ತಜ್ಞರ ಬರಹ: ಸಂತಾನದ ಕನಸಿಗೆ ಧಕ್ಕೆಯಾಗುವ ಪುರುಷರ ಬಂಜೆತನಕ್ಕೆ ಇದೆ ಪರಿಹಾರ

| Updated By: Skanda

Updated on: May 31, 2021 | 9:13 AM

ಮಕ್ಕಳಾಗದಿರಲು ಪುರುಷರಲ್ಲಿ ದೈಹಿಕ ಸಮಸ್ಯೆಗಳು ಹಲವು ಬಾರಿ ಕಾರಣವಾಗಿರುತ್ತದೆ. ಅಂಥ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಈ ಲೇಖನದಲ್ಲಿ ಸಂತಾನಹೀನತೆ ಚಿಕಿತ್ಸಾ ತಜ್ಞರು ಮಾಹಿತಿ ನೀಡಿದ್ದಾರೆ.

ತಜ್ಞರ ಬರಹ: ಸಂತಾನದ ಕನಸಿಗೆ ಧಕ್ಕೆಯಾಗುವ ಪುರುಷರ ಬಂಜೆತನಕ್ಕೆ ಇದೆ ಪರಿಹಾರ
ತಂದೆ-ಮಗು (ಪ್ರಾತಿನಿಧಿಕ ಚಿತ್ರ)
Follow us on

ಪುರುಷರ ಫಲವತ್ತತೆಯನ್ನು ವೀರ‍್ಯಾಣುವಿನ ಪ್ರಮಾಣ ಮತ್ತು ಗುಣಮಟ್ಟಗಳು ಬಹುತೇಕ ನಿರೂಪಿಸುತ್ತವೆ. ಕಾಮಕೂಟದಲ್ಲಿ ಸ್ಖಲಿಸುವ ವಿರ‍್ಯಾಣು ಪ್ರಮಾಣ ಸಾಕಷ್ಟು ಇಲ್ಲದಿದ್ದರೆ ಅಥವಾ ಅದು ಕಡಿಮೆ ಗುಣಮಟ್ಟದ್ದಾಗಿದ್ದರೆ, ಸಂಗಾತಿ ಗರ್ಭಿಣಿಯಾಗುವುದು ಅಸಾಧ್ಯವಲ್ಲದಿದ್ದರೂ ಕಷ್ಟವಾಗುತ್ತದೆ. ಒಂದು ವರ್ಷದಿಂದ ನೀವು ಸಾಮಾನ್ಯವಾದ ಲೈಂಗಿಕ ಜೀವನವನ್ನು ಹೊಂದಿದ್ದು, ಸಂಗಾತಿ ಗರ್ಭಿಣಿಯಾಗುವಲ್ಲಿ ಯಶಸ್ಸು ಕಾಣದಿದ್ದರೆ, ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಗರ್ಭಧಾರಣೆಗೆ ಅಡ್ಡಿಯಾಗುತ್ತಿರುವ ಅಂಶಗಳನ್ನು ಕುರಿತು ನಿಮಗೆ ಅರಿವಿದ್ದಲ್ಲಿ ತಡ ಮಾಡದೆ ಆದಷ್ಟು ಬೇಗ ಚಿಕಿತ್ಸೆ ಪಡೆಯಲು ಮುಂದಾಗುವುದು ಒಳ್ಳೆಯದು. ಇದೇ ಸಮಯದಲ್ಲಿ ನೀವು ಮತ್ತು ನಿಮ್ಮ ಪತ್ನಿ ಫಲವತ್ತತೆಯ ಸಮಸ್ಯೆಗಳಿಗಾಗಿ ಪರೀಕ್ಷೆಗಳಿಗೆ ಒಳಗಾಗಬೇಕು.

