Ghee in the Rainy Season: ಮಳೆಗಾಲದಲ್ಲಿ ಹೆಚ್ಚು ತುಪ್ಪ ತಿನ್ನಲು ಆಯುರ್ವೇದ ಹೇಳುತ್ತದೆ ಯಾಕೆ?
ಮಾನ್ಸೂನ್ನಲ್ಲಿ ಹೆಚ್ಚಾಗಿ ನಮ್ಮ ರೋಗನಿರೋಧಕ ಶಕ್ತಿ, ಕೂದಲು ಮತ್ತು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ತುಪ್ಪ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮಳೆಗಾಲದಲ್ಲಿ ತುಪ್ಪವನ್ನು ಏಕೆ ತಿನ್ನಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಹಾಗಾಗಿ ಅದಷ್ಟು ದೇಹಕ್ಕೆ ಶಕ್ತಿ ನೀಡುವ ಆಹಾರ ಸೇವಿಸುವುದು ತುಂಬಾ ಒಳಿತು. ಇದಕ್ಕೆ ಪೂರಕವೆಂಬ ಹಾಗೇ ಆರೋಗ್ಯ ಮತ್ತು ಅತ್ಯುತ್ತಮ ಪರಿಮಳಕ್ಕೆ ಹೆಸರು ವಾಸಿಯಾಗಿರುವ ತುಪ್ಪ ಸೇವನೆಯು, ಮಳೆಗಾಲದಲ್ಲಿ ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡಲಿದೆ. ಹಿಂದಿನಿಂದಲೂ ತುಪ್ಪ, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದು, ಇದು ನಮ್ಮ ಪ್ರೀತಿಯ ಪಾಕವಿಧಾನಗಳ ಶ್ರೀಮಂತಿಕೆ, ಸಂಪ್ರದಾಯಕ್ಕೆ ಮೆರಗು ನೀಡುತ್ತಾ ಬಂದಿದೆ. ಅಲ್ಲದೆ ಆಯುರ್ವೇದವು ಕೂಡ ಮಳೆಗಾಲದ ಆಹಾರದಲ್ಲಿ ತುಪ್ಪವನ್ನು ಸೇರಿಸಿಕೊಳ್ಳಲು ಏಕೆ ಶಿಫಾರಸು ಮಾಡುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಮಳೆಗಾಲ ಬರುತ್ತಿದ್ದಂತೆ, ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಆಹಾರ ಮತ್ತು ಜೀವನಶೈಲಿಯನ್ನು ಸಾಧ್ಯವಾದಷ್ಟು ಒಳ್ಳೆ ರೀತಿಯಲ್ಲಿ ಬದಲಾಯಿಸಿಕೊಳ್ಳಬೇಕಾಗಿದೆ. ಈ ಬಗ್ಗೆ ಆಯುರ್ವೇದವೂ ಒತ್ತಿ ಹೇಳುತ್ತದೆ. ಅದೇ ರೀತಿ ಪ್ರಸಿದ್ಧ ಆಯುರ್ವೇದ ತಜ್ಞ ಡಾ. ಚೈತಾಲಿ ದೇಶಮುಖ್ ಅವರ ಪ್ರಕಾರ, ತುಪ್ಪವನ್ನು ಶುದ್ಧೀಕರಿಸಿದ ಬೆಣ್ಣೆ ಎಂದೂ ಕರೆಯಲಾಗುತ್ತದೆ, ಅಲ್ಲದೆ ಇದನ್ನು ಸಾತ್ವಿಕ ಆಹಾರವೆಂದು ಪರಿಗಣಿಸಲಾಗುತ್ತದೆ ಮತ್ತು ವಿಶೇಷವಾಗಿ ಮಳೆಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದಿದ್ದಾರೆ.
