AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಹೃದಯಾಘಾತದಿಂದ ಸರಣಿ ಸಾವು: ತಜ್ಞರ ಅಂತಿಮ ವರದಿಯಲ್ಲಿದೆ ಮಹತ್ವದ ಮಾಹಿತಿ

ಹಾಸನ ಮತ್ತು ಇತರ ಜಿಲ್ಲೆಗಳಲ್ಲಿ ಹೃದಯಾಘಾತದಿಂದ ಆಗುತ್ತಿರುವ ಸರಣಿ ಸಾವುಗಳ ಕಾರಣ ಪತ್ತೆಹಚ್ಚಲು ಸರ್ಕಾರ ಸಮಿತಿ ರಚಿಸಿತ್ತು. ಈ ತಾಂತ್ರಿಕ ಸಮಿತಿ ಪ್ರಾಥಮಿಕ ವರದಿ ಈ ಮೊದಲೇ ಸಲ್ಲಿಕೆಯಾಗಿದ್ದು ಕೋವಿಡ್-19 ಲಸಿಕೆಗೂ ಹಠಾತ್ ಆಗಿ ಕಂಡು ಬರುತ್ತಿರುವ ಹೃದಯ ಸಂಬಂಧಿ ಸಾವುಗಳಿಗೂ ಸಂಬಂಧವಿಲ್ಲ ಎಂಬುದು ತಿಳಿದು ಬಂದಿತ್ತು. ಇದೀಗ ತಜ್ಞರ ಸಮಿತಿಯ ಅಂತಿಮ ವರದಿಯೂ ಸಲ್ಲಿಕೆಯಾಗಿದೆ. ಹಾಗಾದರೆ ಈ ವರದಿಯಲ್ಲಿ ಏನಿದೆ? ತಜ್ಞರ ಪ್ರಕಾರ ಹೃದಯಾಘಾತಕ್ಕೆ ಮುಖ್ಯ ಕಾರಣಗಳು ಏನಿರಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾಸನದಲ್ಲಿ ಹೃದಯಾಘಾತದಿಂದ ಸರಣಿ ಸಾವು: ತಜ್ಞರ ಅಂತಿಮ ವರದಿಯಲ್ಲಿದೆ ಮಹತ್ವದ ಮಾಹಿತಿ
ಪ್ರಾತಿನಿಧಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
|

Updated on:Jul 15, 2025 | 5:02 PM

Share

ಇತ್ತೀಚಿಗೆ ಹೃದಯಾಘಾತದಿಂದ ಮರಣ ಅಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಮಾತ್ರವಲ್ಲ ಹಾಸನ (Hassan heart attack) ಮತ್ತು ಇತರ ಜಿಲ್ಲೆಗಳಲ್ಲಿ ಹೃದಯಾಘಾತದಿಂದ ಆಗುತ್ತಿರುವ ಸರಣಿ ಸಾವುಗಳು ಕೂಡ ಜನರ ನಿದ್ದೆಗೆಡಿಸಿದೆ. ಈ ಸಂಬಂಧವಾಗಿ ಕರ್ನಾಟಕ ಸರ್ಕಾರ ಕೂಡ ಸಾವಿನ ತನಿಖೆಗೆ ತಜ್ಞರ ಸಮಿತಿ ರಚಿಸಿತ್ತು. ಹೃದಯಾಘಾತದ (heart attack) ಬಗ್ಗೆ ತಾಂತ್ರಿಕ ಸಮಿತಿ ಮಂಡಿಸಿರುವ ಪ್ರಾಥಮಿಕ ವರದಿ ಈಗಾಗಲೇ ಸಲ್ಲಿಕೆಯಾಗಿದ್ದು, ಇದೀಗ ಈ ಬಗ್ಗೆ ಆಳವಾದ ಅಧ್ಯಯನ ನಡೆದು ಅಂತಿಮ ವರದಿ ಸಿದ್ದಗೊಂಡಿದೆ. ಅದರ ಪ್ರಕಾರವಾಗಿ ಕೋವಿಡ್-19 ಲಸಿಕೆಗೂ ಹಠಾತ್ ಆಗಿ ಕಂಡು ಬರುತ್ತಿರುವ ಹೃದಯ ಸಂಬಂಧಿ ಸಾವುಗಳಿಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಕೋವಿಡ್-19 ಲಸಿಕೆಯಿಂದ ಹಲವು ಅಡ್ಡಪರಿಣಾಮಗಳಿವೆ ಎನ್ನುವ ಆರೋಪ ಕೇಳಿಬರುತ್ತಿರುವ ಈ ಸಮಯದಲ್ಲಿ ಈ ಸಂಶೋಧನೆ ಜನರ ಅನುಮಾನಗಳಿಗೆ ತೆರೆ ಎಳೆದಿದೆ. ಮಾತ್ರವಲ್ಲ ಈ ಅಧ್ಯಯನದಿಂದ ಹೃದಯಾಘಾತಕ್ಕೆ ಸಂಬಂಧಿಸಿದ ಕೆಲವು ಶಾಕಿಂಗ್ ಅಂಶ ಕೂಡ ಪತ್ತೆ ಆಗಿದೆ.