ಪುರುಷರಲ್ಲಿ ವೀರ‍್ಯಾಣು ಉತ್ಪತ್ತಿ ಅಥವಾ ವೀರ‍್ಯಾಣು ಸಾಗಣೆಯಲ್ಲಿನ ಸಮಸ್ಯೆಗಳಿಂದ ಬಂಜೆತನ ಉಂಟಾಗಬಹುದು. ಈ ಕುರಿತ ಕಾರಣವನ್ನು ನಿರೂಪಿಸಲು ವೈದ್ಯಕೀಯ ಪರೀಕ್ಷೆಗಳು ಸಹಾಯ ಮಾಡಬಹುದು. ಬಂಜೆತನ ಹೊಂದಿರುವ ಪುರುಷರ ಪೈಕಿ ಸುಮಾರು ಮೂರನೇ ಎರಡರಷ್ಟು ಜನರಲ್ಲಿ ಸಾಕಷ್ಟು ವೀರ‍್ಯಾಣುಗಳ ಉತ್ಪಾದನೆ ಇಲ್ಲದಿರುವುದು ಅಥವಾ ಸೂಕ್ತ ಚಟುವಟಿಕೆ (ಚಲನೆ) ಹೊಂದಿರದ ವೀರ‍್ಯಾಣುಗಳ ಸಮಸ್ಯೆ ಇರುತ್ತದೆ. ಬಂಜೆತನ ಹೊಂದಿರುವ ಪುರುಷರ ಪೈಕಿ ಸುಮಾರು 5ನೇ ಒಂದರಷ್ಟು ಜನರು ಅದರಲ್ಲಿ ವ್ಯಾಸೆಕ್ಟಮಿಗೆ (ಪುರುಷರ ಸಂತಾನಹರಣ ಶಸ್ತಚಿಕಿತ್ಸೆ) ಒಳಗಾಗಿರುವ ಜನರನ್ನು ಒಳಗೊಂಡಂತೆ ಇತರೆ ದೈಹಿಕ ಸಮಸ್ಯೆಗಳಿರುವುದು ಕಂಡುಬಂದಿದೆ. ವೃಷಣಗಳಿಂದ ಶಿಶ್ನದ ಕಡೆಗೆ ಸಾಗುವ ಕೊಳವೆಗಳಲ್ಲಿ ಅಡೆತಡೆಗಳು (ಅಥವಾ ಅಡಚಣೆಗಳು ಎನ್ನುತ್ತಾರೆ) ವೀರ‍್ಯ ಸ್ಖಲನವಾಗುವುದನ್ನು ತಡೆಯಬಹುದು.

ಪುರುಷರಲ್ಲಿ ಬಂಜೆತನ ಉಂಟುಮಾಡುವ ಕಾರಣಗಳು
ಬಂಜೆತನದ ತೊಂದರೆಯನ್ನು ಅನುಭವಿಸುತ್ತಿರುವ 100 ಜೋಡಿಗಳ ಪೈಕಿ ಒಬ್ಬರಲ್ಲಿ ಯೋನಿನಾಳದೊಳಕ್ಕೆ ಹೋಗುವ ವೀರ‍್ಯಾಣುವಿನ ಸಾಮರ್ಥ್ಯದ ಮೇಲೆ ಪರಿಣಾಮ ಉಂಟು ಮಾಡಬಹುದಾದ ಲೈಂಗಿಕ ಸಮಸ್ಯೆಗಳು ಇವೆ. ಮಿದುಳಿನಲ್ಲಿ ಹಾರ್ಮೋನ್‌ಗಳನ್ನು ನಿಯಂತ್ರಿಸುವ ಪಿಟ್ಯೂಟರಿ ಗ್ರಂಥಿಯು ಬಂಜೆತನ ಅನುಭವಿಸುತ್ತಿರುವ 100 ಪುರುಷರಲ್ಲಿ ಒಬ್ಬರ ವೃಷಣಗಳ ಮೇಲೆ ಪರಿಣಾಮ ಬೀರುವಂತೆ ಕಡಿಮೆ ಮಟ್ಟದ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ. ಬಂಜೆತನ ಹೊಂದಿರುವ 16 ಪುರುಷರಲ್ಲಿ ಒಬ್ಬರಲ್ಲಿ ವೀರ‍್ಯಾಣು ಪ್ರೋಟಿನ್‌ಗಳ ವಿರುದ್ಧ ಹೋರಾಡುವ ಆ್ಯಂಟಿಬಾಡಿಗಳಿದ್ದು (ರೋಗನಿರೋಧಕ ಕೋಶ), ಬಹುತೇಕ ಪ್ರಕರಣಗಳಲ್ಲಿ ವೀರ‍್ಯಾಣು ಆ್ಯಂಟಿಬಾಡಿಗಳು ನಿಮ್ಮ ಪತ್ನಿ ಗರ್ಭಿಣಿಯಾಗುವ ಅವಕಾಶಗಳ ಮೇಲೆ ಪರಿಣಾಮ ಬೀರದಿರಬಹುದು. ಆದರೆ, ಕೆಲವು ಪ್ರಕರಣಗಳಲ್ಲಿ ನಿಮ್ಮ ಫಲವತ್ತತೆಯನ್ನು ಇವು ಕಡಿಮೆ ಮಾಡಬಹುದು. ಅನುವಂಶಿಕ ಅಂಶಗಳು ಸೇರಿದಂತೆ ವಿಭಿನ್ನ ಅಂಶಗಳಿಂದ ಪುರುಷ ಬಂಜೆತನ ಉಂಟಾಗಬಹುದು.

