ತಡವಾಗಿ ಉಪಾಹಾರ ಸೇವಿಸಿದ್ರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತೆ; ಅಧ್ಯಯನದಿಂದ ಬಹಿರಂಗ
ಬೆಳಗ್ಗೆ ತಿಂಡಿ ತಿನ್ನುವ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾದ್ರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತಿದೆ ಎಂದರ್ಥ. ಉಪಾಹಾರ ಸೇವನೆಯಲ್ಲಿ ಪ್ರತಿ ಒಂದು ಗಂಟೆಯ ವಿಳಂಬವು ಸಾವಿನ ಅಪಾಯವು 8-11% ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ತಡವಾಗಿ ಉಪಾಹಾರ ಸೇವನೆಯೂ ಸಾವಿಗೆ ನೇರ ಕಾರಣವಾಗಿಲ್ಲದಿದ್ದರೂ ಇದರಿಂದ ಆರೋಗ್ಯ ಸಮಸ್ಯೆಗಳು ಬರುವುದು ಖಚಿತ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಬೆಳಗ್ಗಿನ ಉಪಾಹಾರವನ್ನು (Breakfast) ಸರಿಯಾದ ಸಮಯಕ್ಕೆ ಸೇವಿಸಬೇಕು. ಹೌದು, ಹೊಟ್ಟೆ ತುಂಬಾ ತಿಂಡಿ ತಿಂದರೆ ಆ ದಿನವು ಉಲ್ಲಾಸಮಯವಾಗಿರಲು ಸಾಧ್ಯ. ಆದರೆ ಕೆಲವರು ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಅಥವಾ ಸಮಯ ಇಲ್ಲ ಎನ್ನುವ ಕಾರಣಕ್ಕೆ ತಿಂಡಿ ತಿನ್ನುವುದೇ ಇಲ್ಲ. ಹೆಚ್ಚಿನವರಿಗೆ ಇಂತಹ ಕೆಟ್ಟ ಅಭ್ಯಾಸವಿದೆ. ಹಾರ್ವರ್ಡ್ ವೈದ್ಯಕೀಯ ಶಾಲೆಯ ತಜ್ಞರು (Harvard Medical School Experts) ನಡೆಸಿದ ಅಧ್ಯಯನದಿಂದ ಆಘಾತಕಾರಿ ಅಂಶವು ಬೆಳಕಿಗೆ ಬಂದಿದೆ. ಬೆಳಗ್ಗೆ ತಡವಾಗಿ ಉಪಾಹಾರ ಸೇವಿಸುವುದರಿಂದ ಅಕಾಲಿಕ ಮರಣದ ಅಪಾಯವು ಹೆಚ್ಚಿದೆ ಎಂದು ತಿಳಿದು ಬಂದಿದೆ.
ಅಧ್ಯಯನ ನಡೆಸಿದ ತಜ್ಞರ ತಂಡ
ಈ ಅಧ್ಯಯನಕ್ಕಾಗಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಮತ್ತು ನ್ಯೂಕ್ಯಾಸಲ್‌ನಲ್ಲಿ ವಾಸಿಸುವ 3000 ವಯಸ್ಕರ ಡೇಟಾವನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಈ ಅಧ್ಯಯನದಲ್ಲಿ ಭಾಗವಹಿಸಿದವರು 1983 ರಿಂದ 2017 ರವರೆಗೆ 42 ರಿಂದ 94 ವರ್ಷ ವಯಸ್ಸಿನವರಾಗಿದ್ದರು. ತಜ್ಞರು ಅವರ ಆರೋಗ್ಯ, ಆಹಾರ ಸೇವಿಸುವ ಮಾದರಿಗಳು ಮತ್ತು ಜೀವನಶೈಲಿಯ ಕುರಿತು ಸಮೀಕ್ಷೆಗಳನ್ನು ನಡೆಸಿದ್ದಾರೆ. ಎರಡು ದಶಕಗಳ ದತ್ತಾಂಶದೊಂದಿಗೆ, ಈ ಅಧ್ಯಯನದಲ್ಲಿ ಭಾಗವಹಿಸಿದವರು ಮೊದಲ ಹಾಗೂ ಕೊನೆಯ ಊಟವನ್ನು ವಿಳಂಬಗೊಳಿಸುತ್ತಾರೆ ಎಂದು ಸಂಶೋಧಕರು ಗಮನಿಸಿದ್ದಾರೆ. ಈ ಬದಲಾವಣೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಕಂಡುಕೊಂಡಿದ್ದಾರೆ.