ಕಳೆದ ಮೂರು ವರ್ಷಗಳಿಂದಲೂ ಕೋವಿಡ್-19 ಲಸಿಕೆಯಿಂದ ಹಲವು ಅಡ್ಡಪರಿಣಾಮಗಳಿವೆ ಎನ್ನುವ ಆರೋಪ ಕೇಳಿಬರುತ್ತಲೇ ಇದೆ. ಅದಲ್ಲದೆ ಇತ್ತೀಚಿಗೆ ಯುವಕರು ಮತ್ತು ಯುವತಿಯರು ಸಾವನ್ನಪ್ಪಿದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಐಸಿಎಂಆರ್ ಕೂಡ ಅಧ್ಯಯನ ನಡೆಸಿತ್ತು. ಅದರ ಪ್ರಕಾರ ಅಸಹಜ ಸಾವುಗಳು ಕೋವಿಡ್ ಲಸಿಕೆಯಿಂದ ಸಂಭವಿಸಿದ್ದಲ್ಲ. ಲಸಿಕೆ ಪಡೆದವರಲ್ಲಿ ಇಂಥ ಸಾವು ಸಂಭಾವ್ಯತೆ ಕಡಿಮೆ ಇರುವುದು ಕಂಡುಬಂದಿತ್ತು. ಇದೀಗ ಸರ್ಕಾರ ನಡೆಸಿದ ಅಧ್ಯಯನದಿಂದಲೂ ಅದೇ ರೀತಿಯ ವರದಿ ಬಂದಿದೆ. ಆದರೆ ಈ ವರದಿಯಲ್ಲಿ ಹೃದಯ ಸಂಬಂಧಿ ಸಾವುಗಳು ಹೆಚ್ಚುತ್ತಿರುವುದಕ್ಕೆ ಕೆಲವು ಸಂಭಾವ್ಯ ಕಾರಣಗಳನ್ನು ಕೂಡ ಪಟ್ಟಿ ಮಾಡಿದೆ.

ಸಂಶೋಧನೆಯಿಂದ ತಿಳಿದು ಬಂದಂತಹ ಪ್ರಮುಖ ಅಂಶಗಳು;

  • ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಧೂಮಪಾನದಂತಹ ಅಪಾಯಕಾರಿ ಅಂಶಗಳು ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗಬಹುದಾದರೂ ಕೂಡ ಕೆಲವು ರೋಗಿಗಳಿಗೆ ಇವುಗಳಲ್ಲಿ ಯಾವ ಸಮಸ್ಯೆಯೂ ಕಂಡುಬಂದಿಲ್ಲ.
  • ಕೋವಿಡ್-19 ಲಸಿಕೆ ಮತ್ತು ಹಠಾತ್ ಆಗಿ ಕಂಡುಬರುತ್ತಿರುವ ಹೃದಯ ಸಂಬಂಧಿ ಘಟನೆಗಳ ನಡುವೆ ಯಾವುದೇ ರೀತಿಯ ಸಂಬಂಧ ಕಂಡುಬಂದಿಲ್ಲ.
  • ಕೋವಿಡ್ ವ್ಯಾಕ್ಸಿನೇಷನ್ ನಮಗೆ ದೀರ್ಘಾವಧಿಯಲ್ಲಿ ಕಂಡು ಬರುವಂತಹ ನಾನಾ ರೀತಿಯ ಹೃದಯ ಸಂಬಂಧಿ ಸಮಸ್ಯೆಗಳ ವಿರುದ್ಧ ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತದೆ ಆ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
  • ಹೃದಯಾಘಾತ ಹೆಚ್ಚುತ್ತಿರುವುದಕ್ಕೆ ಅವರ ಜೀವನಶೈಲಿ ಅಥವಾ ಅವರು ರೂಢಿಸಿಕೊಂಡಿರುವಂತಹ ಅಭ್ಯಾಸಗಳು, ಕುಟುಂಬದ ಹಿನ್ನಲೆ ಮತ್ತು ಪರಿಸರ ಅಪಾಯ ಸೇರಿದಂತೆ ಬಹು ಅಂಶಗಳಿಂದ ಕೂಡಿದೆ.

ಸಂಶೋಧನೆ ನಡೆದಿದ್ದು ಹೇಗೆ?

ಈ ಸಂಶೋಧನೆಯನ್ನು ಕೊರೋನರಿ ಆರ್ಟರಿ ಡಿಸೀಸ್ (CAD) ಇರುವ 251 ರೋಗಿಗಳ ಮೇಲೆ ನಡೆಸಲಾಗಿದ್ದು. 30 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ 12 ರೋಗಿಗಳು, 31- 40 ವರ್ಷ ವಯಸ್ಸಿನ 66 ರೋಗಿಗಳು ಮತ್ತು 41-45 ವರ್ಷ ವಯಸ್ಸಿನ 172 ರೋಗಿಗಳನ್ನು ಅಧ್ಯಯನ ಮಾಡಲಾಗಿದೆ. ಇವರಲ್ಲಿ ಹೆಚ್ಚಿನವರು ಪುರುಷರಾಗಿದ್ದು (218) 124 ಜನ ಬೆಂಗಳೂರು ನಗರದವರಿದ್ದಾರೆ. ಇವರಲ್ಲಿ ಮಧುಮೇಹ (87), ಅಧಿಕ ರಕ್ತದೊತ್ತಡ (102), ಧೂಮಪಾನ (111), ಮತ್ತು ಕೊಲೆಸ್ಟ್ರಾಲ್ ಅಸ್ವಸ್ಥತೆ (35) – ಸೇರಿದಂತೆ ಸಾಮಾನ್ಯ ಅಪಾಯಕಾರಿ ಅಂಶಗಳು ಇರುವವರಿದ್ದಾರೆ. ಅದಲ್ಲದೆ ಇವರಲ್ಲಿ 19 ರೋಗಿಗಳು COVID-19 ಸೋಂಕಿನ ಇತಿಹಾಸವನ್ನು ಹೊಂದಿದ್ದು 249 ಜನರು COVID-19 ಲಸಿಕೆಯನ್ನು ಪಡೆದವರಾಗಿದ್ದಾರೆ.