ಶಿಶ್ನ ನಿಮಿರುವಿಕೆಯ ಸಮಸ್ಯೆಯ ಹಿಂದಿರುವ ಮಾನಸಿಕ ಕಾರಣಗಳು
ಶಿಶ್ನ ನಿಮಿರುವಿಕೆಯ ಸಮಸ್ಯೆಗೆ ಹಲವು ಅಂಶಗಳು ಕಾರಣವಾಗುತ್ತವೆ. ಇದು ಅತ್ಯಂತ ಸಾಮಾನ್ಯ ಲೈಂಗಿಕ ತೊಂದರೆಯಾಗಿರುತ್ತದೆಯಲ್ಲದೆ, ಅನೇಕ ಪುರುಷರ ಮೇಲೆ ಪರಿಣಾಮ ಉಂಟುಮಾಡುತ್ತದೆ. ಶಿಶ್ನ ನಿಮಿರುವಿಕೆಯ ಸಮಸ್ಯೆಯ ಬಹುತೇಕ ಪ್ರಕರಣಗಳಲ್ಲಿ ದೈಹಿಕ ಕಾರಣ ಇದ್ದರೆ, ಕೆಲವು ಪುರುಷರಲ್ಲಿ ಮಾನಸಿಕ ಸಮಸ್ಯೆಗಳು ಮೂಲ ಕಾರಣಗಳಾಗುತ್ತವೆ.

ಶಿಶ್ನ ನಿಮಿರುವಿಕೆಯ ಸಮಸ್ಯೆ ಉಂಟುಮಾಡುವ ಕೆಲವು ಮಾನಸಿಕ ಕಾರಣಗಳು ಮತ್ತು ಅವುಗಳನ್ನು ಹೇಗೆ ಗಮನಿಸಬಹುದು ಎಂಬುದು ಈ ಕೆಳಗಿನಂತಿದೆ:

ಮಾನಸಿಕ ಒತ್ತಡ
ಔದ್ಯೋಗಿಕ, ಆರ್ಥಿಕ ಮತ್ತು ವೈವಾಹಿಕ ತೊಂದರೆಗಳು ಸೇರಿದಂತೆ ನಿರ್ದಿಷ್ಟ ಅಂಶಗಳಿಂದ ಚಾಲನೆ ಲಭಿಸುವ ಪ್ರಮುಖ ಕಾರಣಗಳಲ್ಲಿ ಒತ್ತಡ ಒಂದಾಗಿರುತ್ತದೆ. ವ್ಯಕ್ತಿಯು ಒತ್ತಡದಲ್ಲಿದ್ದಾರೆ ಎಂದರೆ ಅವರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರಲು ದೊಡ್ಡ ಪ್ರಮಾಣದ ಒತ್ತಡದ ಇರಬೇಕು ಎಂದೇನಿಲ್ಲ. ಅಲ್ಪಪ್ರಮಾಣದ ಒತ್ತಡವೂ ಕೂಡ ಶಿಶ್ನ ನಿಮಿರುವಿಕೆಯ ಸಮಸ್ಯೆ ಉಂಟುಮಾಡಬಹುದು.

