AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗಿಗಳ ಸುರಕ್ಷತೆಯೇ ಮೊದಲ ಆದ್ಯತೆ, ನಕಲಿಯಾಗಿರುವ ಬ್ಯಾಚ್​ನ ಔಷಧಗಳು ವಾಪಸ್: ಫೈಜರ್ ಇಂಡಿಯಾ ಘೋಷಣೆ

ಕರ್ನಾಟಕದ ನಕಲಿ ಔಷಧ ಪ್ರಕರಣದ ತನಿಖೆಗೆ ಔಷಧ ತಯಾರಿಕಾ ಕಂಪನಿ ಫೈಜರ್ ಇಂಡಿಯಾ ಪ್ರತಿಕ್ರಿಯಿಸಿದ್ದು, ರೋಗಿಗಳ ಸುರಕ್ಷತೆ ಮತ್ತು ಔಷಧಗಳ ಗುಣಮಟ್ಟವೇ ಮೊದಲ ಆದ್ಯತೆ ಎಂದು ತಿಳಿಸಿದೆ. ಅಧಿಕಾರಿಗಳೊಂದಿಗೆ ಕಳೆದ ಒಂದು ತಿಂಗಳಿಂದ ತನಿಖೆಗೆ ಸಹಕರಿಸುತ್ತಿದ್ದು, ನಕಲಿ ಔಷಧ ಗುರುತಿಸುವಿಕೆ ಸೇರಿದಂತೆ ಹಲವು ಕ್ರಮ ಕೈಗೊಂಡಿರುವುದಾಗಿ ಕಂಪನಿ ಹೇಳಿದೆ.

ರೋಗಿಗಳ ಸುರಕ್ಷತೆಯೇ ಮೊದಲ ಆದ್ಯತೆ, ನಕಲಿಯಾಗಿರುವ ಬ್ಯಾಚ್​ನ ಔಷಧಗಳು ವಾಪಸ್: ಫೈಜರ್ ಇಂಡಿಯಾ ಘೋಷಣೆ
ಫೈಜರ್ ಇಂಡಿಯಾ (ಸಾಂದರ್ಭಿಕ ಚಿತ್ರ)Image Credit source: Pfizer India
ಗಣಪತಿ ಶರ್ಮಾ
|

Updated on: Sep 23, 2026 | 1:08 PM

Share

ಮುಖ್ಯಾಂಶಗಳು

  • ರೋಗಿಗಳ ಸುರಕ್ಷತೆಯೇ ಮೊದಲ ಆದ್ಯತೆ ಎಂದ ಫೈಜರ್ ಇಂಡಿಯಾ
  • ಅಧಿಕಾರಿಗಳ ತನಿಖೆಗೆ ನಿರಂತರ ಸಹಕಾರ ನೀಡುತ್ತಿರುವ ಕಂಪನಿ
  • ನಕಲಿ ಔಷಧ ಪೂರೈಕೆಯಾಗಿರುವ ಬ್ಯಾಚ್​ನ ಔಷಧ ವಾಪಸ್ ಪಡೆಯುವುದಾಗಿ ಘೋಷಣೆ

ನವದೆಹಲಿ, ಸೆಪ್ಟೆಂಬರ್ 23: ನಕಲಿ ಔಷಧಿಗಳ ಮಾರಾಟ ಹಾಗೂ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (ಎಫ್​ಡಿಎ) ಕೈಗೊಂಡಿರುವ ಕ್ರಮದ ಬೆನ್ನಲ್ಲೇ ಫೈಜರ್ ಇಂಡಿಯಾ ಪ್ರತಿಕ್ರಿಯಿಸಿದೆ. ರೋಗಿಗಳ ಸುರಕ್ಷತೆ ಮತ್ತು ಔಷಧಗಳ ಗುಣಮಟ್ಟವೇ ಅತ್ಯುನ್ನತ ಆದ್ಯತೆ ಎಂದು ಕಂಪನಿ ಹೇಳಿದ್ದು, ತನಿಖೆಗೆ ಅಧಿಕಾರಿಗಳೊಂದಿಗೆ ಕಳೆದ ಒಂದು ತಿಂಗಳಿಂದ ಸಹಕರಿಸುತ್ತಿರುವುದಾಗಿ ತಿಳಿಸಿದೆ. ಈ ಬಗ್ಗೆ ಫೈಜರ್ ಇಂಡಿಯಾ ಮಂಗಳವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಕರಣ ಗಮನಕ್ಕೆ ಬಂದ ಬಳಿಕ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದು ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.

