Home Remedies For Bloating: ಊಟದ ನಂತರ ಹೊಟ್ಟೆ ಉಬ್ಬುತ್ತದೆಯೇ? ಈ ಸಮಸ್ಯೆಗೆ ಇಲ್ಲಿದೆ 5 ಮನೆಮದ್ದು
ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಡಯೆಟಿಷಿಯನ್ ಮನ್‌ಪ್ರೀತ್ ಕಲ್ರಾ ಅವರು ನೀವು ಮನೆಯಲ್ಲಿಯೇ ಪ್ರಯತ್ನಿಸಬಹುದಾದ 5 ಸರಳ ಪರಿಹಾರಗಳನ್ನು ಸೂಚಿಸಿದ್ದಾರೆ.
ಊಟ ಮಾಡಿದ ನಂತರ ಹೊಟ್ಟೆ ಉಬ್ಬುವಿಕೆ ಹಾಗೂ ಇತರ ಹೊಟ್ಟೆಯ ಅಸ್ವಸ್ಥತೆಗಳು ಸಾಮಾನ್ಯ ಸಮಸ್ಯೆಗಳಾಗಿವೆ. ಈ ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಡಯೆಟಿಷಿಯನ್ ಮನ್‌ಪ್ರೀತ್ ಕಲ್ರಾ ಅವರು ನೀವು ಮನೆಯಲ್ಲಿಯೇ ಪ್ರಯತ್ನಿಸಬಹುದಾದ 5 ಸರಳ ಪರಿಹಾರಗಳನ್ನು ಸೂಚಿಸಿದ್ದಾರೆ.ಸಾಮಾನ್ಯವಾಗಿ ಊಟ ಸೇವನೆಯ ನಂತರ ಹೊಟ್ಟೆ ಉಬ್ಬುವುದು ಅಥವಾ ಗ್ಯಾಸ್ ಆಗುವುದು ಹೆಚ್ಚಿನವರಿಗೆ ಈ ಸಮಸ್ಯೆ ಇದೆ. ಈ ಒತ್ತಡದ ಜೀವನ ಶೈಲಿಯಲ್ಲಿ ಆರೋಗ್ಯಕರ ಆಹಾರಕ್ರಮಗಳನ್ನು ಪಾಲಿಸಲು ನಾವು ಕಷ್ಟಪಡುತ್ತೇವೆ. ಸಮಯಕ್ಕೆ ಸರಿಯಾಗಿ ತಿನ್ನಲು ಆಗುವುದಿಲ್ಲ. ಹಾಗೂ ಆಹಾರಗಳನ್ನು ಸರಿಯಾಗಿ ಜಗಿಯದೆ ತಿನ್ನುತ್ತೇವೆ. ಇದರ ಪರಿಣಾಮವಾಗಿ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಹೊಟ್ಟೆಯ ಸಮಸ್ಯೆಗಳು ನಮಗೆ ಅನಾನುಕೂಲವನ್ನು ಉಂಟು ಮಾಡುವುದು ಮಾತ್ರವಲ್ಲದೆ ದೀರ್ಘಾವಧಿಯಲ್ಲಿ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಊಟದ ನಂತರ ಹೊಟ್ಟೆ ಉಬ್ಬುವಿಕೆಯ ಸಮಸ್ಯೆಗಳಿಗೆ ಡಯೆಟಿಷಿಯನ್ ಮನ್‌ಪ್ರೀತ್ ಕಲ್ರಾ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಸರಳ ಮನೆಮದ್ದುಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಹೊಟ್ಟೆ ಉಬ್ಬುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುವ 5 ಪಾನೀಯಗಳು:
ಜೀರಿಗೆ ಮತ್ತು ಅಜ್ವಾನ ನೀರು: ಮನ್‌ಪ್ರೀತ್ ಅವರ ಪ್ರಕಾರ ಈ ಮಿಶ್ರಣವು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಸಂಯುಕ್ತಗಳನ್ನು ಒಳಗೊಂಡಿದೆ, ಇದು ಹೊಟ್ಟೆಯ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ಅಜೀರ್ಣ, ಆಸಿಡಿಟಿಗೆ ಚಿಕಿತ್ಸೆ ನೀಡಲು ಈ ಒಂದು ಮನೆಮದ್ದನ್ನು ಹಿಂದಿನಿಂದಲೂ ಬಳಸಲಾಗುತ್ತದೆ. ನೀವು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ 1-4 ಟೀಸ್ಪೂನ್ ಜೀರಿಗೆ ಮತ್ತು 1-4 ಅಜ್ವಾನ ಸೇರಿಸಿ ಕುಡಿಯಿರಿ.