ಆತಂಕ
ಶಿಶ್ನ ನಿಮಿರುವಿಕೆಯ ಸಮಸ್ಯೆಗೆ ಒತ್ತಡವು ಪ್ರಮುಖ ಕಾರಣಗಳಲ್ಲಿ ಒಂದು. ಇದರ ಜೊತೆಗೆ ಆತಂಕವೂ ಕೂಡ ಗಮನಿಸಬೇಕಾದ ವಿಷಯವಾಗಿರುತ್ತದೆ. ಸಮಸ್ಯೆ ಮರುಕಳಿಸುತ್ತದೆ ಎಂಬ ಅತಿಯಾದ ದುಗುಡ ಪುರುಷರಲ್ಲಿ ಉಂಟಾಗಿ, ಇದರಿಂದ ‘ಲೈಂಗಿಕ ಸಾಮರ್ಥ್ಯದ ಆತಂಕ’ ಅಥವಾ ‘ಲೈಂಗಿಕ ವೈಫಲ್ಯದ ಭಯ’ ಕಾಡಬಹುದು. ಇದರಿಂದ ಶಿಶ್ನ ನಿಮಿರುವಿಕೆಯ ಸಮಸ್ಯೆ ಉಂಟಾಗಬಹುದು.

ಖಿನ್ನತೆ
ಶಿಶ್ನ ನಿಮಿರುವಿಕೆಯ ಸಮಸ್ಯೆಗೆ ದಾರಿಯಾಗುವ ಮತ್ತೊಂದು ಅಂಶ ಎಂದರೆ ಖಿನ್ನತೆ. ಇದು ಶಿಶ್ನ ನಿಮಿರುವಿಕೆಯ ಸಮಸ್ಯೆಗೆ ಸಾಮಾನ್ಯ ಕಾರಣವಾಗಿರುತ್ತದೆ. ಅಲ್ಲದೆ ಇದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಕಾಮಕೂಟದ ಸಂದರ್ಭಗಳಲ್ಲಿ ಪುರುಷನು ಸಂಪೂರ್ಣವಾಗಿ ಆರಾಮವಾಗಿದ್ದರೂ ಕೂಡ ಖಿನ್ನತೆಯು ಶಿಶ್ನ ನಿಮಿರುವಿಕೆಯ ಸಮಸ್ಯೆಗೆ ದಾರಿ ಮಾಡಬಹುದು. ಖಿನ್ನತೆ ತಡೆಯಲು ತೆಗೆದುಕೊಳ್ಳುವ ಔಷಧಗಳಿಂದಲೂ ಲೈಂಗಿಕ ಸಮಸ್ಯೆಗಳು ಉಂಟಾಗಬಹುದು.

ಲೈಂಗಿಕ ಸಮಸ್ಯೆಯ ಭಯ
ಯಾರಾದರೂ ವ್ಯಕ್ತಿ ಶಿಶ್ನ ನಿಮಿರುವಿಕೆಯ ಸಮಸ್ಯೆಯನ್ನು ಮೊದಲ ಬಾರಿ ಅನುಭವಿಸಿದಾಗ ಅವರು ಎಂದಿಗೂ ಚೇತರಿಸಿಕೊಂಡು ಸಾಮಾನ್ಯ ಲೈಂಗಿಕ ಕ್ರಿಯೆಯನ್ನು ಮಾಡಲಾರರು ಎಂಬ ಚಿಂತೆಗೆ ಒಳಗಾಗಬಹುದು. ಇದು ಭಯ ಅಥವಾ ಕೀಳರಿಮೆಗೆ ದಾರಿಯಾಗಬಹುದು. ಈ ಚಿಂತನೆಗಳು ಮುಂದಿನ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಶಿಶ್ನ ನಿಮಿರುವಿಕೆಯನ್ನು ಉಳಿಸಿಕೊಳ್ಳುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಉಂಟುಮಾಡಬಹುದು. ಲೈಂಗಿಕ ಸಮಸ್ಯೆಯ ಭಯ ಕಡಿಮೆಯಾಗುವುದಕ್ಕಾಗಿ ಅರ್ಹ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಕಂಡುಕೊಳ್ಳುವುದಕ್ಕೆ ಶಿಫಾರಸ್ಸು ಮಾಡಲಾಗುತ್ತದೆ.