ಮಳೆಗಾಲದಲ್ಲಿ ತುಪ್ಪ ತಿನ್ನುವುದರಿಂದಾಗುವ ಪ್ರಯೋಜನಗಳು:
1. ಸುಧಾರಿತ ಜೀರ್ಣಕ್ರಿಯೆ:
“ಮಳೆಗಾಲದಲ್ಲಿ ತುಪ್ಪ ತಿನ್ನುವುದರಿಂದ ಆಗುವ ಪ್ರಯೋಜನವೆಂದರೆ ಜೀರ್ಣಕ್ರಿಯೆಯನ್ನು ಸುಲಲಿತವಾಗಿ ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ, ತುಪ್ಪವು ಆರ್ದ್ರ ವಾತಾವರಣದಲ್ಲಿಯೂ ಸುಲಭವಾಗಿ ಜೀರ್ಣವಾಗುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದರ ಲೂಬ್ರಿಕೇಟಿಂಗ್ ಗುಣಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ ಎಂದು ಡಾ ದೇಶ್ಮುಖ್ ಹೇಳುತ್ತಾರೆ. ತುಪ್ಪದ ಸೇವನೆಯು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಎಂದು ಅವರು ವಿವರಿಸುತ್ತಾರೆ. ಹೆಚ್ಚುವರಿಯಾಗಿ, ವಾಕರಿಕೆ, ಉಬ್ಬರ ಮತ್ತು ಮಲಬದ್ಧತೆಯಂತಹ ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.
2. ರೋಗನಿರೋಧಕ ಶಕ್ತಿ ಹೆಚ್ಚಳ:
ತುಪ್ಪವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ, ಇದು ಮಳೆಗಾಲದ ದೋಷಗಳಾದ ವಾತ ಮತ್ತು ಕಫವು ಉಲ್ಬಣಗೊಳ್ಳದಂತೆ ತಡೆಯಲು ಅಗತ್ಯವಾಗಿದೆ. ವಿಟಮಿನ್ ಎ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ತುಪ್ಪವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಈ ಸಮಯದಲ್ಲಿ ಪ್ರಚಲಿತದಲ್ಲಿರುವ ಶೀತ ಮತ್ತು ಜ್ವರದ ವಿರುದ್ಧ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ, ಇದಲ್ಲದೆ, ತುಪ್ಪವು ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಎ, ಡಿ, ಇ ಮತ್ತು ಕೆ ಅನ್ನು ಹೊಂದಿರುತ್ತದೆ, ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ವಿವಿಧ ರೋಗಗಳಿಂದ ರಕ್ಷಿಸಲು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಆಯುರ್ವೇದ ತಜ್ಞರು ತಿಳಿಸಿದ್ದಾರೆ.
3. ಪೋಷಿತ ಕೂದಲು:
ಈ ಹವಾಮಾನದಲ್ಲಿ ನಮ್ಮ ಕೂದಲು ಉದುರುವುದು, ಒರಟಾಗುವುದು ಮತ್ತು ಶುಷ್ಕವಾಗುತ್ತದೆ. ಆದರೆ ತುಪ್ಪ ತಿನ್ನುವುದರಿಂದ ಕೂದಲಿಗೆ ನೈಸರ್ಗಿಕ ಹೇರ್ ಕಂಡೀಷನರ್ ಆಗಿ ರಕ್ಷಣೆಗೆ ಸಿಗುತ್ತದೆ. ಜೊತೆಗೆ ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧಿಯಾಗಿರುವುದರಿಂದ ತುಪ್ಪವು ಕೂದಲಿನ ಬೇರುಗಳನ್ನು ತೇವಗೊಳಿಸುತ್ತದೆ ಮತ್ತು ಅವುಗಳನ್ನು ಬಲಪಡಿಸುತ್ತದೆ. ಅಲ್ಲದೆ ತುಪ್ಪವನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಒಣ ಮತ್ತು ಜಿಗುಟು ಕೂದಲನ್ನು ಪರಿವರ್ತಿಸಬಹುದು ಎಂದು ಡಾ. ದೇಶಮುಖ್ ಸಲಹೆ ನೀಡುತ್ತಾರೆ. ಇದು ರಾಸಾಯನಿಕವಾಗಿ ಸಿಗುವ ಎಣ್ಣೆಗಳು ಮತ್ತು ಕಂಡೀಷನರ್ ಗಳಿಂದ ಸಿಗುವ ಹೊಳಪನ್ನು ಮೀರಿಸುತ್ತದೆ. ವಿಟಮಿನ್ ಡಿ, ಇ, ಕೆ 2 ಮತ್ತು ಎ ಯಿಂದ ತುಂಬಿರುವ ತುಪ್ಪವು ಹೇರ್ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ.
