಿಲ್ಲ. ತೂಕ ನಿಯಂತ್ರಣಕ್ಕೆ ಕ್ಯಾಲೊರಿ ಸೇವನೆ, ಪ್ರೋಟೀನ್, ಫೈಬರ್, ದೈಹಿಕ ಚಟುವಟಿಕೆ ಮತ್ತು ಉತ್ತಮ ನಿದ್ರೆ ಹೆಚ್ಚು ಮುಖ್ಯ.
ನಿಂಬೆ ವಿಟಮಿನ್ ಸಿ ಯ ಉತ್ತಮ ಮೂಲ. ಬ್ಲ್ಯಾಕ್ ಕಾಫಿ ಕೆಫೀನ್ ಒದಗಿಸುತ್ತದೆ. ಆದರೆ ಈ ಎರಡನ್ನು ಒಟ್ಟಿಗೆ ಕುಡಿದರೆ ವಿಟಮಿನ್ ಸಿ ಅಥವಾ ಕೆಫೀನ್ ಕಾರಣದಿಂದ ವಿಶೇಷವಾದ ಫ್ಯಾಟ್ ಬರ್ನಿಂಗ್ ಪರಿಣಾಮ ಉಂಟಾಗುತ್ತದೆ ಎಂಬುದಕ್ಕೆ ಸದ್ಯಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ. ಹೀಗಾಗಿ ಇದನ್ನು ತೂಕ ಇಳಿಸುವ ವಿಶೇಷ ಪಾನೀಯ ಎಂದು ಪರಿಗಣಿಸುವುದು ಸರಿಯಲ್ಲ.
ಬ್ಲ್ಯಾಕ್ ಕಾಫಿ-ನಿಂಬೆ ಮಿಶ್ರಣವನ್ನು ದೇಹದ ಟಾಕ್ಸಿನ್‌ಗಳನ್ನು ಹೊರಹಾಕುವ ವಿಶೇಷ ಡಿಟಾಕ್ಸ್ ಡ್ರಿಂಕ್ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ದೇಹದಲ್ಲಿರುವ ಲಿವರ್ ಮತ್ತು ಕಿಡ್ನಿಗಳು ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಿ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಪ್ರತಿದಿನ ನಿಂಬೆ ಕಾಫಿ ಕುಡಿಯಲೇಬೇಕು ಎಂಬ ಅಗತ್ಯವಿಲ್ಲ.
ತೂಕ ಇಳಿಸಲು ಯಾವುದೇ ಒಂದು ಡ್ರಿಂಕ್ ಅಥವಾ ಆಹಾರದ ಮೇಲೆ ಅವಲಂಬಿತರಾಗುವುದಕ್ಕಿಂತ ಸಮತೋಲಿತ ಜೀವನಶೈಲಿ ಮುಖ್ಯ. ಪ್ರೋಟೀನ್ ಮತ್ತು ಫೈಬರ್‌ಯುಕ್ತ ಆಹಾರ, ಸೂಕ್ತ ಕ್ಯಾಲೊರಿ ಸೇವನೆ, ನಿಯಮಿತ ವ್ಯಾಯಾಮ, ಸಾಕಷ್ಟು ನೀರು ಮತ್ತು ಚೆನ್ನಾಗಿ ನಿದ್ರೆ ಮಾಡುವುದರಿಂದ ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಸೂಚನೆ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ಆಸಿಡಿಟಿ, ಹೃದಯ ಸಂಬಂಧಿತ ಸಮಸ್ಯೆಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರು ಅಥವಾ ಅರ್ಹ ಡಯಟಿಷಿಯನ್‌ರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