ಬಂಜೆತನದಿಂದ ಪಾರಾಗಲು ಈ ಅಂಶಗಳನ್ನು ಗಮನಿಸಿ..
– ಸಿಗರೇಟು ಸೇದುವುದು ಅಥವಾ ಧೂಮಪಾನದಿಂದ ದೂರವಿರಿ
– ಮದ್ಯಪಾನದಿಂದಲೂ ಸಂತಾನಾಭಿವೃದ್ಧಿಗೆ ಹಲವು ತೊಂದರೆಗಳಾಗುತ್ತವೆ
– ದೇಹದಾರ್ಢ್ಯ ಪಟುಗಳು ಮತ್ತು ಅಥ್ಲೀಟ್‌ಗಳು ಅನಬಾಲಿಕ್ ಸ್ಟಿರಾಯ್ಡ್​ಗಳನ್ನು ವಿವೇಚನೆಯಿಲ್ಲದೆ ಬಳಸಬಾರದು
– ಲೈಂಗಿಕ ಸೋಂಕುಗಳ ಬಗ್ಗೆ ಎಚ್ಚರಿಕೆಯಿರಲಿ
– ತಾಪಮಾನದ ಹೆಚ್ಚಿಸುವಂಥ ಬಿಗಿಯಾದ ಒಳಉಡುಪುಗಳ ಬಳಕೆ ನಿಲ್ಲಿಸಿ
– ನಿಮ್ಮ ವೃತ್ತಿಯ ಕಾರಣಕ್ಕೆ ಸಂರಕ್ಷಣಾತ್ಮಕ ಉಪಕರಣ ಅಥವಾ ಉಡುಪುಗಳನ್ನು ಧರಿಸುತ್ತಿದ್ದರೆ ನಿಮ್ಮ ಫಲವತ್ತತೆಯ ಮೇಲೆ ಪರಿಣಾಮವಾಗದಂತೆ ಎಲ್ಲಾ ವೃತ್ತಿಯಲ್ಲಿನ ಆರೋಗ್ಯ ಸಂರಕ್ಷಣೆಯ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿ.
– ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ಜೋಡಿಗಳು ವಿಷಕಾರಿ ರಾಸಾಯನಿಕಗಳಿಂದ ದೂರವಿರಬೇಕು
– ನೀವು ಹಾರ್ಮೊನ್ ಚಿಕಿತ್ಸೆ ಪಡೆದಿದ್ದಲ್ಲಿ ಅಥವಾ ವೃಷಣಗಳ ದುರಸ್ತಿಗಾಗಿ ಶಸ್ತಕ್ರಿಯೆ ಮಾಡಿಸಿಕೊಂಡಿದ್ದರೆ ಇದನ್ನು ನಿಮ್ಮ ವೈದ್ಯರಿಗೆ ಮುಂಚಿತವಾಗಿ ತಿಳಿಸುವುದು ಒಳ್ಳೆಯದು. ಏಕೆಂದರೆ ಇವು ಫಲವತ್ತತೆಯ ಮೇಲೆ ಪರಿಣಾಮ ಬೀರುವ ಸಂಭವವಿರುತ್ತದೆ.

