AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಸ್ ಪೇಪರ್​​ಗಳಲ್ಲಿ ಕಟ್ಟಿಕೊಟ್ಟ ತಿಂಡಿ ತಿನ್ನುತ್ತೀರಾ? ನಿಮ್ಮ ಇಷ್ಟದ ಆಹಾರ ವಿಷವಾದೀತು ಎಚ್ಚರ!

ಆಹಾರ ಪದಾರ್ಥಗಳನ್ನು ದಿನಪತ್ರಿಕೆಗಳಲ್ಲಿ ಸುತ್ತುವುದು ಅಥವಾ ಸಂಗ್ರಹಿಸಿಡುವುದರ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮತ್ತೊಮ್ಮೆ ಜನರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಅನೇಕ ಬೀದಿಬದಿಯ ಆಹಾರದ ಅಂಗಡಿಗಳು ಮತ್ತು ಉಪಾಹಾರ ಗೃಹಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಅಭ್ಯಾಸವು, ಆಹಾರವನ್ನು ಹಾನಿಕಾರಕ ರಾಸಾಯನಿಕಗಳು ಮತ್ತು ಜೀವಾಣುಗಳಿಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ ಹಾಗೂ ಆ ಆಹಾರವನ್ನು ಸೇವನೆಗೆ ಅಸುರಕ್ಷಿತವಾಗಿಸುತ್ತದೆ ಎಂದು ಪ್ರಾಧಿಕಾರ ಹೇಳಿದೆ.

ನ್ಯೂಸ್ ಪೇಪರ್​​ಗಳಲ್ಲಿ ಕಟ್ಟಿಕೊಟ್ಟ ತಿಂಡಿ ತಿನ್ನುತ್ತೀರಾ? ನಿಮ್ಮ ಇಷ್ಟದ ಆಹಾರ ವಿಷವಾದೀತು ಎಚ್ಚರ!
Food In NewspaperImage Credit source: TV9
ಸುಷ್ಮಾ ಚಕ್ರೆ
|

Updated on: Jun 10, 2026 | 8:20 PM

Share

ನವದೆಹಲಿ, ಜೂನ್ 10: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಆಹಾರ ಪದಾರ್ಥಗಳನ್ನು ಅದರಲ್ಲೂ ವಿಶೇಷವಾಗಿ ಕರಿದ ತಿಂಡಿಗಳನ್ನು ದಿನಪತ್ರಿಕೆಗಳಲ್ಲಿ ಸುತ್ತಿ ಕೊಡುವುದರ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದೆ. ನಮ್ಮ ನೆಚ್ಚಿನ ಸ್ಟ್ರೀಟ್ ಫುಡ್‌ಗಳಾದ ಬೋಂಡಾ, ಬಜ್ಜಿ, ವಡೆ, ಪಕೋಡ, ಸಮೋಸಾಗಳನ್ನು ಪೇಪರ್​​ಗಳಲ್ಲಿ ಹಾಕಿಕೊಂಡು ತಿನ್ನುವುದರಿಂದ ಅದು ನಮ್ಮ ಆರೋಗ್ಯಕ್ಕೆ ಹೇಗೆ ಮಾರಕವಾಗಬಹುದು ಎಂಬ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ನಮ್ಮ ದೇಶದಲ್ಲಿ ಹೋಟೆಲ್‌ಗಳು, ಬೇಕರಿಗಳು ಮತ್ತು ಬೀದಿಬದಿಯ ವ್ಯಾಪಾರಿಗಳು ಕರಿದ ತಿಂಡಿಗಳಿಂದ ಎಣ್ಣೆಯನ್ನು ಹೀರಿಕೊಳ್ಳಲು ಅಥವಾ ಗ್ರಾಹಕರಿಗೆ ಪ್ಯಾಕ್ ಮಾಡಿಕೊಡಲು ದಿನಪತ್ರಿಕೆಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಇದು ನೇರವಾಗಿ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು FSSAI ಆತಂಕ ವ್ಯಕ್ತಪಡಿಸಿದೆ.

