
ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ (ಬಿಪಿ) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಹಿಂದೆ ಈ ಸಮಸ್ಯೆ ಹಿರಿಯರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಈಗ ಯುವಕರಲ್ಲೂ ಇದು ಸಾಮಾನ್ಯವಾಗಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆ, ಹೆಚ್ಚು ಉಪ್ಪಿನ ಸೇವನೆ ಹಾಗೂ ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆಗಳು ಬಿಪಿ (Blood Pressure) ಹೆಚ್ಚಾಗಲು ಪ್ರಮುಖ ಕಾರಣಗಳೆಂದು ವೈದ್ಯರು ಹೇಳುತ್ತಾರೆ. ಅದರಲ್ಲಿಯೂ ಬಿಪಿ ದೀರ್ಘಕಾಲದ ವರೆಗೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದ್ದರೆ ಹೃದಯ, ಮೂತ್ರಪಿಂಡ ಮತ್ತು ಮೆದುಳಿಗೆ ಸಂಬಂಧಿಸಿದ ಹಲವು ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಇದನ್ನು ನಿಯಂತ್ರಣದಲ್ಲಿ ಇಡುವುದು ಅತ್ಯಂತ ಮುಖ್ಯವಾಗಿದೆ. ಜೀವನಶೈಲಿಯಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ಅಳವಡಿಸಿಕೊಂಡರೆ ಬಿಪಿಯನ್ನು ಸಮತೋಲನದಲ್ಲಿ ಇಡಲು ಸಹಾಯವಾಗುತ್ತದೆ.
ರಾಜೀವ್ ಗಾಂಧಿ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ಬಿಪಿಯನ್ನು ನಿಯಂತ್ರಣದಲ್ಲಿಡಲು ದೈನಂದಿನ ಜೀವನದಲ್ಲಿ ಕೆಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಮೊದಲು ಸಮತೋಲನಯುತ ಮತ್ತು ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ತಾಜಾ ಹಣ್ಣು, ತರಕಾರಿಗಳ ಸೇವನೆ ಮಾಡುವುದು ಆರೋಗ್ಯಕರವಾಗಿದ್ದು ಇವುಗಳ ಜೊತೆಗೆ ನಿಯಮಿತ ದೈಹಿಕ ಚಟುವಟಿಕೆ ಕೂಡ ಬಿಪಿಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಪ್ರತಿದಿನ ಕನಿಷ್ಠ 30 ನಿಮಿಷಗಳಷ್ಟು ನಡೆಯುವುದು, ಲಘು ವ್ಯಾಯಾಮ ಅಥವಾ ಯೋಗಾಭ್ಯಾಸ ಮಾಡುವುದು ಆರೋಗ್ಯಕ್ಕೆ ಉಪಯುಕ್ತವಾಗುತ್ತದೆ.
ಇದನ್ನೂ ಓದಿ: ಸಣ್ಣ ವಯಸ್ಸಿನಲ್ಲಿ ಬಿಪಿ ಬರುವುದಕ್ಕೆ ನಿಮ್ಮ ಈ ಅಭ್ಯಾಸಗಳೇ ಕಾರಣ! ಇಂದೇ ಬದಲಾಯಿಸಿಕೊಳ್ಳಿ
ಇದೆಲ್ಲದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಹೆಚ್ಚಿನ ಒತ್ತಡ ಬಿಪಿ ಏರಿಕೆಗೆ ಕಾರಣವಾಗಬಹುದು. ಅಷ್ಟೇಅಲ್ಲ, ಒಳ್ಳೆಯ ನಿದ್ರೆ ಕೂಡ ಅವಶ್ಯಕ, ಏಕೆಂದರೆ ನಿದ್ರೆಯ ಕೊರತೆಯಿಂದ ದೇಹದ ಸಮತೋಲನ ಕೆಡಬಹುದು. ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮತ್ತು ದೇಹವನ್ನು ಸದಾ ಚುರುಕಾಗಿಡುವುದು ಕೂಡ ಬಿಪಿ ನಿಯಂತ್ರಣಕ್ಕೆ ಸಹಕಾರಿ. ಈ ಅಭ್ಯಾಸಗಳನ್ನು ನಿಯಮಿತವಾಗಿ ಅನುಸರಿಸಿದರೆ ಬಿಪಿಯನ್ನು ಸಮತೋಲನದಲ್ಲಿಡಲು ಸಾಧ್ಯವಾಗುತ್ತದೆ.
ಬಿಪಿ ನಿಯಂತ್ರಣಕ್ಕೆ ಕೆಲವು ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವುದೂ ಅಗತ್ಯ. ಹೆಚ್ಚು ಉಪ್ಪು ಹಾಗೂ ಪ್ರೊಸೆಸ್ಡ್ ಆಹಾರ ಸೇವನೆ ಬಿಪಿ ಹೆಚ್ಚಿಸಲು ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ಕಡಿಮೆ ಮಾಡುವುದು ಉತ್ತಮ. ಧೂಮಪಾನ ಮತ್ತು ಮದ್ಯಪಾನ ಕೂಡ ಬ್ಲಡ್ ಪ್ರೆಶರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದು ಹಾಗೂ ದೈಹಿಕ ಚಟುವಟಿಕೆಗಳ ಕೊರತೆಯೂ ಅಪಾಯವನ್ನು ಹೆಚ್ಚಿಸಬಹುದು. ರಾತ್ರಿ ತಡವಾಗಿ ಮಲಗುವುದು ಮತ್ತು ಸರಿಯಾಗಿ ನಿದ್ರೆ ಮಾಡದಿರುವುದು ಕೂಡ ಬಿಪಿ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಈ ರೀತಿಯ ಅಭ್ಯಾಸಗಳಿಂದ ದೂರವಿರುವುದು ಬಹಳ ಮುಖ್ಯ. ಇದರ ಜೊತೆಗೆ ಸಮತೋಲನ ಆಹಾರ ಮತ್ತು ಸರಿಯಾದ ದಿನಚರಿಯನ್ನು ಪಾಲಿಸಬೇಕಾಗುತ್ತದೆ ಯಾರಿಗಾದರೂ ಈಗಾಗಲೇ ಬಿಪಿ ಸಮಸ್ಯೆ ಇದ್ದರೆ, ವೈದ್ಯರ ಸಲಹೆಯಂತೆ ಔಷಧಿಗಳನ್ನು ಸೇವಿಸುವುದು ಅವಶ್ಯಕ. ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಚಿಂತನೆಯೂ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