ಸೋಂಪು ಕಾಳಿನ ನೀರು: ಈ ಪಾನೀಯವು ಥೈಮೋಲ್‌ನ್ನು ಹೊಂದಿರುತ್ತದೆ ಮತ್ತು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹಾಗೂ ಈ ಸೋಂಪು ಕಾಳುಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಕೆಲವು ಚಮಚ ಸೋಂಪುಕಾಳುಗಳನ್ನು ಪುಡಿ ಮಾಡಿ. ನಂತರ 1-2 ಟೀಸ್ಪೂನ್ ಈ ಪುಡಿಯನ್ನು ಒಂದು ಲೋಟ ಬೆಚ್ಚಗಿನ ನೀರಿಗೆ ಸೇರಿಸಿ ಸೇವನೆ ಮಾಡಿ.
ನಿಂಬೆ ರಸ ಮತ್ತು ಕಲ್ಲು ಉಪ್ಪು: ಈ ಮಿಶ್ರಣದಲ್ಲಿರುವ ಸಿಟ್ರಿಕ್ ಆಮ್ಲವು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಮತ್ತು ಇದು ಹೊಟ್ಟೆ ಉಬ್ಬುವಿಕೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಕರುಳಿನ ಸೋಂಕನ್ನು ಕೂಡ ತಡೆಯುತ್ತದೆ. ಒಂದು ಲೋಟ ಬಿಸಿ ನೀರಿಗೆ 1 ಟೀಸ್ಪೂನ್ ನಿಂಬೆ ರಸ ಮತ್ತು ಒಂದು ಚಿಟಿಕೆ ಕಲ್ಲುಪ್ಪು ಸೇರಿಸಿ ಕುಡಿಯಿರಿ.
ಇದನ್ನೂ ಓದಿ: Home Remedies for Sore Throat: ಈ ಮನೆಮದ್ದುಗಳಿಂದ ಗಂಟಲು ನೋವು ಮಾಯವಾಗೋದು ಗ್ಯಾರಂಟಿ!
ಆಪಲ್ ಸೈಡರ್ ವಿನೆಗರ್ ಹಾಗೂ ನೀರಿನ ಮಿಶ್ರಣ: ಈ ಮಿಶ್ರಣವು ಹೊಟ್ಟೆಯ ಪಿಹೆಚ್‌ನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ 1 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಸೇವನೆ ಮಾಡಿ.
ಕೊಚ್ಚಿದ ಪುದೀನ ಎಲೆಗಳು ಹಾಗೂ ನೀರಿನ ಮಿಶ್ರಣ: ಈ ಪಾನೀಯವು ಹೊಟ್ಟೆಯಲ್ಲಿ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಪಿತ್ತರಸದ ಹರಿವನ್ನು ಸುಧಾರಿಸುತ್ತದೆ. ಹೀಗಾಗಿ ಗ್ಯಾಸ್ ಮತ್ತು ಉಬ್ಬುವಿಕೆಯನ್ನು ಈ ಪಾನೀಯವು ತಡೆಯುತ್ತದೆ. ಪುದೀನ ಕರುಳಿನ ಆರೋಗ್ಯಕ್ಕೆ ಉತ್ತಮವಾದ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣವನ್ನು ಹೊಂದಿದೆ. ಸ್ವಲ್ಪ ಕತ್ತರಿಸಿದ ಪುದೀನ ಎಲೆಗಳನ್ನು ಒಂದು ಲೋಟ ಬೆಚ್ಚಗಿನ ನೀರಿಗೆ ಸೇರಿಸಿ ಕುಡಿಯುವ ಮೂಲಕ ಹೊಟ್ಟೆ ಉಬ್ಬುವಿಕೆಯನ್ನು ತಡೆದಟ್ಟಬಹುದು.