ಸಮಯದ ವ್ಯತ್ಯಾಸ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಇತ್ತೀಚಿನ ದೀರ್ಘಕಾಲೀನ ಅಧ್ಯಯನದ ಪ್ರಕಾರ, ಉಪಾಹಾರದ ಸಮಯವು ವಯಸ್ಸಾದವರಲ್ಲಿ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಸಂಶೋಧನೆಗಳಿಂದ ತಿಳಿದು ಬಂದಿದೆ. ನಾವು ಏನು ತಿನ್ನುತ್ತೇವೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು. ಏನು ತಿನ್ನುತ್ತೀರಿ ಎನ್ನುವುದರ ಜೊತೆಗೆ ಯಾವ ಸಮಯಕ್ಕೆ ಉಪಾಹಾರ ಸೇವನೆ ಮಾಡ್ತೀರಾ ಎನ್ನುವುದು ಬಹಳ ಮುಖ್ಯ ಎಂದು ಸಂಶೋಧಕರು ಒತ್ತಿಹೇಳಿದ್ದಾರೆ. ಬೆಳಗ್ಗೆ ತಡವಾಗಿ ತಿಂಡಿ ಸೇವನೆಯೂ ಮಾಡುವ ಅಭ್ಯಾಸವು ಜೀರ್ಣಕ್ರಿಯೆ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿಸಿದ್ದಾರೆ.
ತಡವಾಗಿ ಉಪಾಹಾರ ಸೇವಿಸಿದ್ರೆ ಪ್ರಾಣಕ್ಕೆ ಕುತ್ತು ಬರುತ್ತಾ?
ತಡವಾದ ಉಪಾಹಾರದ ಸಮಯವು ಸಾವಿನ ಅಪಾಯದೊಂದಿಗೆ ಸಂಬಂಧ ಹೊಂದಿರಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಪ್ರತಿ ಒಂದು ಗಂಟೆಗಳ ಕಾಲ ಉಪಾಹಾರ ಸೇವನೆ ವಿಳಂಬ ಮಾಡಿದ್ರೆ ಸಾವಿನ ಅಪಾಯವು 8-11% ರಷ್ಟು ಹೆಚ್ಚಾಗುತ್ತದೆ. ತಡವಾಗಿ ತಿಂಡಿ ತಿನ್ನುವುದು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಆರೋಗ್ಯಕರ ಆಹಾರ ಸೇವನೆಯ ವಿಷಯದಲ್ಲಿ ಸಮಯವು ಬಹಳ ಮುಖ್ಯ ಎನ್ನುವುದು ಅಧ್ಯಯನದ ಫಲಿತಾಂಶಗಳು ಎತ್ತಿ ತೋರಿಸುತ್ತವೆ. ಈ ಅಭ್ಯಾಸವು ವಯಸ್ಸಾದವರಲ್ಲಿ ಆರಂಭಿಕ ಸಾವಿನ ಅಪಾಯಕ್ಕೂ ಸಂಬಂಧಿಸಿದೆ. ಹೀಗಾಗಿ ಬೆಳಗ್ಗಿನ ತಿಂಡಿ ಸೇವನೆಯಲ್ಲಿ ಸಮಯಪಾಲನೆ ಮತ್ತು ಆರಂಭಿಕ ಊಟವನ್ನು ಉತ್ತೇಜಿಸುವಲ್ಲಿ, ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗುವಲ್ಲಿ ಈ ಸಂಶೋಧನೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರಾತ್ರಿ ಏಳು ಗಂಟೆಯ ನಂತರ ನೀವು ಕೂಡ ಈ ಆಹಾರಗಳ ಸೇವನೆ ಮಾಡುತ್ತಿದ್ದರೆ ಈ ಸ್ಟೋರಿ ಮಿಸ್ ಮಾಡ್ದೆ ಓದಿ
ಪೌಷ್ಟಿಕಾಂಶ ತಜ್ಞ ಡಾ. ಹಸನ್ ದಶ್ತಿ ಈ ಬಗ್ಗೆ ಏನ್ ಹೇಳ್ತಾರೆ?
ಹಾರ್ವರ್ಡ್ ವೈದ್ಯಕೀಯ ಶಾಲೆಯ ಪೌಷ್ಟಿಕಾಂಶ ತಜ್ಞ ಡಾ. ಹಸನ್ ದಶ್ತಿ ಅವರು ವಿಶೇಷವಾಗಿ ಈ ಉಪಾಹಾರದ ಸಮಯವು ವಯಸ್ಸಾದವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಡವಾಗಿ ಉಪಾಹಾರ ಸೇವಿಸುವುದು ಕ್ಷೀಣಿಸುತ್ತಿರುವ ಆರೋಗ್ಯಕ್ಕೂ ಕಾರಣವಾಗುತ್ತದೆ. ಕಳಪೆ ನಿದ್ರೆಯ ಗುಣಮಟ್ಟ, ಆಯಾಸ ಅಥವಾ ಕಡಿಮೆ ಚಲನಶೀಲತೆ ಸೇರಿದಂತೆ ಬೆಳಿಗ್ಗೆ ಆಹಾರವನ್ನು ತಯಾರಿಸುವ ಸಾಮರ್ಥ್ಯವನ್ನು ವಿಳಂಬಗೊಳಿಸಬಹುದು ಎಂದು ಹೇಳಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 pm, Tue, 16 September 25