4. ಆರೋಗ್ಯಕರವಾದ ಚರ್ಮ (ತ್ವಚೆ):
ತುಪ್ಪವು ಕೂದಲನ್ನು ಪೋಷಿಸುವುದಲ್ಲದೆ, ಮಳೆಗಾಲದ ಆರ್ದ್ರ ಹವಾಮಾನದಲ್ಲಿ ಮೊಡವೆ ಮತ್ತು ನಮ್ಮ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಅಗತ್ಯವಾದ ಕೊಬ್ಬಿನಾಮ್ಲಗಳು ಮತ್ತು ಕೊಬ್ಬು ಕರಗುವ ಜೀವಸತ್ವಗಳಿಂದ ತುಪ್ಪದ ಸಂಯೋಜನೆಯು ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಯಾವಾಗಲೂ ಹೈಡ್ರೇಟ್ ಆಗಿರುವಂತೆ ಮಾಡುತ್ತದೆ ಎಂದು ಡಾ. ದೇಶ್ಮುಖ್ ತಿಳಿಸಿದ್ದಾರೆ. ಇದಲ್ಲದೆ, ತುಪ್ಪವು ನೈಸರ್ಗಿಕ ಹೊಳಪನ್ನು ನೀಡುತ್ತದೆ, ಕಪ್ಪು ವೃತ್ತಗಳನ್ನು ಕಡಿಮೆ ಮಾಡುತ್ತದೆ, ಒಣ ಚರ್ಮವನ್ನು ಗುಣಪಡಿಸುತ್ತದೆ ಮತ್ತು ಕಪ್ಪು ಕಲೆಗಳನ್ನು ಮರೆಮಾಡಲು ಸಹಾಯ ಮಾಡುತ್ತದೆ, ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.
5. ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಹೆಚ್ಚಳ:
ತುಪ್ಪವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಕೊಬ್ಬಿನಾಮ್ಲಗಳ ಹೆಚ್ಚಿನ ಅಂಶದಿಂದಿರುವುದರಿಂದ, ತುಪ್ಪವು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ, ಸ್ಮರಣೆ, ಏಕಾಗ್ರತೆ, ಗಮನ ಮತ್ತು ನಿರ್ಧಾರ ತೆಗೆದುಕೊಳ್ಳುವಂತಹ ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇದಲ್ಲದೆ, ತುಪ್ಪವು ಒಮೆಗಾ -3 ಸೇರಿದಂತೆ ಕೊಬ್ಬಿನಾಮ್ಲಗಳ ಮೂಲವಾಗಿದೆ, ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸಲು ಮತ್ತು ಒಟ್ಟಾರೆ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ:Ghee Purity: ನೀವು ಸೇವಿಸುವ ತುಪ್ಪ ಶುದ್ಧನಾ ಅಥವಾ ಕಲಬೆರಕೆನಾ ಈ ಸರಳ ವಿಧಾನಗಳ ಮೂಲಕ ತಿಳಿಯಿರಿ
ಮಾನ್ಸೂನ್ ಸಮಯದಲ್ಲಿ ತುಪ್ಪವನ್ನು ಯಾವ ರೀತಿಯಲ್ಲಿ ಬಳಸಬೇಕು ಇಲ್ಲಿದೆ ಸರಳ ವಿಧಾನಗಳು:
ನಮ್ಮ ದಿನಚರಿಯಲ್ಲಿ ತುಪ್ಪವನ್ನು ಸೇರಿಸಿಕೊಳ್ಳುವ ಬಗ್ಗೆ ಡಾ. ದೇಶಮುಖ್ ಅವರ ಕೆಲವು ಪ್ರಾಯೋಗಿಕ ಸಲಹೆಗಳನ್ನು ನೀಡಿದ್ದು ಆ ಬಗ್ಗೆ ಇಲ್ಲಿದೆ ಮಾಹಿತಿ.