ಮುಂಬೈನ ಜನಪ್ರಿಯ ವಡಾ ಪಾವ್ ವ್ಯಾಪಾರಿಯೊಬ್ಬರ ವಿರುದ್ಧ ಇತ್ತೀಚೆಗೆ ಹೊರಡಿಸಲಾದ ಎಚ್ಚರಿಕೆಯ ಬೆನ್ನಲ್ಲೇ ಈ ಆದೇಶ ಬಂದಿದೆ. ದಿನಪತ್ರಿಕೆಯಲ್ಲಿ ಆಹಾರ ಪ್ಯಾಕ್ ಮಾಡುವ ಈ ಮೇಲ್ನೋಟಕ್ಕೆ ಹಾನಿಕಾರಕವಲ್ಲದ ಅಭ್ಯಾಸವು ಅನೇಕ ಜನರ ಆರೋಗ್ಯವನ್ನು ಹೇಗೆ ಅಪಾಯಕ್ಕೆ ದೂಡಬಹುದು ಎಂಬುದಕ್ಕೆ ಇದು ನೆನಪಿಸುವಂತಿದೆ. ತಜ್ಞರ ಪ್ರಕಾರ, ಆಹಾರವು ದಿನಪತ್ರಿಕೆಯ ಕಾಗದದೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ, ಅದರಲ್ಲಿರುವ ಹಾನಿಕಾರಕ ರಾಸಾಯನಿಕಗಳು ಮತ್ತು ರೋಗಕಾರಕ ಸೂಕ್ಷ್ಮಜೀವಾಣುಗಳು ನೇರವಾಗಿ ಆ ಕಾಗದದಲ್ಲಿ ಸುತ್ತಲಾದ ಆಹಾರಕ್ಕೆ ವರ್ಗಾವಣೆಗೊಳ್ಳಬಹುದು.

ಇಂಕ್:

ದಿನಪತ್ರಿಕೆಗಳನ್ನು ಮುದ್ರಿಸಲು ಬಳಸುವ ಇಂಕ್ ಅಥವಾ ಶಾಯಿಯಲ್ಲಿ ಪ್ರಮುಖವಾಗಿ ಸೀಸ ಮತ್ತು ಕ್ಯಾಡ್ಮಿಯಮ್ ನಂತಹ ಭಾರಲೋಹಗಳು ಇರುತ್ತವೆ. ಬಿಸಿಬಿಸಿಯಾದ ಮತ್ತು ಎಣ್ಣೆಯುಕ್ತ ಆಹಾರವನ್ನು ಪತ್ರಿಕೆಯ ಮೇಲಿಟ್ಟಾಗ, ಆ ಬಿಸಿಗೆ ಪತ್ರಿಕೆಯ ಇಂಕ್ ಕರಗಿ ಆಹಾರ ಪದಾರ್ಥಕ್ಕೆ ಅಂಟಿಕೊಳ್ಳುತ್ತದೆ. ಇದು ನಮ್ಮ ಆರೋಗ್ಯಕ್ಕೆ ಅಪಾಯಕಾರಿ.

ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್​ ಬರಲ್ಲ: FSSAI ಸ್ಪಷ್ಟನೆ

ಬಯೋ-ಆಕ್ಟಿವ್ ಸಂಯುಕ್ತಗಳು:

ಶಾಯಿಯಲ್ಲಿ ಫಾರಂಹೈಡ್ ಹಾಗೂ ಫ್ತಾಲೇಟ್‌ಗಳಂತಹ ವಿಷಕಾರಿ ರಾಸಾಯನಿಕಗಳಿರುತ್ತವೆ. ಇವು ಆಹಾರದ ಮೂಲಕ ನಮ್ಮ ಹೊಟ್ಟೆ ಸೇರಿದಾಗ ದೇಹದ ಹಾರ್ಮೋನ್‌ಗಳ ಸಮತೋಲನವನ್ನು ಏರುಪೇರು ಮಾಡುತ್ತವೆ.

ವಿಷಕಾರಿ ಮರುಬಳಕೆಯ ಕಾಗದ:

ದಿನಪತ್ರಿಕೆಗಳನ್ನು ತಯಾರಿಸಲು ಬಳಸುವ ಕಾಗದ ಮತ್ತು ಬಣ್ಣಗಳು ಮರುಬಳಕೆಯ ಪ್ರಕ್ರಿಯೆಗೆ ಒಳಪಟ್ಟಿರುತ್ತವೆ. ಇದರಲ್ಲಿ ಡಯಾಕ್ಸಿನ್ ಮತ್ತು ಇತರ ಹಾನಿಕಾರಕ ರಾಸಾಯನಿಕಗಳು ಇರುತ್ತವೆ. ಇದು ಆರೋಗ್ಯವನ್ನು ಹದಗೆಡಿಸಬಹುದು.

