ಲೋಕದ ಚಿಂತೆ ಇಲ್ಲದೆ ಪ್ರಕೃತಿಯ ಜೊತೆಗೆ ಸಮಯ ಕಳೆಯಲು ಜಪಾನ್‌ನ ಈ ಮಾದರಿಯನ್ನು ಟ್ರೈ ಮಾಡಿ ನೋಡಿ
ಫಾರೆಸ್ಟ್ ಬಾತಿಂಗ್: ಲೋಕದ ಚಿಂತೆ ಇಲ್ಲದೆ ಪ್ರಕೃತಿಯ ಜೊತೆಗೆ ಸಂಪೂರ್ಣವಾಗಿ ಬೆರೆಯುವುದನ್ನು ಫಾರೆಸ್ಟ್ ಬಾತಿಂಗ್ ಎನ್ನಲಾಗುತ್ತದೆ. ಇದೊಂದು ಸರಳ ಮತ್ತು ಪರಿಣಾಮಕಾರಿ ವಿಧಾನವಾಗಿದ್ದು ಅಸ್ತಮಾ ಸೇರಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ. ಯಾವುದೇ ಗ್ಯಾಜೆಟ್ಸ್ಗಳ ಬಳಕೆ ಇಲ್ಲದೆ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೀವು ಕೂಡ ಇದನ್ನು ಟ್ರೈ ಮಾಡಿ ನೋಡಬಹುದು.

ನಗರಗಳಲ್ಲಿನ ಅತಿಯಾದ ಮಾಲಿನ್ಯದಿಂದಾಗಿ ಜನರು ಇಂದು ಹತ್ತು ಹಲವು ಆರೋಗ್ಯ (Health) ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಉಸಿರಾಟದ ಸಮಸ್ಯೆ ಮತ್ತು ರೋಗ ನಿರೋಧಕ ಶಕ್ತಿಯಂತಹ ಪ್ರಕರಣಗಳೇ ಅತೀ ಹೆಚ್ಚಾಗಿ ಕಾಣಸಿಗುತ್ತಿವೆ. ಮಿತಿ ಮೀರಿದ ವಾಯು ಮಾಲಿನ್ಯದಿಂದಾಗಿ ಅಸ್ತಮಾ ಸೇರಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ನಗರವಾಸಿಗಳಲ್ಲಿ ಹೆಚ್ಚಾಗುತ್ತಿವೆ. ಇಂತಹ ಸಮಸ್ಯೆಗಳಿಂದ ಬಳಲುವವರಿಗೆ ಜಪಾನ್‌ನ ಸಂಪ್ರದಾಯ ವೊಂದು ಇವತ್ತಿಗೂ ಪವರ್‌ಫುಲ್ ಔಷಧಿಯಾಗಿದೆ. ಇದನ್ನು ಶಿಂರಿನ್ ಯೋಕು (Shinrin- yoku) ಅಥವಾ ಫಾರೆಸ್ಟ್ ಬಾತಿಂಗ್ (forest bathing) ಎಂದು ಕರೆಯಲಾಗುತ್ತೆ. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.
ಫಾರೆಸ್ಟ್ ಬಾತಿಂಗ್ ಎಂದರೇನು?
ಫಾರೆಸ್ಟ್ ಬಾತಿಂಗ್ ಎಂದರೆ ಯಾವುದಾದರೂ ಕೆರೆ, ಹೊಳೆ, ನದಿಗಳಲ್ಲಿ ಸ್ನಾನ ಮಾಡುವುದು ಅಥವಾ ಗುಡ್ಡ ಪರ್ವತಗಳನ್ನ ಏರುವುದು ಎಂದರ್ಥವಲ್ಲ. ಉದ್ದೇಶ ಪೂರ್ವಕ, ಮನಃಪೂರ್ವಕವಾಗಿ ಕಾಡಿನ ಪ್ರದೇಶದಲ್ಲಿ ಸಮಯ ಕಳೆಯುವುದನ್ನು ಫಾರೆಸ್ಟ್ ಬಾತಿಂಗ್ ಎನ್ನಲಾಗುತ್ತದೆ. ದಟ್ಟಾರಣ್ಯದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತ, ಪ್ರಕೃತಿಯ ಸೌಂದರ್ಯ ಸವಿಯುವ ಜೊತೆಗೆ ನಿಸರ್ಗದ ಶಬ್ದವನ್ನು ಆಸ್ವಾದಿಸುವುದನ್ನ ಇದು ಒಳಗೊಂಡಿರಲಿದೆ. ಒಟ್ಟಾರೆ ಹೇಳುವುದಾದರೆ ಯಾವುದೇ ಗ್ಯಾಜೆಟ್ಸ್ಗಳ ಬಳಕೆ ಇಲ್ಲದೆ, ಲೋಕದ ಚಿಂತೆ ಇಲ್ಲದೆ ಪ್ರಕೃತಿಯ ಜೊತೆಗೆ ಸಂಪೂರ್ಣವಾಗಿ ಬೆರೆಯುವ ಪ್ರಕ್ರಿಯೆಯೇ ಫಾರೆಸ್ಟ್ ಬಾತಿಂಗ್.
