Rose Tea: ನಾರ್ಮಲ್ ಟೀ ಬದಲು ಗುಲಾಬಿ ಚಹಾ ಕುಡಿಯಿರಿ, ಹಲವು ಪ್ರಯೋಜನಗಳನ್ನು ಪಡೆಯಿರಿ
ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುವ ಗುಲಾಬಿಯನ್ನು ಸೌಂದರ್ಯ ವರ್ಧಕ ಉತ್ಪನ್ನಗಳು ಮಾತ್ರವಲ್ಲ ಇದರಿಂದ ಹಲವಾರು ಭಕ್ಷ್ಯಗಳನ್ನು ಸಹ ತಯಾರಿಸಲಾಗುತ್ತದೆ. ಗುಲ್ಕಂದ್, ರೋಸ್ ಸಿರಪ್ ಹೀಗೆ ಹಲವಾರು ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಅದೇ ರೀತಿ ಗುಲಾಬಿಯಿಂದ ಚಹಾವನ್ನು ತಯಾರಿಸಬಹುದು. ಪ್ರತಿನಿತ್ಯ ನಾರ್ಮಲ್ ಟೀ ಬದಲು ಈ ಗುಲಾಬಿ ಹೂವಿನ ಟೀ ಕುಡಿಯುವ ಮೂಲಕ ತೂಕ ಇಳಿಕೆಯಿಂದ ಹಿಡಿದು ಚರ್ಮದ ಹೊಳಪನ್ನು ಹೆಚ್ಚಿಸುವವರೆಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ.

ಸೌಂದರ್ಯ ಮತ್ತು ಪ್ರೀತಿಯ ಸಂಕೇತವಾಗಿರುವ ಗುಲಾಬಿ ಹೂವು (Rose) ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದಕ್ಕಾಗಿಯೇ ಗುಲಾಬಿ ದಳಗಳನ್ನು ವಿವಿಧ ಭಕ್ಷ್ಯಗಳು, ಸಿಹಿತಿಂಡಿಗಳು ಮತ್ತು ಶರಬತ್ತುಗಳನ್ನು ತಯಾರಿಸಲು ಹಾಗೂ ಸೌಂದರ್ಯ ವರ್ಧಕಗಳಲ್ಲಿ ಈ ಹೂವನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಗುಲಾಬಿ ಹೂವಿನಿಂದ ಚಹಾವನ್ನು (Rose Tea) ತಯಾರಿಸಬಹುದು. ಈ ಚಹಾ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ನಂತಹ ಪೋಷಕಾಂಶಗಳನ್ನು ಹೊಂದಿದ್ದು, ಪ್ರತಿನಿತ್ಯ ನಾರ್ಮಲ್ ಟೀ ಬದಲು ಈ ಗುಲಾಬಿ ಹೂವಿನ ಚಹಾವನ್ನು ಕುಡಿಯುವ ಮೂಲಕ ತೂಕ ಇಳಿಕೆಯಿಂದ ಹಿಡಿದು ಹೃದಯದ ಆರೋಗ್ಯದ ವರೆಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಗುಲಾಬಿ ಹೂವಿನ ಚಹಾದ ಪ್ರಯೋಜನಗಳು:
ತೂಕ ಇಳಿಕೆಗೆ ಸಹಕಾರಿ: ಗುಲಾಬಿ ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಚರ್ಮದ ಹೊಳಪು ಹೆಚ್ಚಿಸಲು ಸಹಕಾರಿ: ಗುಲಾಬಿಯಲ್ಲಿ ಇರುವ ವಿಟಮಿನ್ ಸಿ ಚರ್ಮವು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಇದು ಚರ್ಮವನ್ನು ಬಿಗಿಯಾಗಿಸುತ್ತದೆ ಮತ್ತು ಯಂಗ್ ಆಗಿ ಕಾಣುವಂತೆ ಮಾಡುತ್ತದೆ. ಅಲ್ಲದೆ ಗುಲಾಬಿ ಚಹಾವನ್ನು ಕುಡಿಯುವುದರಿಂದ ಮುಖದ ಮೇಲಿನ ಕಲೆಗಳು ಕಡಿಮೆಯಾಗುತ್ತವೆ. ಮತ್ತು ಮುಖದ ಹೊಳಪು ಹೆಚ್ಚಾಗುತ್ತದೆ.
ಒತ್ತಡ ಕಡಿಮೆ ಮಾಡಲು ಸಹಕಾರಿ: ಗುಲಾಬಿ ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಬಿಡುವಿಲ್ಲದ ಜೀವನಶೈಲಿಯಲ್ಲಿ ಒತ್ತಡದಿಂದ ಮುಕ್ತರಾಗಲು ಬಯಸಿದರೆ ನೀವು ಪ್ರತಿನಿತ್ಯ ಗುಲಾಬಿ ಟೀ ಕುಡಿಯಿರಿ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ಗುಲಾಬಿ ಚಹಾ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ರೋಸ್ ಟೀಯಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳಿದ್ದು, ಇದು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ದೇಹವನ್ನು ಬಾಹ್ಯ ಸೋಂಕುಗಳಿಂದ ರಕ್ಷಿಸುತ್ತದೆ ಮತ್ತು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ: ಗುಲಾಬಿ ಚಹಾ ಸೇವಿಸುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯು ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಗುಲಾಬಿ ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯವನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ: ಬೆಳ್ಳುಳ್ಳಿ ಜೊತೆಗೆ ಜೇನುತುಪ್ಪ ಬೆರೆಸಿ ಸೇವನೆ ಮಾಡಿದರೆ ಏನಾಗುತ್ತೆ ಎಂಬುದು ತಿಳಿದಿದೆಯೇ?
ಗುಲಾಬಿ ಚಹಾ ತಯಾರಿಸುವುದು ಹೇಗೆ:
ಮೊದಲಿಗೆ ಒಂದು ಕಪ್ ನೀರು ಕುದಿಸಿ. ಅದಕ್ಕೆ ಸ್ವಲ್ಪ ಒಣಗಿದ ಗುಲಾಬಿ ದಳಗಳನ್ನು ಸೇರಿಸಿ, 5-7 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಈ ಚಹಾವನ್ನು ಫಿಲ್ಟರ್ ಮಾಡಿ ಬಿಸಿಯಾಗಿ ಕುಡಿಯಿರಿ. ನೀವು ಇದಕ್ಕೆ ಜೇನುತುಪ್ಪ ಅಥವಾ ನಿಂಬೆ ರಸವನ್ನು ಕೂಡ ಸೇರಿಸಬಹುದು.
ಗಮನಿಸಬೇಕಾದ ವಿಷಯಗಳಿವು:
ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ಗುಲಾಬಿ ಚಹಾ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಜೊತೆಗೆ ಕೆಲವರಿಗೆ ಗುಲಾಬಿ ಅಲರ್ಜಿ ಇರಬಹುದು, ಆದ್ದರಿಂದ ಅದನ್ನು ಬಳಸುವ ಮೊದಲು ಪ್ಯಾಚ್ ಪರೀಕ್ಷೆ ಮಾಡುವುದು ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