ಬಂಜೆತನದ ರೋಗನಿರ್ಣಯ
ಬಂಜೆತನದ ಸಮಸ್ಯೆಗಾಗಿ ನೀವು ವೈದ್ಯರ ಬಳಿ ಸಮಾಲೋಚನೆಗೆ ಹೋದಾಗ ವೈದ್ಯರು ನಿಮ್ಮ ಹಳೆಯ ವೈದ್ಯಕೀಯ ಸಮಸ್ಯೆಗಳ ಬಗ್ಗೆ ವಿಚಾರಣೆ ನಡೆಸುತ್ತಾರೆ. ಅಲ್ಲದೆ ದೈಹಿಕ ಪರೀಕ್ಷೆ, ವೀರ‍್ಯಾಣು ವಿಶ್ಲೇಷಣೆಗಳನ್ನು ನಡೆಸುತ್ತಾರೆ. ನಿಮ್ಮ ವೀರ‍್ಯಾಣುವಿನ ಆಕಾರ, ಚಲನೆಯ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗುವುದು. ಜೊತೆಗೆ ವೀರ‍್ಯಾಣು ಉತ್ಪತ್ತಿಯನ್ನು ನಿಯಂತ್ರಿಸುವ ಹಾರ್ಮೋನ್‌ಗಳ ಮಟ್ಟಗಳನ್ನು ನಿರೂಪಿಸಲು ರಕ್ತಪರೀಕ್ಷೆಯೊಂದನ್ನು ನಡೆಸಲಾಗುವುದು. ಕೆಲವು ಪ್ರಕರಣಗಳಲ್ಲಿ ನಿಮ್ಮ ಮೂತ್ರದಲ್ಲಿ ವೀರ‍್ಯಾಣುಗಳು ಇವೆಯೇ ಎಂಬುದನ್ನು ವೈದ್ಯರು ಪರೀಕ್ಷಿಸಬಹುದು. ಹಿಮ್ಮುಖ ಚಲನೆಯ ಸ್ಖಲನ ಇದ್ದಲ್ಲಿ ಅದರ ನಿರ್ಣಯಕ್ಕೂ ವೈದ್ಯರು ಕ್ರಮ ತೆಗೆದುಕೊಳ್ಳುತ್ತಾರೆ. ಅಲ್ಟ್ರಾಸೌಂಡ್, ಎಂಆರ್‌ಐ ಅಥವಾ ವೃಷಣದ ಬಯಾಪ್ಸಿ, ಅಂದರೆ ಪರೀಕ್ಷೆಗಾಗಿ ಸಣ್ಣ ತುಣುಕು ಹೊರತೆಗೆಯುವ ಸಣ್ಣ ಕ್ರಮವನ್ನು ನಿಮ್ಮ ವೈದ್ಯರು ಶಿಫಾರಸ್ಸು ಮಾಡಬಹುದು.

ಚಿಕಿತ್ಸೆ ಹೇಗೆ?
ಬಂಜೆತನದ ತೊಂದರೆ ಹೊಂದಿರುವ ಪ್ರತಿ ಎಂಟು ಪುರುಷರಲ್ಲಿ ಒಬ್ಬರಿಗೆ ಚಿಕಿತ್ಸೆ ನೀಡಬಹುದಾದ ತೊಂದರೆ ಇರುತ್ತದೆ. ಈ ಚಿಕಿತ್ಸೆ ನಂತರ ಇಂಥ ಜೋಡಿ ಸಹಜವಾಗಿ ಮಗುವನ್ನು ಹೊಂದಬಲ್ಲದು.

ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ದಂಪತಿಗಳು ಪ್ರನಾಳ ಶಿಶು (ಟೆಸ್ಟ್ ಟ್ಯೂಬ್ ಬೇಬಿ-ಐವಿಎಫ್) ಪಡೆಯಲು ವೈದ್ಯರು ಸಲಹೆ ಮಾಡಬಹುದು. ನಿಮ್ಮ ವೀರ‍್ಯಾಣುಗಳ ಸಂಖ್ಯೆ ಬಹಳ ಕಡಿಮೆ ಇದ್ದರೂ ಕೂಡ ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪೆರ್ಮ್ ಇಂಜೆಕ್ಷನ್ (ICSI) ಮೂಲಕ ಈ ಕ್ರಮ ಕೈಗೊಳ್ಳಲಾಗುತ್ತದೆ. ಇದು ವಿಶೇಷ ರೀತಿಯ ಐವಿಎಫ್ ಕ್ರಮವಾಗಿದ್ದು, ತೀವ್ರತರದ ಪುರುಷ ಬಂಜೆತನದ ಪ್ರಕರಣಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಸಂಪೂರ್ಣವಾಗಿ ಪ್ರಬುದ್ಧವಾಗಿರುವ ಅಂಡಾಣುವಿನ ಒಳಗೆ ಒಂದು ವೀರ‍್ಯಾಣುವನ್ನು ಇಂಜೆಕ್ಷನ್ ಮೂಲಕ ಸೇರಿಸುವ ಕ್ರಮವನ್ನು ಒಳಗೊಂಡಿರುತ್ತದೆ.

ಬಂಜೆತನದ ಅನುವಂಶೀಯ ಕಾರಣಗಳ ಪರಿಹಾರಕ್ಕಾಗಿ ಪ್ರಸ್ತುತ ಯಾವುದೇ ಚಿಕಿತ್ಸೆಗಳು ಲಭ್ಯವಿರುವುದಿಲ್ಲ. ಸಹಜವಾಗಿ ಮಕ್ಕಳ ತಂದೆಯಾಗಲು ಸಾಧ್ಯವಿರದವರಿಗೆ ವೈದ್ಯಕೀಯ ನೆರವಿನ ಪ್ರನಾಳ ಶಿಶುಚಿಕಿತ್ಸೆ ಅತ್ಯಂತ ಸುರಕ್ಷಿತ ಆಯ್ಕೆಯಾಗಿರುತ್ತದೆ.

ಡಿಎನ್‌ಎ ಫ್ರಾಗ್ಮೇಂಟೇಷನ್ ಇಂಡೆಕ್ಸ್
ಸ್ಪರ್ಮ್ ಡಿಎನ್‌ಎ ಫ್ರಾಗ್ಮೇಂಟೇಷನ್ ಇಂಡೆಕ್ಸ್ ಅಂದರೆ ಡಿಎನ್‌ಎ ಬಿರುಕಿನ ಸೂಚ್ಯಂಕವು ಡಿಎನ್‌ಎನ ಸಮಗ್ರತೆ ಮತ್ತು ಹಾನಿಯನ್ನು ಅಳೆಯುತ್ತದೆ. ವೀರ‍್ಯಾಣುವಿಗೆ ಸಾಧ್ಯವಿರಬಹುದಾದ ಹಾನಿಯನ್ನು ಪರೀಕ್ಷಿಸಲು ವೀರ‍್ಯಾಣುವಿನ ವಂಶವಾಹಿ ವಸ್ತುವನ್ನು ಪರೀಕ್ಷೆಗೊಳಪಡಿಸಲಾಗುತ್ತದೆ.

