
ಇತ್ತೀಚಿನ ದಿನಗಳಲ್ಲಿ ಕಣ್ಣು ಒಣಗುವ (Dry Eye) ಸಮಸ್ಯೆ ಸಾಮಾನ್ಯವಾಗಿದೆ. ಕಣ್ಣಿನಲ್ಲಿ ಸಾಕಷ್ಟು ನೀರು ಇರದಿದ್ದಾಗ ಅಥವಾ ಉತ್ಪತ್ತಿಯಾದ ಕಣ್ಣೀರು ಬೇಗ ಒಣಗಿದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಕಣ್ಣಿನಲ್ಲಿ ಉರಿ, ಚುಚ್ಚುವಿಕೆ, ಕೆಂಪಾಗುವುದು, ಮಬ್ಬಾಗಿ ಕಾಣುವುದು ಅಥವಾ ಕಣ್ಣಿನಲ್ಲಿ ಏನೋ ಸಿಕ್ಕಿಕೊಂಡಂತ ಅನುಭವ ಉಂಟಾಗಬಹುದು. ದೀರ್ಘಕಾಲ ನಿರ್ಲಕ್ಷಿಸಿದರೆ ದೈನಂದಿನ ಕೆಲಸಗಳ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಈ ಸಮಸ್ಯೆಗೆ ಕಾರಣವೇನು, ಸ್ಕ್ರೀನ್ ಟೈಮ್ (Screen Time) ನಿಂದ ಮಾತ್ರ ಈ ಸಮಸ್ಯೆ ಉಂಟಾಗುತ್ತದೆಯೇ ಅಥವಾ ಇದಕ್ಕೆ ಬೇರೆ ಕಾರಣಗಳಿವೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ಗಳನ್ನು ಹೆಚ್ಚು ಸಮಯ ಬಳಸುವುದರಿಂದ ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಕಣ್ಣಿನೊಳಗಿನ ಕಣ್ಣೀರಿನ ಪದರ ಬೇಗ ಒಣಗಬಹುದು. ಆದರೆ ಸ್ಕ್ರೀನ್ ಟೈಮ್ ಮಾತ್ರವೇ ಕಾರಣವಲ್ಲ. ವಯಸ್ಸಾಗುವುದು, ಕೆಲವು ಔಷಧಿಗಳ ಬಳಕೆ, ದೀರ್ಘಕಾಲ ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದು, ಆಟೋಇಮ್ಯೂನ್ ಕಾಯಿಲೆಗಳು, ಧೂಳು, ಹೊಗೆ, ಒಣ ವಾತಾವರಣ ಹಾಗೂ ಹಾರ್ಮೋನ್ ಬದಲಾವಣೆಗಳೂ ಈ ಸಮಸ್ಯೆಗೆ ಕಾರಣವಾಗಬಹುದು.
ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಏನ್ ಮಾಡ್ಬೇಕು? ನಿಮ್ಮ ದಿನಚರಿ ಆರೋಗ್ಯಕರವಾಗಿ ಆರಂಭವಾಗಲು ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಕಣ್ಣಿನಲ್ಲಿ ನಿರಂತರ ಉರಿ, ಚುಚ್ಚಿದಂತಹ ಅನುಭವ, ಕೆಂಪಾಗುವುದು, ಮಬ್ಬಾಗಿ ಕಾಣುವುದು, ಬೆಳಕಿಗೆ ಕಣ್ಣು ಬಿಡಲು ಸಾಧ್ಯವಾಗದಿರುವುದು, ಕಣ್ಣಿನಲ್ಲಿ ಏನೋ ಸಿಕ್ಕಿಕೊಂಡಂತ ಅನುಭವ ಅಥವಾ ಅತಿಯಾಗಿ ನೀರು ಬರುವುದು ಕಂಡುಬಂದರೆ ತಕ್ಷಣ ಗಮನ ಹರಿಸಬೇಕು. ತೀವ್ರ ನೋವು ಅಥವಾ ದೃಷ್ಟಿ ಏಕಾಏಕಿ ಕಡಿಮೆಯಾದರೆ ಕಣ್ಣಿನ ತಜ್ಞರನ್ನು ಸಂಪರ್ಕಿಸುವುದು ಅಗತ್ಯ.
ಸ್ಕ್ರೀನ್ ಬಳಸುವಾಗ ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳಿ ಮತ್ತು ಆಗಾಗ ಕಣ್ಣು ಮಿಟುಕಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ. ಧೂಳು, ಹೊಗೆ ಮತ್ತು ತೀವ್ರ ಗಾಳಿಯಿಂದ ಕಣ್ಣುಗಳನ್ನು ರಕ್ಷಿಸಿ. ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಐ ಡ್ರಾಪ್ಸ್ ಬಳಸಬಹುದು. ಸಮಸ್ಯೆ ಪದೇಪದೇ ಕಾಣಿಸಿಕೊಂಡರೆ ಅಥವಾ ದೀರ್ಘಕಾಲ ಮುಂದುವರಿದರೆ ಕಣ್ಣಿನ ತಜ್ಞರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಆರೋಗ್ಯಕರ ಅಭ್ಯಾಸಗಳು ಕಣ್ಣಿನ ಆರೋಗ್ಯ ಕಾಪಾಡಲು ಸಹಕಾರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