ನಿದ್ರೆಯಲ್ಲಿ ಹಲ್ಲು ಕಡಿಯುವ ಅಭ್ಯಾಸವಿದೆಯೇ? ಬೆಳಗ್ಗೆ ಈ ಲಕ್ಷಣಗಳು ಕಂಡರೆ ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ!

ನಿದ್ರೆಯಲ್ಲಿ ಹಲ್ಲು ಕಡಿಯುವುದು ಅಥವಾ ಬಿಗಿಯಾಗಿ ಕಚ್ಚುವುದನ್ನು ಬ್ರಕ್ಸಿಜಂ ಎನ್ನುತ್ತಾರೆ. ಒತ್ತಡ, ಆತಂಕ, ಸ್ಲೀಪ್ ಅಪ್ನಿಯಾ ಸೇರಿದಂತೆ ಹಲವು ಅಂಶಗಳು ಇದಕ್ಕೆ ಸಂಬಂಧಿಸಿರಬಹುದು. ಬೆಳಗ್ಗೆ ದವಡೆ ನೋವು, ತಲೆನೋವು, ಹಲ್ಲುಗಳಲ್ಲಿ ಸೆನ್ಸಿಟಿವಿಟಿ ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ. ಅದರ ಜೊತೆಗೆ ರೀತಿ ಆಗುವುದಕ್ಕೆ ಕಾರಣವೇನು, ಇದನ್ನು ತಪ್ಪಿಸಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆಯಲ್ಲಿ ಹಲ್ಲು ಕಡಿಯುವ ಅಭ್ಯಾಸವಿದೆಯೇ? ಬೆಳಗ್ಗೆ ಈ ಲಕ್ಷಣಗಳು ಕಂಡರೆ ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ!
Sleep Bruxism
Image Credit source: Getty Images

Updated on: Sep 23, 2026 | 8:37 PM

ನಿದ್ರೆಯಲ್ಲಿ ಹಲ್ಲುಗಳನ್ನು ಬಿಗಿಯುವುದು, ಕಡಿಯುವುದು ಮಾಡುವ ಅಭ್ಯಾಸ ಹಲವರಿಗಿರುತ್ತದೆ. ಇದು ಪಕ್ಕದಲ್ಲಿ ಮಲಗಿರುವ ಕುಟುಂಬ ಸದಸ್ಯರು ಅಥವಾ ಸಂಗಾತಿ ಗಮನಿಸಿದ ನಂತರವೇ ಈ ಬಗ್ಗೆ ತಿಳಿಯಬಹುದು. ವೈದ್ಯಕೀಯವಾಗಿ ಇದನ್ನು ಬ್ರಕ್ಸಿಜಂ (Bruxism) ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಕಾಣಿಸಿಕೊಳ್ಳುವ ಸಣ್ಣ ಪ್ರಮಾಣದ ಹಲ್ಲು ಕಡಿಯುವಿಕೆ ದೊಡ್ಡ ಸಮಸ್ಯೆಯಾಗದಿರಬಹುದು. ಆದರೆ ಪದೇಪದೇ ಮತ್ತು ಹೆಚ್ಚಿನ ಬಲದಿಂದ ಹಲ್ಲುಗಳನ್ನು ಕಚ್ಚುತ್ತಿದ್ದರೆ, ಹಲ್ಲುಗಳು, ದವಡೆಯ ಸ್ನಾಯುಗಳು ಮತ್ತು ದವಡೆಯ ಜಾಯಿಂಟ್ ಮೇಲೆ ಒತ್ತಡ ಉಂಟಾಗಬಹುದು. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ಈ ರೀತಿ ಮಾಡುವುದನ್ನು ತಪ್ಪಿಸಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆಯಲ್ಲಿ ಹಲ್ಲು ಕಡಿಯಲು ಕಾರಣಗಳೇನು?

ಒತ್ತಡ ಮತ್ತು ಆತಂಕ ಬ್ರಕ್ಸಿಜಂಗೆ ಸಂಬಂಧಿಸಿದ ಪ್ರಮುಖ ಅಂಶಗಳಲ್ಲಿ ಸೇರಿವೆ. ಇದರ ಜೊತೆಗೆ ಗೊರಕೆ, ಸ್ಲೀಪ್ ಅಪ್ನಿಯಾ ಸೇರಿದಂತೆ ಕೆಲವು ನಿದ್ರಾ ಸಮಸ್ಯೆಗಳು ಕೂಡ ನಿದ್ರೆಯಲ್ಲಿನ ಹಲ್ಲು ಕಡಿಯುವಿಕೆಗೆ ಸಂಬಂಧಿಸಿರಬಹುದು. ಕೆಲವು ಔಷಧಿಗಳು, ಹೆಚ್ಚು ಕೆಫೀನ್ ಸೇವನೆ ಮತ್ತು ಧೂಮಪಾನದಂತಹ ಅಭ್ಯಾಸಗಳು ಕೆಲವು ವ್ಯಕ್ತಿಗಳಲ್ಲಿ ಬ್ರಕ್ಸಿಜಂಗೆ ಪ್ರಚೋದಕವಾಗಬಹುದು. ಆದರೆ ಯಾವುದಾದರೂ ಔಷಧಿಯೇ ಕಾರಣ ಎಂದು ಅನುಮಾನ ಬಂದರೆ, ವೈದ್ಯರ ಸಲಹೆಯಿಲ್ಲದೆ ಔಷಧಿಯನ್ನು ನಿಲ್ಲಿಸಬಾರದು.