ಪ್ರಯೋಜನಗಳೇನು?
ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿರಿಸಿ ಮಾನಸಿಕ ಒತ್ತಡ ಮತ್ತು ಗಂಭೀರ ಕಾಯಿಲೆಗಳ ತಡೆಗೆ 1980ರ ವೇಳೆಗೆ ಈ ಶಿಂರಿನ್ ಯೋಕು ಅಥವಾ ಫಾರೆಸ್ಟ್ ಬಾತಿಂಗ್ ಅನ್ನು ಜಪಾನ್ ಪರಿಚಯಿಸಿತು. ಅಂದಿನಿಂದ ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿದ್ದು, ಜಪಾನ್‌ನ ಈ ಸಂಪ್ರದಾಯದ ಫಲಿತಾಂಶ ಅತ್ಯುತ್ತಮ ಎಂಬುದೂ ಸಾಭೀತಾಗಿದೆ. ಕಾಡಿನಲ್ಲಿರುವ ಮರ ಗಿಡಗಳು Phytoncides ಬಿಡುಗಡೆ ಮಾಡಲಿದ್ದು, ಇವು ದೇಹದಲ್ಲಿನ ನ್ಯಾಚುರಲ್ ಕಿಲ್ಲರ್ ಸೆಲ್‌ಗಳ ಕಾರ್ಯಕ್ಷಮತೆಯನ್ನ ಹೆಚ್ಚಸಲಿದ್ದು, ಇದು ಸೋಂಕು ಮತ್ತು ಕ್ಯಾನ್ಸರ್ ಸೆಲ್‌ಗಳ ವಿರುದ್ಧವೂ ದೇಹದ ಹೋರಾಟಕ್ಕೆ ನೆರವಾಗಲಿದೆ. ಕಾಡಿನಲ್ಲಿನ ಶುದ್ಧ ಗಾಳಿಯು ಶ್ವಾಸಕಾಂಗ ವ್ಯವಸ್ಥೆಯ ಆರೋಗ್ಯ ಸುಧಾರಿಸಲಿದ್ದು, ಶ್ವಾಸಕೋಶ ಉತ್ತಮವಾಗಿ ಕೆಲಸ ನಿರ್ವಹಿಸಲೂ ನೆರವಾಗಲಿದೆ. ವಿಶೇಷವಾಗಿ ಅಸ್ತಮಾ, ಸಿಒಪಿಡಿ ಮತ್ತು ಇತರ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಈ ಫಾರೆಸ್ಟ್ ಬಾತಿಂಗ್ ಉತ್ತಮ ಚಿಕಿತ್ಸೆ ಎಂಬುದು ಸಾಭೀತಾಗಿದೆ.
ಇದನ್ನೂ ಓದಿ: ಇಡೀ ದಿನದ ಆಯಾಸದ ಬಳಿಕ ಒತ್ತಡವನ್ನು ನಿವಾರಿಸುವ 8 ಸುಲಭ ಮಾರ್ಗಗಳಿವು
ಈ ಫಾರೆಸ್ಟ್ ಬಾತಿಂಗ್‌ಗೆ ನೀವು ಎಲ್ಲೋ ದಟ್ಟವಾದ ಕಾಡು ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯತೆ ಇಲ್ಲ. ಉತ್ತಮವಾದ ಹಸಿರುಮಯ ವಾತಾವರಣ ಹೊಂದಿರುವ ಪಾರ್ಕ್ ಅಥವಾ ಗಾರ್ಡನ್‌ಗಳೂ ಅರಣ್ಯಗಳು ನೀಡಬಹುದಾದ ಫಲಿತಾಂಶವನ್ನೇ ನೀಡಲಿವೆ. ವಾರದಲ್ಲಿ ಕನಿಷ್ಠ 2-3 ದಿನ 20- 30 ನಿಮಿಷಗಳ ಕಾಲವನ್ನ ಇಂತಹ ಪ್ರದೇಶಗಳಲ್ಲಿ ನೀವು ಕಳೆದರೆ ಫಾರೆಸ್ಟ್ ಬಾತಿಂಗ್‌ನ ಪ್ರಯೋಜನದ ಅರಿವು ನಿಮಗಾಗಲಿದೆ ಅನ್ನೋದು ತಜ್ಞರ ಮಾತು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








