ದೇಹ, ಮನಸ್ಸು ಆಕ್ಟಿವ್ ಆಗಿರಲು ಟೀ-ಕಾಫಿ ಬದಲು ಈ ಪಾನೀಯಗಳನ್ನು ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ
ಪ್ರತಿಯೊಬ್ಬರೂ ತಾವು ದಿನವಿಡೀ ಚೈತನ್ಯಶೀಲರಾಗಿರಲು, ಆಯಾಸಗೊಳ್ಳದೆ ಆಕ್ಟಿವ್ ಆಗಿರಲು ಬಯಸುತ್ತಾರೆ. ನೀವು ಕೂಡ ದಿನವಿಡೀ ಚುರುಕಾಗಿ ಕೆಲಸಗಳನ್ನು ಮಾಡಿಕೊಳ್ಳುತ್ತಾ, ಎಲ್ಲಿಯೂ ಆಯಾಸಗೊಳ್ಳದೆ ಇರಬೇಕೆಂದು ಬಯಸುತ್ತೀರಾ? ಹಾಗಿದ್ರೆ ಪ್ರತಿನಿತ್ಯ ಬೆಳಗ್ಗೆ ಟೀ-ಕಾಫಿ ಬದಲು ಈ ಒಂದಷ್ಟು ಪಾನೀಯಗಳನ್ನು ಸೇವನೆ ಮಾಡುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

ದಿನ ಚೆನ್ನಾಗಿ ಆರಂಭವಾದರೆ, ಇಡೀ ದಿನ ಸಂತೋಷದಾಯಕವಾಗಿ ಇರುತ್ತೆ ಎಂದು ಹೇಳುತ್ತಾರೆ. ಅದಕ್ಕಾಗಿಯೇ ಹೆಚ್ಚಿನವರು ದಿನವಿಡೀ ಚೈತನ್ಯಶೀಲರಾಗಿರಲು ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ, ಯೋಗ, ಧ್ಯಾನ ಮಾಡುವಂತಹದ್ದು, ಪುಸ್ತಕ ಓದುವಂತಹದ್ದು, ಆರೋಗ್ಯಕರ ಆಹಾರ ಸೇವನೆ ಮಾಡುವಂತಹದ್ದು ಮಾಡುತ್ತಿರುತ್ತಾರೆ. ಅದೇ ರೀತಿ ಆರೋಗ್ಯ ಚೆನ್ನಾಗಿರಲು, ದೇಹ ಮತ್ತು ಮನಸ್ಸು ದಿನಪೂರ್ತಿ ಆಕ್ಟಿವ್ ಆಗಿರಲು ಈ ಒಂದಷ್ಟು ಪಾನೀಯಗಳನ್ನು (Healthy Morning drinks) ಸೇವನೆ ಮಾಡಬೇಕಂತೆ. ಹೌದು ಬೆಳಗ್ಗೆ ಕಾಫಿ-ಟೀ ಕುಡಿಯುವ ಬದಲು ಈ ಆರೋಗ್ಯಕರ ಪಾನೀಯಗಳನ್ನು ಸೇವನೆ ಮಾಡುವುದರಿಂದ ಆಯಾಸ, ಆಲಸ್ಯ ಕ್ರಮೇಣ ದೂರವಾಗುತ್ತದೆಯಂತೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಸುಸ್ತು ಮತ್ತು ಆಲಸ್ಯವನ್ನು ದೂರ ಮಾಡಲು ನಿತ್ಯ ಈ ಪಾನೀಯಗಳನ್ನು ಸೇವಿಸಿ:
ನಿಂಬೆ ನೀರು: ಕಾಫಿ, ಟೀ ಬದಲು ಬೆಳಗ್ಗೆ ನಿಂಬೆ ನೀರನ್ನು ಕುಡಿಯುವುದು ತುಂಬಾನೇ ಒಳ್ಳೆಯದು. ಈ ಪಾನೀಯ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಹೊಂದಿದೆ. ಇದು ದೇಹಕ್ಕೆ ಜಲಸಂಚಯನವನ್ನು ಒದಗಿಸುವುದು ಮಾತ್ರವಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ನಿಂಬೆಯಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಉಲ್ಲಾಸಗೊಳಿಸುತ್ತದೆ. ಹಾಗಾಗಿ ಬೆಳಗ್ಗೆ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಕುಡಿಯಿರಿ.
ಶುಂಠಿ ಮತ್ತು ಜೇನುತುಪ್ಪದ ಪಾನೀಯ: ಶುಂಠಿ ತನ್ನ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೇನುತುಪ್ಪವು ನೈಸರ್ಗಿಕ ಸಿಹಿಕಾರಕವಾಗಿದೆ ಮತ್ತು ಶಕ್ತಿಯ ಉತ್ತಮ ಮೂಲವಾಗಿದೆ. ಹಾಗಾಗಿ ನೀವು ನಿತ್ಯ ಶುಂಠಿ-ಜೇನುತುಪ್ಪದ ಪಾನೀಯವನ್ನು ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಈ ಪಾನೀಯವನ್ನು ತಯಾರಿಸಲು ಒಂದು ಇಂಚಿನ ಶುಂಠಿಯನ್ನು ತುಂಡು ಮಾಡಿ, ನೀರಿನಲ್ಲಿ ಹಾಕಿ 5 ರಿಂದ 7 ನಿಮಿಷಗಳ ಕಾಲ ಕುದಿಸಿಕೊಳ್ಳಿ, ನಂತರ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ.
ಗ್ರೀನ್ ಟೀ: ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ, ಇದು ನಮ್ಮ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಗ್ರೀನ್ ಟೀ ತ್ವರಿತವಾಗಿ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಕಾಫಿ, ಟೀ ಬದಲು ಪ್ರತಿನಿತ್ಯ ಈ ಪಾನೀಯವನ್ನು ಸೇವನೆ ಮಾಡುವುದು ಉತ್ತಮ.
ಇದನ್ನೂ ಓದಿ: ನಾರ್ಮಲ್ ಟೀ ಬದಲು ಗುಲಾಬಿ ಚಹಾ ಕುಡಿಯಿರಿ, ಹಲವು ಪ್ರಯೋಜನಗಳನ್ನು ಪಡೆಯಿರಿ
ಜೀರಿಗೆ ನೀರು: ಜೀರಿಗೆ ನೀರು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಗ್ಯಾಸ್, ಆಮ್ಲೀಯತೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಬೆಳಿಗ್ಗೆ ಜೀರಿಗೆ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಮತ್ತು ಇದು ನಿಮ್ಮನ್ನು ದಿನವಿಡೀ ಚೈತನ್ಯಶೀಲರಾಗಿರುವಂತೆ ಮಾಡುತ್ತದೆ.
ತಾಜಾ ಹಣ್ಣಿನ ರಸ: ಆರೋಗ್ಯಕರವಾಗಿರಲು ಹಾಗೂ ದಿನಪೂರ್ತಿ ಆಕ್ಟಿವ್ ಆಗಿರಲು ನೀವು ಪ್ರನಿತ್ಯ ಬೆಳಗ್ಗೆ ಟೀ ಕಾಫಿ ಬದಲು ತಾಜಾ ಹಣ್ಣಿನ ರಸವನ್ನು ಕುಡಿಯಿರಿ. ಎಳನೀರು, ದಾಳಿಂಬೆ ಜ್ಯೂಸ್, ಕಲ್ಲಂಗಡಿ ಹಣ್ಣಿನ ರಸ ಹೀಗೆ ಆರೋಗ್ಯರ ಪಾನೀಯಗಳನ್ನು ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