ದಿನಪತ್ರಿಕೆಯಲ್ಲಿ ಸುತ್ತಿದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕ್ಯಾನ್ಸರ್ ಅಪಾಯ:

ಮುದ್ರಣ ಶಾಯಿಯಲ್ಲಿರುವ ರಾಸಾಯನಿಕಗಳು ಕಾರ್ಸಿನೋಜೆನಿಕ್ (ಕ್ಯಾನ್ಸರ್ ಕಾರಕ) ಗುಣಗಳನ್ನು ಹೊಂದಿದ್ದು, ಜೀರ್ಣಾಂಗವ್ಯೂಹ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಅಂಗಾಂಗ ವೈಫಲ್ಯ:

ಶಾಯಿಯಲ್ಲಿರುವ ‘ಸೀಸ’ ನಮ್ಮ ರಕ್ತವನ್ನು ಸೇರಿದರೆ ಅದು ಮೂತ್ರಪಿಂಡಗಳು, ಲಿವರ್ ಮತ್ತು ಮೆದುಳಿನ ಕಾರ್ಯನಿರ್ವಹಣೆಗೆ ತೀವ್ರ ಹಾನಿ ಉಂಟುಮಾಡುತ್ತದೆ. ಮಕ್ಕಳಲ್ಲಿ ಇದು ಬುದ್ಧಿಮತ್ತೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಜೀರ್ಣಕ್ರಿಯೆಯ ಸಮಸ್ಯೆ:

ಈ ರಾಸಾಯನಿಕಗಳು ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವುದಲ್ಲದೆ, ಹೊಟ್ಟೆಯ ಅಲ್ಸರ್ ಹಾಗೂ ತೀವ್ರ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತವೆ.

ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ FSSAI ಸೂಚನೆಗಳೇನು?:

ಪರ್ಯಾಯ ವ್ಯವಸ್ಥೆ ಬಳಸಿ:

ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಅಥವಾ ಎಣ್ಣೆ ಒಣಗಿಸಲು ದಿನಪತ್ರಿಕೆಗಳ ಬದಲಿಗೆ ಫುಡ್ ಗ್ರೇಡ್ ಪೇಪರ್, ಅಲ್ಯೂಮಿನಿಯಂ ಫಾಯಿಲ್ ಅಥವಾ ಬಾಳೆ ಎಲೆಗಳನ್ನು ಬಳಸಬೇಕು.

ಬಟ್ಟೆ ಅಥವಾ ಟಿಶ್ಯೂ ಬಳಸಿ:

ಮನೆಯಲ್ಲಿ ಕರಿದ ತಿಂಡಿಗಳ ಎಣ್ಣೆ ತೆಗೆಯಲು ಕಿಚನ್ ಟಿಶ್ಯೂ ಪೇಪರ್‌ಗಳನ್ನು ಬಳಸಿ, ಯಾವುದೇ ಕಾರಣಕ್ಕೂ ಹಳೆಯ ಪತ್ರಿಕೆಗಳನ್ನು ಬಳಸಬೇಡಿ.

ಜಾಗ್ರತೆ ವಹಿಸಿ:

ಗ್ರಾಹಕರು ಹೋಟೆಲ್ ಅಥವಾ ಬೀದಿಬದಿಯಲ್ಲಿ ದಿನಪತ್ರಿಕೆಯಲ್ಲಿ ಆಹಾರ ನೀಡುವುದನ್ನು ಕಂಡರೆ ಅದನ್ನು ನಿರಾಕರಿಸಬೇಕು. “ಆಹಾರವು ಎಷ್ಟು ಪೌಷ್ಟಿಕವಾಗಿದೆ ಮತ್ತು ರುಚಿಯಾಗಿದೆ ಎಂಬುದು ಎಷ್ಟು ಮುಖ್ಯವೋ, ಅದನ್ನು ಯಾವ ವಸ್ತುವಿನಲ್ಲಿಟ್ಟು ಗ್ರಾಹಕರಿಗೆ ನೀಡಲಾಗುತ್ತಿದೆ ಎಂಬುದೂ ಅಷ್ಟೇ ಮುಖ್ಯ. ದಿನಪತ್ರಿಕೆಯು ಓದಲು ಮಾತ್ರ, ಆಹಾರ ಪ್ಯಾಕ್ ಮಾಡಲು ಅಲ್ಲ ಎಂದು FSSAI ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More