1. ತರಕಾರಿಗಳನ್ನು ಹುರಿಯಲು ಬಳಸಿಕೊಳ್ಳಿ, ಬಳಿಕ ಅದಕ್ಕೆ ಬಳಸಿದ ತುಪ್ಪವನ್ನು ಅಡುಗೆ ಎಣ್ಣೆಯಾಗಿ ಬಳಸಬಹುದು. ಹೀಗೆ ಮಾಡುವುದರಿಂದ ಇದರ ಪರಿಮಳ ನಿಮ್ಮ ಆಹಾರದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
2. ನಿಮ್ಮ ನೆಚ್ಚಿನ ಪಾಕವಿಧಾನಗಳಿಗೆ ತುಪ್ಪವನ್ನು ಸೇರಿಸಿ, ಅದರ ವಿಶಿಷ್ಟ ಗುಣಲಕ್ಷಣಗಳು ಮತ್ತು ರುಚಿಯನ್ನು ಹೆಚ್ಚಿಸಿ. ನಿಮಗೆ ಪ್ರಿಯವಾದ ಆಹಾರಕ್ಕೆ ತುಪ್ಪವನ್ನು ಸೇರಿಸಿ, ಸವಿಯಿರಿ.
3. ನಿಮ್ಮ ಚಹಾ ಅಥವಾ ಕಾಫಿಗೆ ಒಂದು ಟೀ ಸ್ಪೂನ್ ತುಪ್ಪವನ್ನು ಸೇರಿಸುವ ಮೂಲಕ ಬಿಸಿ ಬಿಸಿ ಮಾಡಿಕೊಂಡು ಕುಡಿಯಿರಿ. ಇದು ನಿಮಗೆ ಕೇಳಲು ವಿಚಿತ್ರವಾದರೂ ಸತ್ಯ. ಇದು ನಿಮ್ಮ ಪಾನೀಯದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಜಾಸ್ತಿ ಸೇರಿಸಬೇಡಿ.
4. ನಿಮ್ಮ ಸಿಹಿ ತಿಂಡಿಗಳ ರುಚಿಯನ್ನು ಮತ್ತಷ್ಟು ಹೆಚ್ಚಿಸಲು, ನೀವು ಮಾಡುವ ಸಿಹಿ ತಿಂಡಿಗಳಿಗೆ ತುಪ್ಪವನ್ನು ಬಳಸಿ. ಉದಾಹರಣೆಗೆ ಕ್ಯಾರೆಟ್ ಹಲ್ವಾ. ಹೀಗೆ ನಿಮಗೆ ಇಷ್ಟವಾಗುವ ತಿಂಡಿಗೆ ತುಪ್ಪವನ್ನು ಸೇರಿಸಿಕೊಳ್ಳಬಹುದು.
ನಿಮ್ಮ ಮಾನ್ಸೂನ್ ಆಹಾರದಲ್ಲಿ ರುಚಿಕರವಾದ ಕೆನೆ ತುಪ್ಪವನ್ನು ಸೇರಿಸಿ ಆರೋಗ್ಯಕರ ಮತ್ತು ಸಂತೋಷದ ಮಳೆಗಾಲವನ್ನು ಕಳೆಯಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:20 pm, Mon, 10 July 23