ಇದನ್ನೂ ಓದಿ: ರಾತ್ರಿ 2ರವರೆಗೆ ಫೋನ್, ಬೆಳಗ್ಗೆ 7ಕ್ಕೆ ಅಲಾರಂ! ನಾವು ಸ್ಲೀಪ್ ಕ್ರೈಸಿಸ್‌ನತ್ತ ಸಾಗುತ್ತಿದ್ದೇವೆಯೇ ತಿಳಿದುಕೊಳ್ಳಿ

ಬೆಳಗ್ಗೆ ಈ ಲಕ್ಷಣಗಳು ಕಂಡರೆ ನಿರ್ಲಕ್ಷ್ಯ ಮಾಡಬೇಡಿ:

ನಿದ್ರೆಯಲ್ಲಿ ಹಲ್ಲು ಕಡಿಯುವವರಿಗೆ ಬೆಳಗ್ಗೆ ಎದ್ದಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು.

  • ದವಡೆಯ ಸ್ನಾಯುಗಳಲ್ಲಿ ನೋವು ಅಥವಾ ಬಿಗಿತ
  • ಬೆಳಗ್ಗೆ ತಲೆನೋವು
  • ಹಲ್ಲುಗಳಲ್ಲಿ ನೋವು ಅಥವಾ ಸೆನ್ಸಿಟಿವಿಟಿ
  • ಬಾಯಿ ತೆರೆದು ಮುಚ್ಚುವಾಗ ಕಷ್ಟವಾಗುವುದು
  • ದವಡೆಯ ಜಾಯಿಂಟ್ ಸುತ್ತ ನೋವು ಅಥವಾ ಅಸ್ವಸ್ಥತೆ
  • ನಿದ್ರೆಯಲ್ಲಿ ಹಲ್ಲು ಕಡಿಯುವ ಶಬ್ದವನ್ನು ಕುಟುಂಬ ಸದಸ್ಯರು ಗಮನಿಸುವುದು

ಹಲ್ಲುಗಳಿಗೂ ಹಾನಿಯಾಗಬಹುದು:

ದೀರ್ಘಕಾಲ ಮತ್ತು ತೀವ್ರವಾಗಿ ಹಲ್ಲು ಕಡಿಯುವುದರಿಂದ ಹಲ್ಲುಗಳ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಇದರಿಂದ ಹಲ್ಲುಗಳು ಸವೆಯುವುದು, ಹಲ್ಲಿನ ಮೇಲ್ಮೈ ಹಾನಿಯಾಗುವುದು, ಬಿರುಕುಗಳು ಉಂಟಾಗುವುದು ಅಥವಾ ಹಲ್ಲು ಮುರಿಯುವ ಅಪಾಯ ಹೆಚ್ಚಾಗಬಹುದು. ಕೆಲವರಲ್ಲಿ ದವಡೆಯ ಸ್ನಾಯುಗಳಲ್ಲಿ ನೋವು, ಆಯಾಸ ಅಥವಾ ದವಡೆಯ ಜಾಯಿಂಟ್‌ನಲ್ಲಿ ಒಂದು ರೀತಿಯ ಅನುಭವ ಕಾಣಿಸಿಕೊಳ್ಳಬಹುದು.

ಬ್ರಕ್ಸಿಜಂ ಕಡಿಮೆ ಮಾಡಲು ಏನು ಮಾಡಬೇಕು?

ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ಅಗತ್ಯವಿರುವುದಿಲ್ಲ. ಸಮಸ್ಯೆ ಸೌಮ್ಯವಾಗಿದ್ದರೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು ಸಹಾಯ ಮಾಡಬಹುದು. ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಎದ್ದೇಳುವುದು, ಸಾಕಷ್ಟು ನಿದ್ರೆ ಪಡೆಯುವುದು ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಉಪಯುಕ್ತವಾಗಬಹುದು. ಹಲ್ಲುಗಳಿಗೆ ಹಾನಿಯಾಗುವ ಅಪಾಯವಿದ್ದರೆ ದಂತವೈದ್ಯರು ರಾತ್ರಿ ಬಳಸುವ ಮೌತ್‌ಗಾರ್ಡ್ (Mouth Guard) ಅನ್ನು ಸೂಚಿಸಬಹುದು. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮೌತ್‌ಗಾರ್ಡ್ ಅನ್ನು ಸ್ವತಃ ಆಯ್ಕೆ ಮಾಡಿಕೊಳ್ಳುವ ಬದಲು ದಂತವೈದ್ಯರ ಸಲಹೆ ಪಡೆಯುವುದು ಉತ್ತಮ.

ನಿದ್ರೆಯಲ್ಲಿ ಪದೇಪದೇ ಹಲ್ಲು ಕಡಿಯುತ್ತಿರುವುದು ಕಂಡುಬಂದರೆ ಅದನ್ನು ಕೇವಲ ಸಾಮಾನ್ಯ ಎಂದು ನಿರ್ಲಕ್ಷಿಸಬೇಡಿ. ಹಲ್ಲಿನ ನೋವು, ಸೆನ್ಸಿಟಿವಿಟಿ, ದವಡೆಯ ನಿರಂತರ ನೋವು ಅಥವಾ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ದಂತವೈದ್ಯರು ಅಥವಾ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಸೂಚನೆ: ಈ ಮಾಹಿತಿಯು ಸಾಮಾನ್ಯ ಆರೋಗ್ಯ ಅರಿವಿಗಾಗಿ ಮಾತ್ರ. ನಿರಂತರ ಅಥವಾ ತೀವ್ರ ಲಕ್ಷಣಗಳಿದ್ದರೆ ವೈದ್ಯರು ಅಥವಾ ದಂತವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Getty Images

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us