ಹೆಚ್ಚುತ್ತಿರುವ ಬಿಸಿಲು ಮತ್ತು ಉಷ್ಣಾಂಶದಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತಾ? ಏನ್ ಹೇಳ್ತಾರೆ ತಜ್ಞರು
ಈ ಸಮಯದಲ್ಲಿ, ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ಶಾಖ ತೀವ್ರ ಮಟ್ಟಕ್ಕೆ ಹೋಗಿದ್ದು ಇದು ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ. ಶಾಖ ಮತ್ತು ಹೆಚ್ಚುತ್ತಿರುವ ತಾಪಮಾನವು ಆರೋಗ್ಯಕ್ಕೆ ಅಪಾಯಕಾರಿ, ಆದರೆ ಅವು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದೇ? ಬಿಸಿಲು ಮತ್ತು ಹೃದಯದ ಆರೋಗ್ಯಕ್ಕೂ ಇರುವ ಸಂಬಂಧವೇನು, ಈ ಅಪಾಯ ಯಾರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ಹೃದ್ರೋಗ ತಜ್ಞ ಡಾ. ಅಜಿತ್ ಜೈನ್ ಅವರಿಂದ ತಿಳಿದುಕೊಳ್ಳಿ.

ದೇಶದ ಹಲವು ಭಾಗಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತೀವ್ರ ಬಿಸಿಲು ಮತ್ತು ಬಿಸಿಗಾಳಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆಸ್ಪತ್ರೆಗಳಲ್ಲಿ ಡಿಹೈಡ್ರೇಶನ್ ಮತ್ತು ಹೀಟ್ ಸ್ಟ್ರೋಕ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ, ಹೆಚ್ಚುತ್ತಿರುವ ಬಿಸಿಲಿನಿಂದ ಹೃದಯಾಘಾತದ ಅಪಾಯವೂ ಹೆಚ್ಚುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ದೆಹಲಿ ರಾಜೀವ್ ಗಾಂಧಿ ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಅಜಿತ್ ಜೈನ್ ಅವರ ಪ್ರಕಾರ, ಬಿಸಿಲು ನೇರವಾಗಿ ಹೃದಯಾಘಾತಕ್ಕೆ (Heart Attack) ಕಾರಣವಾಗುವುದಿಲ್ಲ. ಆದರೆ ಅತಿಯಾದ ಉಷ್ಣಾಂಶ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ವಿಶೇಷವಾಗಿ ಈಗಾಗಲೇ ಹೃದಯ ಸಂಬಂಧಿತ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದ್ದಾರೆ. ಹಾಗಾದರೆ ಬಿಸಿಲು ಮತ್ತು ಹೃದಯದ ಆರೋಗ್ಯಕ್ಕೂ ಇರುವ ಸಂಬಂಧವೇನು, ಈ ಅಪಾಯ ಯಾರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಬಿಸಿಲು ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧವೇನು?
ತಾಪಮಾನ ಹೆಚ್ಚಾದಾಗ ದೇಹವನ್ನು ತಂಪಾಗಿಡಲು ದೇಹ ಹೆಚ್ಚು ಶ್ರಮಿಸುತ್ತದೆ. ಈ ಸಮಯದಲ್ಲಿ ಹೃದಯವು ರಕ್ತ ಸಂಚಾರವನ್ನು ವೇಗವಾಗಿ ನಡೆಸಬೇಕಾಗುತ್ತದೆ. ಹೆಚ್ಚು ಬೆವರು ಬರುತ್ತಿರುವುದರಿಂದ ದೇಹದಲ್ಲಿ ನೀರು ಮತ್ತು ಅಗತ್ಯ ಖನಿಜಗಳ ಕೊರತೆ ಉಂಟಾಗಬಹುದು. ಇದರಿಂದ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಬದಲಾವಣೆ ಸಂಭವಿಸಬಹುದು. ತಜ್ಞರ ಪ್ರಕಾರ, ದೀರ್ಘಕಾಲ ಡಿಹೈಡ್ರೇಶನ್ ಇದ್ದರೆ ರಕ್ತ ಗಟ್ಟಿಯಾಗುವ ಸಾಧ್ಯತೆ ಹೆಚ್ಚುತ್ತದೆ. ಕೆಲ ಸಂದರ್ಭಗಳಲ್ಲಿ ಇದರಿಂದ ರಕ್ತನಾಳಗಳಲ್ಲಿ ರಕ್ತದ ಗುಡ್ಡೆ (Blood Clot) ಉಂಟಾಗಿ ಹೃದಯಾಘಾತಕ್ಕೂ ಕಾರಣವಾಗಬಹುದು.
ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?
- ಹೈ ಬಿಪಿ ಇರುವವರಲ್ಲಿ
- ಹೃದಯರೋಗಿಗಳಲ್ಲಿ
- ವೃದ್ಧರಲ್ಲಿ
- ಹೆಚ್ಚು ಸಮಯ ಬಿಸಿಲಿನಲ್ಲಿ ಕೆಲಸ ಮಾಡುವವರಲ್ಲಿ
- ಡಿಹೈಡ್ರೇಶನ್ ಸಮಸ್ಯೆ ಇರುವವರಲ್ಲಿ ಈ ಅಪಾಯ ಹೆಚ್ಚು
ಇದನ್ನೂ ಓದಿ: ಹೃದಯಾಘಾತ ಆಗುವ 30 ದಿನಗಳ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡುಬರುತ್ತದೆ
ಗಮನಿಸಬೇಕಾದ ಲಕ್ಷಣಗಳು:
- ಅಚಾನಕ್ ಹೆಚ್ಚು ಬೆವರು ಬರುವುದು
- ಹೃದಯ ಬಡಿತ ವೇಗವಾಗುವುದು
- ಎದೆನೋವು
- ಉಸಿರಾಟದ ತೊಂದರೆ
- ದೌರ್ಬಲ್ಯ ಮತ್ತು ತಲೆಸುತ್ತು
ಬಿಸಿಲಿನ ಸಮಯದಲ್ಲಿ ಹೇಗೆ ಜಾಗರೂಕರಾಗಬೇಕು?
ತಜ್ಞರ ಸಲಹೆಯಂತೆ, ದಿನಪೂರ್ತಿ ಸಾಕಷ್ಟು ನೀರು ಕುಡಿಯಬೇಕು. ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ತೆಳುವಾದ ಹಾಗೂ ಹಗುರವಾದ ಬಟ್ಟೆ ಧರಿಸುವುದು ಉತ್ತಮ. ಹೃದಯ ಸಂಬಂಧಿತ ಕಾಯಿಲೆ ಇರುವವರು ತಮ್ಮ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಜೊತೆಗೆ ಹೆಚ್ಚುತ್ತಿರುವ ಬಿಸಿಲಿನ ಪರಿಣಾಮವನ್ನು ಲಘುವಾಗಿ ತೆಗೆದುಕೊಳ್ಳದೆ, ದೇಹದಲ್ಲಿ ಕಂಡುಬರುವ ಯಾವುದೇ ಅಸಹಜ ಲಕ್ಷಣಗಳನ್ನು ತಕ್ಷಣ ವೈದ್ಯರಿಗೆ ತೋರಿಸುವುದು ಅತ್ಯಂತ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