ಯಶಸ್ವಿ ಗರ್ಭದಾನ, ಭ್ರೂಣ ರಚನೆ, ಗರ್ಭಧಾರಣೆಗಾಗಿ ಮತ್ತು ವಂಶವಾಹಿ ವಸ್ತುವನ್ನು ಸಂತತಿಗೆ ವರ್ಗಾಯಿಸಲು ವೀರ‍್ಯಾಣು ಡಿಎನ್‌ಎ ಸಮಗ್ರತೆ ಮುಖ್ಯವಾಗಿರುತ್ತದೆ. ವೀರ್ಯಾಣುವಿನಲ್ಲಿ ಅತ್ಯಂತ ಸಾಮಾನ್ಯ ಡಿಎನ್‌ಎ ಅಸಮಂಜಸತೆ ಎಂದರೆ ಡಿಎನ್‌ಎ ಬಿರುಕಾಗಿರುತ್ತದೆ. ವೀರ‍್ಯಾಣು ಒಳಗಿನ ಅನುವಂಶೀಯ ವಸ್ತು ಇದಾಗಿದ್ದು, ಇದರಿಂದ ಐವಿಎಫ್ ವೈಫಲ್ಯ ಮತ್ತು ಗರ್ಭಪಾತಕ್ಕೆ ದಾರಿಯಾಗಬಹುದು. ಸಾಮಾನ್ಯ ವೀರ‍್ಯಾಣು ವಿಶ್ಲೇಷಣೆ ಪರೀಕ್ಷೆಯಿಂದ ಡಿಎನ್‌ಎ ಬಿರುಕನ್ನು ಪತ್ತೆ ಮಾಡಲು ಸಾಧ್ಯವಾಗದು. ಬದಲಿಗೆ ಉನ್ನತ ಪರೀಕ್ಷೆಯನ್ನು ಬಳಸಲಾಗುತ್ತದೆ. ಇದರಲ್ಲಿ ವೀರ‍್ಯಾಣು ಮಾದರಿಗಳನ್ನು ಡಿಎನ್‌ಎ ಬಿರುಕು ಹೊಂದಿರುವ ವೀರ‍್ಯಾಣುಗಳ ಪ್ರಮಾಣವನ್ನು ನಿರೂಪಿಸುವುದಕ್ಕಾಗಿ ವಿಶ್ಲೇಷಿಸಲಾಗುತ್ತದೆ. ಇದಕ್ಕೆ ಡಿಎನ್‌ಎ ಬಿರುಕಿನ ಸೂಚ್ಯಂಕ ಎನ್ನುತ್ತಾರೆ. ಡಿಎನ್‌ಎ ಬಿರುಕಿನ ಸೂಚ್ಯಂಕದ ಪರೀಕ್ಷೆಯು ಪುರುಷ ಬಂಜೆತನದ ಅಪಾಯ ಹೊಂದಿರುವ ಪುರುಷರನ್ನು ಗುರುತಿಸಲು, ಪುರುಷ ಬಂಜೆತನವನ್ನು ನಿಯಂತ್ರಿಸಲು ಮತ್ತು ಐವಿಎಫ್ ಚಿಕಿತ್ಸಾ ಅವಧಿಯ ಪ್ರಗತಿಯನ್ನು ಅಳೆಯಲು ನೆರವಾಗುತ್ತದೆ.

ಡಾ.ಮಹೇಶ ಕೋರೆಗೋಳ

(ಲೇಖಕರು: ಡಾ.ಮಹೇಶ ಕೋರೆಗೋಳ, ಐವಿಎಫ್, ಸಂತಾನಹೀನತೆ ಚಿಕಿತ್ಸಾ ತಜ್ಞರು, ನೋವಾ ಐವಿಎಫ್ ಫರ್ಟಿಲಿಟಿ, ಕೋರಮಂಗಲ, ಬೆಂಗಳೂರು)

(Expert Writing on Male infertility Diagnosis Reasons and Remedies)

ಇದನ್ನೂ ಓದಿ: Menstrual Hygiene Day: ಮೌಢ್ಯ-ಮೈಲಿಗೆಗಳು ಮುಖ್ಯವಲ್ಲ, ಆರೋಗ್ಯ-ಸ್ವಚ್ಛತೆಯೇ ಮುಖ್ಯ; ಮುಟ್ಟಿನ ಗುಟ್ಟು ಹೇಳಿದ ಜ್ಯೋತಿ ಇ ಹಿಟ್ನಾಳ್

ಇದನ್ನೂ ಓದಿ: Menstrual Hygiene Day 2021: ಎಲ್ಲ ದೃಷ್ಟಿಯಿಂದಲೂ ಮುಟ್ಟಿನ ಕಪ್​​ಗಳು ತುಂಬ ಅನುಕೂಲ; ಕನ್ಯತ್ವಪೊರೆಗೆ ಖಂಡಿತ ಮಾರಕವಲ್ಲ