ಗೊಂದಲ ನಿವಾರಣೆಗೆ ನಕಲಿ ಔಷಧಗಳ ಬ್ಯಾಚ್ ಮೆಡಿಸಿನ್ ಹಿಂಪಡೆದ ಫೈಜರ್

ನಕಲಿ ಔಷಧಿಗಳಿಂದ ಗೊಂದಲ ಉಂಟಾಗದಂತೆ, ನಕಲಿ ಬ್ಯಾಚ್ ಸಂಖ್ಯೆಯನ್ನು ನಕಲು ಮಾಡಿರುವ ಫೈಜರ್ ಔಷಧಗಳ ಬ್ಯಾಚ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಕ್ರಮ ಕೈಗೊಂಡಿರುವುದಾಗಿ ಕಂಪನಿ ಹೇಳಿದೆ. ಅಲ್ಲದೆ, ಮೂಲ ಔಷಧಿ ಮತ್ತು ನಕಲಿ ಔಷಧಿಯನ್ನು ಗುರುತಿಸಲು ತನಿಖಾ ಸಂಸ್ಥೆಗಳಿಗೆ ಸಹಾಯ ಮಾಡಿರುವುದಾಗಿ ಹಾಗೂ ಸಂಬಂಧಿತ ಬ್ಯಾಚ್‌ಗಳಿಗೆ ಸಂಬಂಧಿಸಿದ ತಾಂತ್ರಿಕ ಮತ್ತು ಇತರ ಅಗತ್ಯ ಮಾಹಿತಿಯನ್ನು ಅಧಿಕಾರಿಗಳಿಗೆ ಒದಗಿಸಿರುವುದಾಗಿ ಫೈಜರ್ ಇಂಡಿಯಾ ತಿಳಿಸಿದೆ.

ತನಿಖೆಗೆ ಪೂರ್ಣ ಸಹಕಾರ ನೀಡುತ್ತೇವೆ: ಫೈಜರ್ ಇಂಡಿಯಾ

ತನಿಖೆಯಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ. ಅಧಿಕಾರಿಗಳ ಜತೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿರುವ ಕಂಪನಿ, ರೋಗಿಗಳ ರಕ್ಷಣೆ, ಸಾರ್ವಜನಿಕ ಆರೋಗ್ಯದ ಸುರಕ್ಷತೆ ಹಾಗೂ ಆರೋಗ್ಯ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕಾಪಾಡುವುದು ಪ್ರಮುಖ ಉದ್ದೇಶ ಎಂದು ತಿಳಿಸಿದೆ.

ಕರ್ನಾಟಕ ಎಫ್​ಡಿಎಯಿಂದ 16 ಲೈಸೆನ್ಸ್ ರದ್ದು

ಕರ್ನಾಟಕದಲ್ಲಿ ನಕಲಿ ಔಷಧಿಗಳ ವಿತರಣೆ ಮತ್ತು ಮಾರಾಟದ ಆರೋಪದ ಹಿನ್ನೆಲೆಯಲ್ಲಿ ಎಫ್​​ಡಿಎ ಇತ್ತೀಚೆಗೆ 16 ಔಷಧ ಮಾರಾಟಗಾರರು ಹಾಗೂ ಸಗಟು ವ್ಯಾಪಾರಿಗಳ ಲೈಸೆನ್ಸ್‌ಗಳನ್ನು ರದ್ದುಪಡಿಸಿದೆ. ಮತ್ತಷ್ಟು 8 ಲೈಸೆನ್ಸ್‌ಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದೆ.

ಇದನ್ನೂ ಓದಿ: ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ಬ್ರೇಕ್: ತನಿಖೆಗೆ ಸಹಕರಿಸದ ಹಿನ್ನೆಲೆ ಕಠಿಣ ಕ್ರಮ

ಆಗಸ್ಟ್ 18ರಂದು ಎಫ್​ಡಿಎಯ ಔಷಧ ಜಾರಿ ವಿಭಾಗದ ಅಧಿಕಾರಿಗಳು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪದ ಫಾರ್ಮ್‌ಹೌಸ್‌ನಲ್ಲಿ ದಾಳಿ ನಡೆಸಿದ್ದರು. ಅಲ್ಲಿ ಲೈಸೆನ್ಸ್ ಇಲ್ಲದೆ ಔಷಧಗಳನ್ನು ಮರುಪ್ಯಾಕಿಂಗ್ ಮತ್ತು ಮರುಲೇಬಲಿಂಗ್ ಮಾಡುತ್ತಿದ್ದ ಘಟಕ ಪತ್ತೆಯಾಗಿತ್ತು. ದಾಳಿ ವೇಳೆ ಸುಮಾರು ₹5.05 ಕೋಟಿ ಮೌಲ್ಯದ ನಕಲಿ ಔಷಧಗಳು, ಯಂತ್ರೋಪಕರಣಗಳು ಮತ್ತು ಮುದ್ರಣ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

LIVE TV

ಎಫ್​ಡಿಎ ಪ್ರಾಥಮಿಕ ತನಿಖೆಯ ಪ್ರಕಾರ, ನೆರೆಯ ರಾಜ್ಯಗಳಿಂದ ಕಡಿಮೆ ಬೆಲೆಯ ಔಷಧಗಳನ್ನು ಖರೀದಿಸಿ, ಅವುಗಳನ್ನು ಹೊಸ ಬಾಟಲಿಗಳಲ್ಲಿ ಮರುಪ್ಯಾಕ್ ಮಾಡಿ, ಬಹುರಾಷ್ಟ್ರೀಯ ಕಂಪನಿಗಳ ದುಬಾರಿ ಜೀವ ರಕ್ಷಕ ಔಷಧಗಳ ಹೆಸರಿನಲ್ಲಿ ಮರುಲೇಬಲ್ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಇವುಗಳಲ್ಲಿ ಫೈಜರ್ ಬ್ರ್ಯಾಂಡ್ ಹೆಸರನ್ನು ಹೊಂದಿರುವಂತೆ ತೋರಿಸಲಾದ ಉತ್ಪನ್ನಗಳೂ ಇದ್ದವು ಎಂದು ಎಫ್​ಡಿಎ ತಿಳಿಸಿತ್ತು. ಈ ಸಂಬಂಧ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಆ್ಯಕ್ಟ್, 1940ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us