ಕಳೆದ 3 ವರ್ಷಗಳಲ್ಲಿ ಹೃದಯಾಘಾತದ ಸಾವುಗಳಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದ ಇತ್ತೀಚಿನ ಮಾಹಿತಿಯು 2022ರಲ್ಲಿ ಹೃದಯಾಘಾತ ಪ್ರಕರಣಗಳಲ್ಲಿ ಶೇ. 12.5ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಬಹಿರಂಗಪಡಿಸಿದೆ. 2022ರಲ್ಲಿ 32,457 ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ಎನ್‌ಸಿಆರ್‌ಬಿಯ ಇತ್ತೀಚಿನ ‘ಭಾರತದಲ್ಲಿ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆಗಳು’ ವರದಿ ಸೂಚಿಸಿದೆ. ಹಿಂದಿನ ವರ್ಷದಲ್ಲಿ ದಾಖಲಾದ 28,413 ಸಾವುಗಳಿಗೆ ಹೋಲಿಸಿದರೆ ಈ ಬಾರಿ ಬಹಳ ಹೆಚ್ಚಾಗಿದೆ.
ಹೃದಯದ ಆರೋಗ್ಯದ ಸಮಸ್ಯೆಗೆ ಕೊವಿಡ್-19 ಅಡ್ಡಪರಿಣಾಮವೂ ಕಾರಣವಿರಬಹುದು ಎಂದು ತಜ್ಞರು ಒಪ್ಪಿಕೊಂಡಿದ್ದಾರೆ. ನೊಯ್ಡಾದ ಫೋರ್ಟಿಸ್ ಆಸ್ಪತ್ರೆಯ ಕಾರ್ಡಿಯಾಲಜಿ ನಿರ್ದೇಶಕ ಮತ್ತು ಎಚ್‌ಒಡಿ ಡಾ. ಸಂಜೀವ್ ಗೇರಾ ಈ ಬಗ್ಗೆ ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ಮಾಹಿತಿ ನೀಡಿದ್ದು, ಭಾರತದಲ್ಲಿ ಹೆಚ್ಚಿನ ಜನರು ಹೃದಯಾಘಾತದಿಂದ ಬಳಲುತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು 25ರಿಂದ 45 ವರ್ಷ ವಯಸ್ಸಿನವರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 30 ವರ್ಷವಾದ ಬಳಿಕ ಹೃದ್ರೋಗದಿಂದ ಪಾರಾಗಲು ಈ 3 ಟೆಸ್ಟ್ ಮಾಡಿಸಲು ಮರೆಯಬೇಡಿ
ತಜ್ಞರ ಪ್ರಕಾರ, ಹೆಚ್ಚಿನ ಮಹಿಳೆಯರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಡಾ. ಗೇರಾ ಪ್ರಕಾರ, ಕೋವಿಡ್-19 ಸಾಂಕ್ರಾಮಿಕವು ಜನರ ಜೀವನಶೈಲಿಯ ಮೇಲೆ ಪರಿಣಾಮ ಬೀರಿತು. ಇದು ಹೃದಯದ ಕಾಯಿಲೆಗಳನ್ನು ಹೆಚ್ಚಿಸುವ ನಿಷ್ಕ್ರಿಯತೆಯನ್ನು ಹೆಚ್ಚಿಸಿತು. ಉಪ್ಪಿನಂಶವಿರುವ ಆಹಾರ, ಧೂಮಪಾನ, ಹೆಚ್ಚಿದ ಒತ್ತಡ, ನಿಷ್ಕ್ರಿಯ ಜೀವನಶೈಲಿ, ನಿದ್ರಾಹೀನತೆ ಮತ್ತು ಸಂಸ್ಕರಿಸಿದ ತಿಂಡಿಗಳು ಕೊವಿಡ್ ಸಾಂಕ್ರಾಮಿಕ ರೋಗದ ನಂತರ ಜನರು ಹೃದಯಾಘಾತವನ್ನು ಅನುಭವಿಸುವ ಅಪಾಯವನ್ನು ಹೆಚ್ಚಿಸಿವೆ ಎಂದು ಡಾ. ಸಂಜೀವ್ ಗೇರಾ ಹೇಳಿದ್ದಾರೆ.
ಕೊರೊನಾ ಶುರುವಾದ ಬಳಿಕ ಸುಮಾರು 2ರಿಂದ ಎರಡೂವರೆ ವರ್ಷಗಳ ಕಾಲ ನಾವು ಜಡಜೀವನಶೈಲಿಯನ್ನು ರೂಢಿಸಿಕೊಂಡಿದ್ದೇವೆ. ಕುರ್ಚಿಗೆ ಅಂಟಿಕೊಂಡು, ಮನೆಯೊಳಗೇ ಇರುವುದನ್ನು ರೂಢಿಸಿಕೊಂಡಿದ್ದೇವೆ. ಜೊತೆಗೆ ನಮ್ಮ ಕೆಟ್ಟ ಆಹಾರದ ಆಯ್ಕೆಗಳು, ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ ಅಥವಾ ವ್ಯಾಯಾಮದ ಕೊರತೆಯು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಡಾ. ಗೇರಾ ಹೇಳಿದ್ದಾರೆ.
ಇದನ್ನೂ ಓದಿ: ಯಾವ ರೀತಿಯ ಎದೆನೋವು ಅಪಾಯಕಾರಿ? ಹೃದಯದ ತೊಂದರೆಯೆಂದು ತಿಳಿಯೋದು ಹೇಗೆ?
ಹೃದಯಾಘಾತ ಹೆಚ್ಚಳಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ ಜೆನೆಟಿಕ್ಸ್. “ಭಾರತೀಯರಾದ ನಾವು ಕೆಟ್ಟ ಜೆನೆಟಿಕ್ಸ್ ಅನ್ನು ಹೊಂದಿದ್ದೇವೆ. ಹೆಚ್ಚಿನ ಕೊಲೆಸ್ಟ್ರಾಲ್, ಅಧಿಕ ಸಕ್ಕರೆ, ಅಧಿಕ ರಕ್ತದೊತ್ತಡ, ಬೊಜ್ಜು, ಧೂಮಪಾನ, ನಿಷ್ಕ್ರಿಯ ಜೀವನಶೈಲಿ ಮುಂತಾದ ಅಪಾಯಕಾರಿ ಅಂಶಗಳಿಂದ ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