ಇದನ್ನೂ ಓದಿ
Image
ಹಾಸನದ ಹೃದಯಾಘಾತದ ಪ್ರಾಥಮಿಕ ವರದಿ ಸಿದ್ಧ: ಇದುವೇ ಕಾರಣ ಅಂತಿದ್ದಾರೆ ತಜ್ಞರು
Image
ಹಾಸನ ಹೃದಯಾಘಾತಗಳಿಗೆ ಕೋವಿಡ್ ಕಾರಣವಾ?
Image
ಹಾಸನ: ಹೃದಯಾಘಾತಕ್ಕೆ ಒಂದೇ ದಿನ 3 ಬಲಿ, 40 ದಿನಗಳಲ್ಲಿ 22 ಸಾವು
Image
ಡಾ.ಮಂಜುನಾಥ್​ ದಿಟ್ಟ ಹೆಜ್ಜೆ: ರಾಜ್ಯದ ಹೃದಯಾಘಾತ ಕೇಸ್​​ ಮೋದಿ ಅಂಗಳಕ್ಕೆ

ಇದನ್ನೂ ಓದಿ: ಹಾಸನದ ಹೃದಯಾಘಾತದ ಪ್ರಾಥಮಿಕ ವರದಿ ಸಿದ್ಧ: ಇದುವೇ ಮುಖ್ಯ ಕಾರಣ ಅಂತಿದ್ದಾರೆ ತಜ್ಞರು!

ನಿಮ್ಹಾನ್ಸ್ (NIMHANS) ವರದಿಯಲ್ಲೇನಿದೆ?

ಬೆಂಗಳೂರಿನ ನಿಮ್ಹಾನ್ಸ್, ಕೋವಿಡ್-19 ಸಮಯದಲ್ಲಿ ನರವೈಜ್ಞಾನಿಕ ಕಾಯಿಲೆಗಳಿಂದ ಬಳಲುತ್ತಿರುವ 3200 ರೋಗಿಗಳ ಮೇಲೆ ಅಧ್ಯಯನ ನಡೆಸಿದ್ದು ಇವರಲ್ಲಿ 3.75% ರೋಗಿಗಳಲ್ಲಿ ನರವೈಜ್ಞಾನಿಕ ಅಸ್ವಸ್ಥತೆಗಳ ಜೊತೆಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಸಾಮಾನ್ಯ ನರವೈಜ್ಞಾನಿಕ ಲಕ್ಷಣಗಳಲ್ಲಿ ಪಾರ್ಶ್ವವಾಯು, ಎನ್ಸೆಫಲೋಪತಿ (ಮೆದುಳಿನ ರೋಗ) ಮತ್ತು ಡಿಮೈಲೀನೇಶನ್ (ನರಗಳ ಸುತ್ತಲಿನ ರಕ್ಷಣಾತ್ಮಕ ಪದರವಾದ ಮೈಲಿನ್ ಹಾನಿಗೊಳಗಾಗುವುದು) ಸೇರಿವೆ. ಮಾತ್ರವಲ್ಲ ಕೋವಿಡ್-19 ವ್ಯಾಕ್ಸಿನೇಷನ್ ಕೆಲವು ವ್ಯಕ್ತಿಗಳಲ್ಲಿ ಡಿಮೈಲಿನೇಷನ್‌ನಂತಹ ಅಪರೂಪದ ನರವೈಜ್ಞಾನಿಕ ಸಮಸ್ಯೆಗಳಿಗೆ ಸಂಬಂಧಿಸಿದೆ. ಆದರೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಲಸಿಕೆಗಳು ಒಟ್ಟಾರೆಯಾಗಿ ಪ್ರಯೋಜನಕಾರಿಯಾಗಿರುವುದು ಗಮನಾರ್ಹ ವಿಷಯವಾಗಿದೆ. ಹಾಗಾಗಿ ದೀರ್ಘಕಾಲೀನ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂಬುದನ್ನು ಈ ಅಧ್ಯಯನ ತಿಳಿಸಿದೆ. ಹಾಗಾಗಿ ಈ ಸಂಶೋಧನೆಯಿಂದಲೂ ಅಸಹಜ ಸಾವುಗಳು ಕೋವಿಡ್ ಲಸಿಕೆಯಿಂದ ಸಂಭವಿಸಿದ್ದಲ್ಲ ಎಂಬುದು ದೃಢವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Tue, 15 July 25